Chandrababu Naidu and Andhra Pradesh High Court
Chandrababu Naidu and Andhra Pradesh High Court 
ಸುದ್ದಿಗಳು

ಕೌಶಲ್ಯಾಭಿವೃದ್ಧಿ ಹಗರಣ: ಚಂದ್ರಬಾಬು ನಾಯ್ಡು ಮನವಿ ವಜಾಗೊಳಿಸಿದ ಆಂಧ್ರಪ್ರದೇಶ ಹೈಕೋರ್ಟ್

Bar & Bench

ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಸಲ್ಲಿಸಿದ್ದ ಮನವಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನಾಯ್ಡು ಅವರ ವಿರುದ್ಧ ಆರೋಪಿಸಲಾದ ಕೃತ್ಯಗಳು ಅವರು ಮುಖ್ಯಮಂತ್ರಿಯಾಗಿ ಸದ್ಭಾವನೆಯಿಂದ ಹಾಗೂ ತಮ್ಮ ಅಧಿಕೃತ ಕರ್ತವ್ಯಗಳ ನಿರ್ವಹಣೆಯ ಭಾಗವಾಗಿ ಮಾಡಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂಬುದಾಗಿ ನ್ಯಾಯಮೂರ್ತಿ ಕೆ ಶ್ರೀನಿವಾಸರೆಡ್ಡಿ ಹೇಳಿದರು.

ಆದ್ದರಿಂದ ಆರೋಪಿತ ಕೃತ್ಯಗಳ ತನಿಖೆಗೆ ಸಕ್ಷಮ ಪ್ರಾಧಿಕಾರ ಯಾವುದೇ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತು.

ವಿಶ್ವಾಸಾರ್ಹತೆಯ ಕೊರತೆಯಂತಹ ಸಂದರ್ಭಗಳಲ್ಲಿ ಕಂಡುಬರುವ ಸಾರ್ವಜನಿಕ ಹುದ್ದೆಯಲ್ಲಿರುವ ವ್ಯಕ್ತಿಯ ಅಪರಾಧ ಕೃತ್ಯಕ್ಕೆ ಭ್ರಷ್ಟಾಚಾರ ಕಾಯಿದೆಯ ಸೆಕ್ಷನ್ 17 ಎ ಅನ್ವಯವಾಗದು. ಸಾರ್ವಜನಿಕ ಕಟ್ಟಡ ಪರವಾನಗಿ ಮತ್ತು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡುವುದನ್ನು ಸದ್ದುದ್ದೇಶದಿಂದ ಮಾಡಿದ ಕೆಲಸಗಳು ಎನ್ನಲಾಗದು.

ಸಾರ್ವಜನಿಕ ಸೇವಕರಾದವರು ಅಧಿಕಾರದ ವೇಷಧರಿಸಿ ಸಾರ್ವಜನಿಕ ನಿಧಿಯ ಬಳಕೆಯನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಂಡರೆ ಅದನ್ನು ಅವರ ಅಧಿಕೃತ ಕಾರ್ಯಗಳು ಅಥವಾ ಕರ್ತವ್ಯಗಳ ನಿರ್ವಹಣೆಯಲ್ಲಿ ಮಾಡಿದ ಕೆಲಸವೆಂದು ಪರಿಗಣಿಸಲಾಗುವುದಿಲ್ಲ. ಕಾಯಿದೆಯ ಸೆಕ್ಷನ್ 17 ಎ ಅಡಿಯಲ್ಲಿ ರಕ್ಷಣೆ ಪಡೆಯಲು ಅರ್ಹವಾಗುವುದಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

ನಾಯ್ಡು ಅವರ ಪರವಾಗಿ ಹಿರಿಯ ವಕೀಲ ಹರೀಶ್‌ ಸಾಳ್ವೆ, ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದರು. ಆಂಧ್ರಪ್ರದೇಶ ಸಿಐಡಿಯನ್ನು ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ರಂಜಿತ್ ಕುಮಾರ್ ಪ್ರತಿನಿಧಿಸಿದ್ದರು. ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನವೋಲು ಸುಧಾಕರ್ ರೆಡ್ಡಿ ಅವರ ವಾದಗಳನ್ನು ಕೂಡ ನ್ಯಾಯಾಲಯ ಈ ಸಂದರ್ಭದಲ್ಲಿ ಆಲಿಸಿತು.