ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಮಾಡಿದ್ದ ಆರೋಪಗಳನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಎ ಬೊಬ್ಡೆ ಅವರಿಗೆ ಅಫಿಡವಿಟ್‌ನಲ್ಲಿ ಸಲ್ಲಿಸಿದ್ದಾರೆ. ಅಫಿಡವಿಟ್‌ನಲ್ಲಿ ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳನ್ನು ಸಿಎಂ ರೆಡ್ಡಿ ಪುನರುಚ್ಚರಿಸಿದ್ದಾರೆ.
ನ್ಯಾಯಮೂರ್ತಿಗಳ ವಿರುದ್ಧದ ಆರೋಪವನ್ನು ವಿಸ್ತೃತವಾಗಿ ಉಲ್ಲೇಖಿಸಿ ಹಿಂದೆ ಸಿಜೆಐ ಬೊಬ್ಡೆ ಅವರಿಗೆ ಮುಖ್ಯಮಂತ್ರಿ ಜಗನ್ ಪತ್ರ ಬರೆದಿದ್ದರು. ಸಿಜೆಐ ಕಚೇರಿಯಿಂದ ಪ್ರಮಾಣ ಪತ್ರದ ಮೂಲಕ ದೂರು ಸಲ್ಲಿಸುವಂತೆ ಸಿಎಂ ರೆಡ್ಡಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು “ಬಾರ್ ಅಂಡ್ ಬೆಂಚ್”ಗೆ ಖಾತರಿಪಡಿಸಿವೆ.
ಅಫಿಡವಿಟ್‌ನಲ್ಲಿ ದೂರು ಸಲ್ಲಿಸುವುದನ್ನೇ ಪ್ರಮಾಣದ (ಓತ್) ಮೂಲಕ ದೂರು ಎನ್ನಲಾಗುತ್ತದೆ. ಆರೋಪಗಳು ಸುಳ್ಳು ಎಂದು ಸಾಬೀತಾದರೆ ದೂರುದಾರರನ್ನು ಹೊಣೆಗಾರರನ್ನಾಗಿಸಲಾಗುತ್ತದೆ. ಮತ್ತೊಂದು ಕಡೆ ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸುವಂತೆ ನ್ಯಾ. ರಮಣ ಅವರನ್ನು ಸಿಜೆಐ ಬೊಬ್ಡೆ ಕೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬೆಳವಣಿಗೆಯ ಬಗ್ಗೆ ಸಿಎಂ ಕಚೇರಿಯ ಮೂಲಗಳು ಖಾತರಿಪಡಿಸಿಲ್ಲ.
“ನ್ಯಾ. ರಮಣ ಅವರನ್ನು ಪ್ರತಿಕ್ರಿಯಿಸುವಂತೆ ಸಿಜೆಐ ಕೇಳಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇವೆಲ್ಲವೂ ಅನೌಪಚಾರಿಕವಾಗಿ ನಡೆಯುವ ಪ್ರಕ್ರಿಯೆಗಳು” ಎಂದು ಮುಖ್ಯಮಂತ್ರಿ ತಂಡದ ಮೂಲವೊಂದು “ಬಾರ್ ಅಂಡ್ ಬೆಂಚ್”ಗೆ ತಿಳಿಸಿದೆ.
ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜೆ ಕೆ ಮಹೇಶ್ವರಿ ಅವರು 300 ಪುಟಗಳಿಗೂ ಹೆಚ್ಚಿನ ವಿಸ್ತೃತ ಪ್ರತಿಕ್ರಿಯೆಯನ್ನು ಸಿಜೆಐ ಬೊಬ್ಡೆ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇತ್ತ, ಜಗನ್ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಹಿಂದೆ ತಾವು ಪತ್ರ ಮುಖೇನ ಮಾಡಿದ್ದ ಆರೋಪಗಳನ್ನೇ ಯಥಾವತ್ ಪುನರುಚ್ಚರಿಸಿದ್ದು ಇದರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಅವರ ಮೇಲಿನ ಆರೋಪವೂ ಸೇರಿದೆ.
ಕಳೆದ ಅಕ್ಟೋಬರ್‌ನಲ್ಲಿ ಸಿಜೆಐ ಬೊಬ್ಡೆ ಅವರಿಗೆ ಪತ್ರ ಬರೆದಿದ್ದ ಜಗನ್ ಅವರು, ಆಂಧ್ರಪ್ರದೇಶದ ಹೈಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕಾತಿ ಮತ್ತು ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದ ರೋಸ್ಟರ್ ನಿರ್ಧರಿಸುವಲ್ಲಿ ನ್ಯಾ. ಎನ್ ವಿ ರಮಣ ಅವರ ಹಸ್ತಕ್ಷೇಪವಿದ್ದು, ಆ ಮೂಲಕ ವಿರೋಧ ಪಕ್ಷವಾದ ತೆಲುಗು ದೇಶಂ (ಟಿಡಿಪಿ) ಪಕ್ಷಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದ್ದರು.