ಸನಾತನ ಧರ್ಮ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಅರ್ಜಿಯೊಂದು ಕೋರಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ಟಾಲಿನ್ ಪ್ರತಿಕ್ರಿಯೆ ಕೇಳಿದೆ. ಮತ್ತೊಂದೆಡೆ ಇದೇ ಕಾರಣಕ್ಕೆ ವಕೀಲರೊಬ್ಬರು ಸಚಿವರ ವಿರುದ್ಧ ನೀಡಿದ್ದ ದೂರಿನ ವಿಚಾರಣೆಗೆ ಜಮ್ಮು ಕಾಶ್ಮೀರ ನ್ಯಾಯಾಲಯ ಈಚೆಗೆ ಆದೇಶಿಸಿದೆ.
ಸಚಿವ ಉದಯನಿಧಿ ಅವರು ಧರ್ಮಕ್ಕೆ ವಿರುದ್ಧವಾದ ಮಾತನಾಡಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠದ ಮುಂದೆ ವಿವರಿಸಿದರು.
ಅರ್ಜಿದಾರರ ವಾದವನ್ನು ಆಲಿಸಿದ ಪೀಠವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ದ್ವೇಷ ಭಾಷಣ ಪ್ರಕರಣಗಳೊಂದಿಗೆ ಈ ಮನವಿಯನ್ನು ಸೇರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು. ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಿತು.
ಚೆನ್ನೈನಲ್ಲಿ ನಡೆದ ಸಮಾವೇಶದಲ್ಲಿ ಡಿಎಂಕೆ ನಾಯಕ ಉದಯನಿಧಿ ನೀಡಿದ್ದ ಹೇಳಿಕೆಗಳ ವಿರುದ್ಧ ತಮಿಳುನಾಡಿನ ವಕೀಲ ಬಿ ಜಗನ್ನಾಥ್ ಅವರು ವಕೀಲ ಜಿ ಬಾಲಾಜಿ ಅವರ ಮೂಲಕ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರ ತಿಳಿಸಿದೆ.
ತನಿಖೆಗೆ ಆದೇಶಿಸಿದ ಕಾಶ್ಮೀರ ನ್ಯಾಯಾಲಯ
ಸನಾತನ ಧರ್ಮದ ವಿರುದ್ಧ ಉದಯನಿಧಿ ಅವರು ನೀಡಿದ್ದ ಹೇಳಿಕೆ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ವಕೀಲರೊಬ್ಬರು ನೀಡಿದ್ದ ದೂರಿನ ತನಿಖೆಗೆ ಜಮ್ಮು ಕಾಶ್ಮೀರ ನ್ಯಾಯಾಲಯ ಈಚೆಗೆ ಆದೇಶಿಸಿದೆ.
ಪ್ರಯಾಣಿಕರ ತೆರಿಗೆ ಮತ್ತು ಮಳಿಗೆಗಳ ಸ್ಥಾಪನೆ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ಸಂಚಾರಿ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮನೀಶ್ ಕೆ ಮನ್ಹಾಸ್ ಅವರು ಸಿಆರ್‌ಪಿಸಿ ಸೆಕ್ಷನ್ 202ರ ಅಡಿಯಲ್ಲಿ ಜಮ್ಮುವಿನ ಹಿರಿಯ ಪೊಲೀಸ್ ಅಧೀಕ್ಷಕರನ್ನು ತನಿಖೆ ನಡೆಸುವ ತನಿಖಾ ಅಧಿಕಾರಿಯಾಗಿ ನಿಯೋಜಿಸಿದರು.
ವಕೀಲ ಅತುಲ್ ರೈನಾ ಎಂಬುವವರು ಸಿಆರ್‌ಪಿಸಿ ಸೆಕ್ಷನ್ 156(3) ದೂರು ದಾಖಲಿಸಿದ್ದರು. ಉದಯನಿಧಿ ಅವರ ಹೇಳಿಕೆಯಿಂದಾಗಿ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅವರು ದೂರಿದ್ದರು.