ಅಮೆಜಾನ್‌ ಮತ್ತು ಫ್ಯೂಚರ್‌ ನಡುವಿನ ಕಾನೂನು ಹೋರಾಟದಲ್ಲಿ ಯಾರೂ ಗೆಲ್ಲುತ್ತಿಲ್ಲ: ಸುಪ್ರೀಂ ಮುಂದೆ ಸಾಳ್ವೆ ಅಭಿಪ್ರಾಯ

ನಾವು ಹತ್ತು ದಿನಗಳ ಕಾಲ ಪ್ರಕರಣವನ್ನು ಮುಂದೂಡುತ್ತೇವೆ. ಆಧಿಕೃತವಾಗಿ ಏನನ್ನೂ ದಾಖಲಿಸುವುದಿಲ್ಲ. ಈ ಅವಧಿಯಲ್ಲಿ ಸಂಭಾವಿತರ ವಿವೇಕದಿಂದ ಮಾತುಕತೆ ನಡೆಸಿ, ಉದ್ಯಮದ ದೃಷ್ಟಿಯಿಂದ ಇದು ಉತ್ತಮ ಎಂದ ಸಿಜೆಐ.
Gopal Subramanium, Harish Salve, Amazon Future

Gopal Subramanium, Harish Salve, Amazon Future

Published on

ಜಾಗತಿಕ ದೈತ್ಯ ಇ-ಕಾಮರ್ಸ್‌ ಕಂಪೆನಿ ಅಮೆಜಾನ್‌ ಮತ್ತು ಫ್ಯೂಚರ್‌ ಸಮೂಹ ಕಂಪೆನಿಗಳ ನಡುವಿನ ಕಾನೂನು ಹೋರಾಟದಲ್ಲಿ ಯಾರೂ ಗೆಲುವು ಸಾಧಿಸುತ್ತಿಲ್ಲ ಎಂದು ಫ್ಯೂಚರ್‌ ರಿಟೇಲ್‌ ಲಿಮಿಟೆಡ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಹರೀಶ್‌ ಸಾಳ್ವೆ ಗುರುವಾರ ಸುಪ್ರೀಂ ಕೋರ್ಟ್‌ ಮುಂದೆ ಹೇಳಿದರು.

2019ರಲ್ಲಿ ಫ್ಯೂಚರ್‌ ಕೂಪನ್ಸ್‌ ಜೊತೆಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಂಗಪೂರ್‌ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಲ್ಲಿನ ಪ್ರಕ್ರಿಯೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಅಮೆಜಾನ್‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.

“ಕಿಶೋರ್‌ ಬಿಯಾನಿ ಅವರಿಗೆ ಕರೆ ಮಾಡಿ ಚರ್ಚಿಸುವುದಕ್ಕೆ ಅಮೆಜಾನ್‌ಗೆ ತಡೆಯಾಗುತ್ತಿರುವುದಾದರೂ ಏನು? ನಾನು ಭರವಸೆ ನೀಡುತ್ತೇನೆ, ಈ ಹೋರಾಟದಲ್ಲಿ ಯಾರೂ ಗೆಲುವು ಸಾಧಿಸುತ್ತಿಲ್ಲ. ಅಮೆಜಾನ್‌ ದೇವರು ಧರೆಗಿಳಿದು ನಮ್ಮಂಥ ಪಾಮರರ ಬಳಿ ಮಾತನಾಡಬೇಕು…” ಎಂದು ಸಾಳ್ವೆ ಹೇಳಿದರು.

ಮೇಲ್ಮನವಿ ನಿರ್ಧರಿಸಲು ಎನ್‌ಸಿಎಲ್‌ಎಟಿ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸಿಜೆಐ ರಮಣ ಪ್ರಶ್ನಿಸಿದರು. ಅದಾಗ್ಯೂ, ಅಮೆಜಾನ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಗೋಪಾಲ್‌ ಸುಬ್ರಮಣಿಯಮ್‌ ಅವರು ಮಧ್ಯಸ್ಥಿಕೆ ಉಳಿಯಬೇಕು ಎಂದರು.

“ಅಮೆಜಾನ್‌ ವಿದೇಶಿ ಹೂಡಿಕೆದಾರ ಸಂಸ್ಥೆಯಾಗಿದೆ; ಒಂದು ವೇಳೆ ರಿಲಯನ್ಸ್‌ ಇಂಡಿಯಾ ಲಿಮಿಟೆಡ್‌ ಅಥವಾ ಅದಾನಿ ಸಂಸ್ಥೆಗೆ ವಿದೇಶಿ ನೇರ ಹೂಡಿಕೆ ದೊರೆತರೆ ಆಗ ನಾವೆಲ್ಲರೂ ಒಂದೇ ಸನ್ನಿವೇಶದಲ್ಲಿರುತ್ತೇವೆ ಅಲ್ಲವೇ… ಮಧ್ಯಸ್ಥಿಕೆ ಪರಿಹಾರಕ್ಕೆ ಮುಂದಾಗಿ ಶಾಸನಬದ್ಧ ಪ್ರಾಧಿಕಾರವನ್ನು ದೂರಲಾಗುತ್ತದೆಯೇ?” ಎಂದು ಸುಬ್ರಮಣಿಯಮ್‌ ಕೇಳಿದರು.

ಸಿಜೆಐ ರಮಣ ಅವರು “ನೀವು ಈ ನಿಲುವು ಕೈಗೊಂಡರೆ ಪ್ರಕರಣವನ್ನು ತೀರ್ಮಾನಿಸಲಾಗದು” ಎಂದರು. ಅದಕ್ಕೆ ಸುಬ್ರಮಣಿಯಮ್‌ ಅವರು “ಇದು ಮುಂದುವರಿಯಲು ನಾವು ಅವಕಾಶ ಮಾಡಿಕೊಡಲಾಗದು. ಕನಿಷ್ಠ ಮಾತುಕತೆಗೆ ಮುಂದಾಗಬೇಕು” ಎಂದರು.

ಇದಕ್ಕೆ ಸಾಳ್ವೆ ಅವರು “ಇಲ್ಲಿ ಯಾರೂ ಗೆಲುವು ಸಾಧಿಸುತ್ತಿಲ್ಲ. ಎಫ್‌ಆರ್‌ಎಲ್‌, ರಿಲಯನ್ಸ್‌ ಮತ್ತು ಅಮೆಜಾನ್‌ ಸೇರಿದಂತೆ ಎಲ್ಲರಿಗೂ ಸಮಸ್ಯೆಗಳಿವೆ. ಮಾತುಕತೆಗೆ ನ್ಯಾಯಾಲಯದ ಆದೇಶ ಏತಕ್ಕೆ ಕಾಯಬೇಕು ಎಂಬುದೇ ನನಗೆ ಅರ್ಥವಾಗುತ್ತಿಲ್ಲ” ಎಂದರು.

ಉಭಯ ಪಕ್ಷಕಾರರ ದೃಷ್ಟಿಯಿಂದ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ ಎಂಬುದಕ್ಕೆ ಸಿಜೆಐ ರಮಣ ಒಪ್ಪಿಗೆ ಸೂಚಿಸಿದರು. ಸಾಳ್ವೆ ಅವರು “ಮೂರು ದೊಡ್ಡ ಉದ್ಯಮಗಳಿಗೆ ಸಂಬಂಧಿಸಿದ ಮಾತುಕತೆಯಾಗಿರುವುದರಿಂದ ಅವರಿಗೆ ಮಧ್ಯಸ್ಥಿಕೆದಾರರ ಅಗತ್ಯವಿಲ್ಲ. ನಾಯ್ಕ್‌ ಅವರ ಜೊತೆ ಸುಬ್ರಮಣಿಯಮ್‌ ಅವರು ಮಾತನಾಡಿದರೆ ನಾನು ಸಭೆ ಆಯೋಜಿಸುತ್ತೇನೆ” ಎಂದರು.

ಎಫ್‌ಆರ್‌ಎಲ್‌ನ ಪ್ರವರ್ತಕ ಸಂಸ್ಥೆಯಾದ ಫ್ಯೂಚರ್‌ ಕೂಪನ್‌ ಲಿಮಿಟೆಡ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ನಮ್ಮ ಯೋಜನೆಗೆ ಸಂಬಂಧಿಸಿದಂತೆ ನಾವು ಪ್ರತಿಬಂಧಕಾದೇಶ ಎದುರಿಸುತ್ತಿದ್ದೇವೆ. ನಮಗೆ ₹27,000 ಕೋಟಿ ಸಾಲವಿದೆ. ಒಂದು ಕಂಪೆನಿ ಇದನ್ನು ತೆಗೆದುಕೊಳ್ಳಲು ಇಚ್ಛಿಸಿದೆ. ಈಗ ಮಾತುಕತೆಯ ಪ್ರಸ್ತಾವವಾಗುತ್ತಿದೆ. ಹೀಗಾದರೆ, ಪ್ರತಿಬಂಧಕಾದೇಶದ ಕತೆಯೇನು?” ಎಂದರು.

Also Read
ಫ್ಯೂಚರ್‌-ಅಮೆಜಾನ್‌: ಎಸ್‌ಐಎಸಿ ತೀರ್ಪು ಬದಿಗೆ ಸರಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್‌ ಆದೇಶ ಬದಿಗಿಟ್ಟ ಸುಪ್ರೀಂ

ಇದಕ್ಕೆ ಸಿಜೆಐ ರಮಣ ಅವರು “ನಾವು ಹತ್ತು ದಿನಗಳ ಕಾಲ ಪ್ರಕರಣವನ್ನು ಮುಂದೂಡುತ್ತೇವೆ. ಆಧಿಕೃತವಾಗಿ ಏನನ್ನೂ ದಾಖಲಿಸುವುದಿಲ್ಲ. ಈ ಅವಧಿಯಲ್ಲಿ ಸಂಭಾವಿತರ ವಿವೇಕದಿಂದ ಮಾತುಕತೆ ನಡೆಸಿ, ಉದ್ಯಮದ ದೃಷ್ಟಿಯಿಂದ ಇದು ಉತ್ತಮ. ನಿಮಗೆ ಪರಿಹಾರ ದೊರೆತರೆ ಹೇಳಿ. ಇಲ್ಲವಾದರೆ ನಾವು ವಾದ ಆಲಿಸಿ, ಆದೇಶ ಮಾಡುತ್ತೇವೆ” ಎಂದರು.

ಇದೇ ವೇಳೆ ದೆಹಲಿ ಹೈಕೋರ್ಟ್‌ ಮತ್ತು ಎನ್‌ಸಿಎಲ್‌ಎಟಿ ಯಾವುದೇ ಆದೇಶ ಮಾಡುವುದಿಲ್ಲ ಎಂದು ಹೇಳಿದ ಪೀಠವು ವಿಚಾರಣೆಯನ್ನು ಮಾರ್ಚ್‌ 15ಕ್ಕೆ ಮುಂದೂಡಿತು. ವಿಚಾರಣೆಯ ಅಂತ್ಯದಲ್ಲಿ ಸಾಳ್ವೆ ಅವರು “ಅಮೆಜಾನ್‌ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸುತ್ತದೆ ಎಂಬ ವಿಚಾರ ನಮ್ಮ ಗಮನಕ್ಕೆ ಬಂದಿದೆ. ನ್ಯಾಯಾಲಯ ನೀಡಿರುವ ಹತ್ತು ದಿನಗಳನ್ನು ನಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಬಳಸುವುದಿಲ್ಲ ಎಂಬ ಭರವಸೆ ಹೊಂದಿದ್ದೇವೆ” ಎಂದರು. ಇದಕ್ಕೆ ಸುಬ್ರಮಣಿಯಮ್‌ ಅವರು ಅಂಥ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಭರವಸೆ ನೀಡಿದರು.

Kannada Bar & Bench
kannada.barandbench.com