ಕೌಶಲ ಅಭಿವೃದ್ಧಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಟಿ ಮಲ್ಲಿಕಾರ್ಜುನ್ ರಾವ್ ಅವರು ವೈದ್ಯಕೀಯ ಕಾರಣಗಳಿಗಾಗಿ ನಾಯ್ಡು ಅವರಿಗೆ ನಾಲ್ಕು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದರು.
"ಮಾನವೀಯ ನೆಲೆಯಲ್ಲಿ ಮತ್ತು ಅರ್ಜಿದಾರರ ಆರೋಗ್ಯ ಸ್ಥಿತಿ ಪರಿಗಣಿಸಿ, ಈ ನ್ಯಾಯಾಲಯ ಅರ್ಜಿದಾರರಿಗೆ ಆರೋಗ್ಯದ ಆಧಾರದ ಮೇಲೆ ತಾತ್ಕಾಲಿಕ ಜಾಮೀನು ನೀಡಲು ಒಲವು ತೋರಿದೆ. ಪ್ರಕರಣದ 37ನೇ ಆರೋಪಿಯ (ನಾಯ್ಡು), ಬಲಗಣ್ಣಿನ ಶಸ್ತ್ರಚಿಕಿತ್ಸೆಗಾಗಿ ಅನುವು ಮಾಡಿಕೊಡಲಾಗುತ್ತಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಾಜಿ ಸಿಎಂ ಅವರು ನ್ಯಾಯಾಂಗ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಅಥವಾ ದೇಶ ತೊರೆಯುವ ಯಾವುದೇ ಸಾಧ್ಯತೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಪರಾಧದ ಮಹತ್ವಕ್ಕಿಂತಲೂ ಹೆಚ್ಚಾಗಿ ವ್ಯಕ್ತಿಯ ಆರೋಗ್ಯ ಮತ್ತು ಯೋಗಕ್ಷೇಮ ಅಗ್ರಗಣ್ಯವಾದದ್ದು ಎಂದು ಪರಿಗಣಿಸಲಾಗಿದೆ ಎಂಬುದಾಗಿ ಅದು ಹೇಳಿದೆ.
“ತನಿಖಾ ಹಂತದಲ್ಲಿ ವಶದಲ್ಲಿರುವುದನ್ನು ದಂಡನೀಯ ಎಂದು ಪರಿಗಣಿಸಬಾರದು ಎಂಬುದಾಗಿ ಗುರುತಿಸುವುದು ಮುಖ್ಯವಾಗಿದೆ… ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡುವ ವಿವೇಚನಾಧಿಕಾರ ವ್ಯಕ್ತಿಯ ಜೀವನ ಅಪಾಯದಲ್ಲಿರುವ ಸಂದರ್ಭಗಳಿಗಷ್ಟೇ ಸೀಮಿತವಾಗುವಂತಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]