ಭಾರತೀಯ ಜನತಾ ಪಕ್ಷವು (ಬಿಜೆಪಿ) ಜನವರಿ 17ರಂದು ಬೆಳಗಾವಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಭಾಗವಹಿಸಿದ್ದವರ ವಿರುದ್ಧ ಎಫ್‌ಐಆರ್ ದಾಖಲಿಸದ ಪೊಲೀಸ್ ಆಯುಕ್ತರನ್ನು ಹೈಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿಯು ಜನವರಿ 17ರಂದು ಸಮಾವೇಶ ಆಯೋಜಿಸಿತ್ತು. ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸಿ ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು.
ಪ್ರಕರಣವನ್ನು ಸಲೀಸಾಗಿ ತೆಗೆದುಕೊಂಡಿರುವ ಪೊಲೀಸ್ ಆಯುಕ್ತರನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಧಿಕಾರಿ ಸಲ್ಲಿಸಿರುವ ಅಫಿಡವಿಟ್ ಅಜ್ಞಾನದಿಂದ ಕೂಡಿದೆ ಎಂದು ಪೀಠ ಹೇಳಿದೆ.
“ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ 2020ರ ಅಡಿ ಉಲ್ಲೇಖಿಸಲಾದ ನಿಯಂತ್ರಣದ ನಿಬಂಧನೆಗಳ ಬಗ್ಗೆ ಆಯುಕ್ತರಿಗೆ ತಿಳಿದಿಲ್ಲ ಎನಿಸುತ್ತದೆ. ಏಪ್ರಿಲ್ 15 ರ ಆದೇಶದಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳನ್ನು ರಾಜ್ಯ ಸರ್ಕಾರ ಪಾಲಿಸದ ಕಾರಣ ಆಯುಕ್ತರಿಗೆ ಈ ಆದೇಶದ ಬಗ್ಗೆ ತಿಳಿದಿಲ್ಲ ಎಂದೆನಿಸುತ್ತದೆ…
…ಲಕೋಟೆಯಲ್ಲಿ ಆರ್2 ಎಂದು ಉಲ್ಲೇಖಿಸಲಾಗಿರುವ ಚಿತ್ರಗಳನ್ನು ಆಯುಕ್ತರು ಅವಲಂಬಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮತ್ತು ಮಾಸ್ಕ್ ಧರಿಸದೇ ಜನವರಿ 17ರಂದು ಅಪಾರ ಸಂಖ್ಯೆಯಲ್ಲಿ ಜನರು ಸೇರಿರುವುದು ಚಿತ್ರಗಳಿಂದ ತಿಳಿದುಬರುತ್ತದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಒಂದೇ ಒಂದು ಎಫ್‌ಐಆರ್ ದಾಖಲಿಸದಿರುವುದರ ಕುರಿತು ಆಯುಕ್ತರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ. ಆಯುಕ್ತರ ಅಫಿಡವಿಟ್ ಓದಿದಾಗ ಅವರು ಪ್ರಕರಣವನ್ನು ಉಪೇಕ್ಷಿಸಿದ್ದಾರೆ ಎಂಬುದು ತಿಳಿಯುತ್ತದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಗಾಳಿಗೆ ತೂರಿ ಅಪಾರ ಸಂಖ್ಯೆಯ ಜನರು ಬೆಳಗಾವಿಯಲ್ಲಿ ನೆರದಿದ್ದರು. 20,900 ರೂಪಾಯಿ ದಂಡ ವಸೂಲಿ ಮಾಡುವ ಮೂಲಕ ಆಯುಕ್ತರು ಸಂತುಷ್ಟರಾದಂತಿದೆ. ಕಾಯಿದೆಯ ನಿಯಮಗಳ ಅನ್ವಯ ರೂಪಿಸಲಾದ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕೆ ಏಕೆ ಎಫ್‌ಐಆರ್‌ಗಳನ್ನು ದಾಖಲಿಸಲಾಗಿಲ್ಲ ಎಂಬುದಕ್ಕೆ ವಿವರಣೆ ನೀಡುವಮತೆ ನಾವು ಅಯುಕ್ತರಿಗೆ ನಿರ್ದೇಶಿಸುತ್ತಿದ್ದೇವೆ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶಿಸುವಂತೆ ಕೋರಿ ಲೆಟ್ಜ್‌ಕಿಟ್ ಫೌಂಡೇಶನ್ ಸಲ್ಲಿಸಿರುವ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಮೇಲಿನಂತೆ ಹೇಳಿದೆ.
ನ್ಯಾಯಾಲಯದ ಹಿಂದಿನ ಆದೇಶಗಳನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ ಎಂದು ಪೀಠ ಹೇಳಿದ್ದು, ಕಾಯಿದೆಯ ನಿಬಂಧನೆಗಳನ್ನು ಜಾರಿಗೊಳಿಸದಿರುವುದು ಹಾಗೂ ನ್ಯಾಯಾಲಯ ಆದೇಶಗಳನ್ನು ಪಾಲಿಸದಿರುವುದು ರಾಜ್ಯದಲ್ಲಿ ಕೋವಿಡ್ ವ್ಯಾಪಿಸಲು ಕಾರಣವಾಗಿದೆ. ಆದೇಶ ಪಾಲಿಸಿದ ವರದಿ ಸಲ್ಲಿಸಲು ಜೂನ್ 3ರವರೆಗೆ ನಾವು ಸರ್ಕಾರಕ್ಕೆ ಕಾಲಾವಕಾಶ ನೀಡುತ್ತೇವೆ” ಎಂದು ಪೀಠ ಹೇಳಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ ವೈ ವಿಜಯೇಂದ್ರ ಅವರ ಜನ್ಮದಿನಾಚರಣೆಯ ಅಂಗವಾಗಿ ಕೋಲಾರದಲ್ಲಿ ದೇವಸ್ಥಾನ ಭೇಟಿಗೆ ಅನುಮತಿಸಿದ್ದನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು. ಇದನ್ನು ಪರಿಗಣಿಸಿದ ಪೀಠವು ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಜೂನ್ 4ಕ್ಕೆ ವಿಚಾರಣೆ ನಿಗದಿಗೊಳಿಸಲಾಗಿದೆ.