ಕೌಶಲ್ಯಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮ ವಿರುದ್ಧದ ಎಫ್‌ಐಆರ್ ರದ್ದತಿಗೆ ಕೋರಿರುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಅವರ ಪರವಾಗಿ ಘಟಾನುಘಟಿ ಹಿರಿಯ ವಕೀಲರ ದಂಡೇ ವಾದಿಸಲಿದೆ [ನಾರಾ ಚಂದ್ರಬಾಬು ನಾಯ್ಡು ವಿರುದ್ಧ ಆಂಧ್ರಪ್ರದೇಶ ರಾಜ್ಯ ಮತ್ತು ರಾಜ್ಯ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು].
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠದ ಮುಂದೆ ಹಿರಿಯ ವಕೀಲರಾದ ಹರೀಶ್ ಸಾಳ್ವೆ, ಡಾ ಅಭಿಷೇಕ್ ಮನು ಸಿಂಘ್ವಿ ಮತ್ತು ಸಿದ್ಧಾರ್ಥ್ ಲೂತ್ರಾ ಅವರು ಇಂದು ನಾಯ್ಡು ಅವರ ಪರವಾಗಿ ವಾದ ಮಂಡಿಸಿದರು.
ಎಫ್ಐಆರ್ ರದ್ದತಿ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ನಾಯ್ಡು ಅವರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿತು.
ಅರ್ಜಿಗೆ ಸಮ್ಮತಿಸಬೇಕೇ ಬೇಡವೇ ಎಂದು ನಿರ್ಧರಿಸುವ ಮೊದಲು ಮುಂದಿನ ವಿಚಾರಣೆ ನಡೆಯುವ ಸೋಮವಾರದಂದು ಕೆಲವು ವಿಚಾರಗಳನ್ನು (ಅಕ್ಟೋಬರ್ 9) ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು.
ಇಂದಿನ ವಿಚಾರಣೆ ಮುಕ್ತಾಯಗೊಳ್ಳುವ ಮೊದಲು, ನ್ಯಾಯಾಲಯ ನಾಯ್ಡು ಪರ ಹಾಜರಾದ ಹಿರಿಯ ವಕೀಲರ ಸಂಖ್ಯೆಯನ್ನು ಕೂಡ ಗಮನಿಸಿತು.
"ನಾವೆಲ್ಲರೂ (ಆಂಧ್ರಪ್ರದೇಶ ಸರ್ಕಾರದ ಪರವಾಗಿ ವಾದಿಸಲಿರುವ) ಮುಕುಲ್ ರೋಹಟ್ಗಿ ಅವರೆದುರು ಮಂಕಾಗಿಬಿಡುತ್ತೇವೆ" ಎಂದು ಸಾಳ್ವೆ ಲಘು ದಾಟಿಯಲ್ಲಿ ಹೇಳಿದರು.
ಆಗ ನ್ಯಾ. ಬೇಲಾ ಅವರು "ಇದು ಕೆಳ ನ್ಯಾಯಾಲಯವಾಗಿದ್ದರೆ, ನಾವು ಇಷ್ಟೊಂದು ವಕೀಲರಿಗೆ ಅನುಮತಿ ನೀಡುತ್ತಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ, ನಿಮಗೆ ಈ ಸವಲತ್ತು ಇದೆ" ಎಂದರು.
ವಿಚಾರಣೆಯ ಒಂದು ಹಂತದಲ್ಲಿ, ಮುಕುಲ್ ರೋಹಟ್ಗಿ ಅವರು, "ಇವರು ನನ್ನನ್ನು ಮಾತನಾಡಲು ಬಿಡುತ್ತಾರೆಯೇ? ಒಬ್ಬರ ನಂತರ ಒಬ್ಬರು ಮಾತನಾಡುತ್ತಿದ್ದಾರೆ. ಅರ್ಜಿದಾರರ ಪರವಾಗಿ ಯಾರಾದರೊಬ್ಬರು ಮಾತ್ರವೇ ವಾದಿಸಬೇಕು," ಎಂದು ಅಸಮಾಧಾನ ಸೂಚಿಸಿದರು.