Amazon, Future Group, and Reliance

 
A1
ಸುದ್ದಿಗಳು

[ಅಮೆಜಾನ್ ವರ್ಸಸ್ ಫ್ಯೂಚರ್] ಸಂಧಾನ ವಿಫಲ, ಫ್ಯೂಚರ್ ಆಸ್ತಿ ರಿಲಯನ್ಸ್ ಸ್ವಾಧೀನಕ್ಕೆ: ಸುಪ್ರೀಂ ಕೋರ್ಟ್‌ಗೆ ಮಾಹಿತಿ

ಫ್ಯೂಚರ್ ಕಂಪನಿಯ ಆಸ್ತಿ ಮತ್ತಿತರ ಸ್ವತ್ತನ್ನು ರಿಲಯನ್ಸ್ ಏಕೆ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ವಿವರಿಸಿದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ "ನಾವು ದಿವಾಳಿಯಾಗಿದ್ದೇವೆ, ನಮ್ಮ ಬಳಿ ಹಣ ಇಲ್ಲ" ಎಂದರು.

Bar & Bench

ಅಮೆಜಾನ್ ಮತ್ತು ಫ್ಯೂಚರ್ ಕಂಪನಿ ನಡುವಿನ ಮಾತುಕತೆ ವಿಫಲವಾಗಿದ್ದು ಫ್ಯೂಚರ್‌ ಆಸ್ತಿಯನ್ನು ರಿಲಯನ್ಸ್ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಫ್ಯೂಚರ್‌ ಪರ ವಕೀಲರು ತಿಳಿಸಿದ್ದಾರೆ.

2019ರಲ್ಲಿ ಫ್ಯೂಚರ್‌ ಕೂಪನ್ಸ್‌ ಜೊತೆಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಂಗಪೂರ್‌ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಲ್ಲಿನ‌ (ಎಸ್‌ಐಎಸಿ) ಪ್ರಕ್ರಿಯೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಅಮೆಜಾನ್‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠ ನಡೆಸಿತು.

ಇಂದು ಈ ಪ್ರಕರಣದ ವಿಚಾರಣೆ ನಡೆದಾಗ, ಅಮೆಜಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ, ಇಬ್ಬರೂ ಪಕ್ಷಕಾರರ ನಡುವಿನ ಮಧ್ಯಸ್ಥಿಕೆಯಲ್ಲಿ ಯಾವುದೇ ಪ್ರಗತಿಯಿಲ್ಲ ಎಂದು ಬಹಿರಂಗಪಡಿಸಿದರು. ಬದಲಾಗಿ "ಬೇರೇನೋ" ನಡೆಯುತ್ತಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯ ಯಾವುದೇ ಕ್ರಮಕ್ಕೆ ಮುಂದಾಗದೆ ಹೇಳಿದ್ದಾಗ್ಯೂ ರಿಲಯನ್ಸ್‌ ಪ್ಯೂಚರ್‌ ಆಸ್ತಿಗಳನ್ನು ತನ್ನ ವಶಕ್ಕೆ ಪಡೆಯುತ್ತಿದೆ. ಇದು ನ್ಯಾಯಾಲಯದ ಆದೇಶವನ್ನು ಧಿಕ್ಕರಿದಂತಾಗಿದೆ ಎನ್ನುವ ಸಂದೇಶ ರವಾನೆಯಾಗಲು ಕಾರಣವಾಗಬಾರದು ಎಂದರು.

ಫ್ಯೂಚರ್ ಕೂಪನ್ಸ್‌ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ “ಸಾಲಿಸಿಟರ್‌ ಮಟ್ಟದ ಸಂಭಾಷಣೆ ನಡೆದಿದೆ. ಫ್ಯೂಚರ್ ಗ್ರೂಪ್‌ನ ಅಧ್ಯಕ್ಷ ಕಿಶೋರ್ ಬಿಯಾನಿ ಅವರು ಕೆಲವು ಪ್ರಸ್ತಾಪಗಳನ್ನು ಇರಿಸಿದರು. ಆದರೆ ಇದರಿಂದ ಏನೂ ಆಗಲಿಲ್ಲ” ಎಂದರು.

ಫ್ಯೂಚರ್ ಕಂಪನಿಯ ಆಸ್ತಿ ಮತ್ತಿತರ ಸ್ವತ್ತನ್ನು ರಿಲಯನ್ಸ್ ಏಕೆ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ವಿವರಿಸಿದ ಅವರು "ನಾವು ದಿವಾಳಿಯಾಗಿದ್ದೇವೆ, ನಮ್ಮ ಬಳಿ ಹಣ ಇಲ್ಲ. ಅಮೆಜಾನ್ ನಮ್ಮನ್ನು ಮಂಡಿಯೂರುವಂತೆ ಮಾಡುತ್ತಿದೆ" ಎಂದರು. ನಾವು ಯಾವುದೇ ಅಂಗಡಿಗಳನ್ನು ಒಪ್ಪಿಸಿಲ್ಲ. ಅದರೆ, ರಿಲಯನ್ಸ್‌ ರಾತ್ರೋರಾತ್ರಿ ಕಟ್ಟಡದ ಬೋರ್ಡ್‌ಗಳನ್ನು ಕಾನೂನಿನ ಅನುಸಾರ ತೆಗೆದು ಹಾಕಿದೆ. ಭೋಗ್ಯ ಮತ್ತು ಪರವಾನಗಿ ಒಪ್ಪಂದಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಮೊಕದ್ದಮೆಯು ನಮ್ಮನ್ನು ದಿವಾಳಿಯಾಗಿಸಿದೆ ಎಂದು ವಿವರಿಸಿದರು.

ವಿಚಾರಣೆಯ ಕೊನೆಯ ಹಂತದಲ್ಲಿ ನ್ಯಾಯಾಲಯವು, ಅಮೆಜಾನ್‌ ಸಲ್ಲಿಸಿರುವ ಅರ್ಜಿಗೆ ನಾಳೆ ನಡೆಯುವ ವಿಚಾರಣೆ ವೇಳೆ ಪ್ರತಿಕ್ರಿಯಿಸುವಂತೆ ಫ್ಯೂಚರ್‌ಗೆ ಸೂಚಿಸಿತು.