Andhra Pradesh High Court  
ಸುದ್ದಿಗಳು

ಸುಪ್ರೀಂ ಕೋರ್ಟ್‌ ಆದೇಶವನ್ನು ತಪ್ಪಾಗಿ ಅರ್ಥೈಸಿ ಚುನಾವಣೆಗೆ ಮುಂದಾದ ರಾಜ್ಯ ಚುನಾವಣಾ ಆಯೋಗ: ಆಂಧ್ರ ಹೈಕೋರ್ಟ್‌ ತರಾಟೆ

“ಇಂಗ್ಲಿಷ್ ಭಾಷೆ ಓದಲು ಬರೆಯಲು ಹಾಗೂ ಅರ್ಥಮಾಡಿಕೊಳ್ಳಲು ಸಾಧ್ಯವಿರುವ ಸಾಮಾನ್ಯ ವ್ಯಕ್ತಿಗೆ ಕೂಡ ನಿರ್ದೇಶನ ಅರ್ಥವಾಗುತ್ತದೆ” ಎಂದು ಕುಟುಕಿದ ನ್ಯಾಯಾಲಯ ಮಾದರಿ ನೀತಿ ಸಂಹಿತೆಯನ್ನು ಮೊಟಕುಗೊಳಿಸಿದ್ದ ಆಯೋಗದ ನಿರ್ಧಾರವನ್ನು ರದ್ದುಪಡಿಸಿತು.

Bar & Bench

ಈ ಹಿಂದೆ ಮುಂದೂಡಲಾಗಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದಕ್ಕಾಗಿ ಮಾದರಿ ನೀತಿ ಸಂಹಿತೆ ಅವಧಿಯನ್ನು ನಾಲ್ಕು ವಾರಗಳಿಗಿಂತ ಕಡಿಮೆ ಅವಧಿಗೆ ಮೊಟಕುಗೊಳಿಸಿ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಚುನಾವಣಾ ಆಯೋಗದ ನಿರ್ಧಾರವನ್ನು ಆಂಧ್ರಪ್ರದೇಶ ಹೈಕೋರ್ಟ್‌ ಶುಕ್ರವಾರ ರದ್ದುಪಡಿಸಿದೆ.

ಸುಪ್ರೀಂಕೋರ್ಟ್‌ 2020ರ ಮಾರ್ಚ್‌ನಲ್ಲಿ ನೀಡಿದ್ದ ನಿರ್ದೇಶನವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕಾಗಿ ಆಯೋಗವನ್ನು ಹೈಕೋರ್ಟ್‌ ತೀವ್ರವಾಗಿ ಟೀಕಿಸಿತು. ನೀತಿ ಸಂಹಿತೆ ಅವಧಿಯನ್ನು ಕಡಿತಗೊಳಿಸುವ ಆಯೋಗದ ನಿರ್ಧಾರ ಸುಪ್ರೀಂಕೋರ್ಟ್‌ ಆದೇಶದ ಉಲ್ಲಂಘನೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

“ಇಂಗ್ಲಿಷ್‌ ಭಾಷೆಯನ್ನು ಓದಲು ಬರೆಯಲು ಹಾಗೂ ಅರ್ಥಮಾಡಿಕೊಳ್ಳಲು ಸಾಧ್ಯವಿರುವ ಸಾಮಾನ್ಯ ವ್ಯಕ್ತಿ ಕೂಡ ನಿರ್ದೇಶನವನ್ನು ಅರ್ಥ ಮಾಡಿಕೊಳ್ಳಬಲ್ಲರು. ಆದರೆ, ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಇರುವ ನಿವೃತ್ತ ಹಿರಿಯ ಐಎಎಸ್‌ ಅಧಿಕಾರಿಯೂ ಆಗಿರುವ ರಾಜ್ಯ ಚುನಾವಣಾ ಆಯುಕ್ತರಿಗೆ ಮಾನ್ಯ ಸುಪ್ರೀಂ ಕೋರ್ಟ್ ಹೊರಡಿಸಿದ ಸರಳ ನಿರ್ದೇಶನವನ್ನು ಸೂಕ್ತ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಇದು ಚುನಾವಣಾ ಆಯುಕ್ತರ ಹುದ್ದೆಗೆ ಅವರು ಸಮರ್ಥರೇ ಎಂಬ ಅನುಮಾನ ಹುಟ್ಟುಹಾಕುತ್ತದೆ” ಎಂದಿತು.

ಆಯೋಗದ ಇಂತಹ ಕ್ರಮಗಳಿಂದಾಗಿ ಸರ್ಕಾರ ಪ್ರಜಾಪ್ರಭುತ್ವದ ಗುಣಗಳನ್ನು ಕಳೆದುಕೊಂಡು ನಿರಂಕುಶಾಧಿಕಾರ ಅಥವಾ ಸರ್ವಾಧಿಕಾರದ ಆಡಳಿತವಾಗಲು ಕಾರಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತು.

ಅಧಿಕಾರದ ಶಾಂತಿಯುತ ಹಸ್ತಾಂತರ ಅಥವಾ ಚುನಾವಣಾ ವ್ಯವಸ್ಥೆ ರೀತಿಯ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ರಾಜಕೀಯ ಸಂಸ್ಥೆಗಳನ್ನು ಪ್ರಭುತ್ವವೇ ಮುಂದಾಗಿ ದುರ್ಬಲಗೊಳಿಸುವುದರಿಂದ ಪ್ರಜಾಪ್ರಭುತ್ವದ ಅವನತಿ ಉಂಟಾಗುತ್ತದೆ.
- ಆಂಧ್ರಪ್ರದೇಶ ಹೈಕೋರ್ಟ್

ಆದ್ದರಿಂದ, ಮಂಡಲ ಪ್ರಜಾ ಪರಿಷತ್ ಪ್ರಾದೇಶಿಕ ಕ್ಷೇತ್ರಗಳು (ಎಂಪಿಟಿಸಿ) ಮತ್ತು ಜಿಲ್ಲಾ ಪ್ರಜಾ ಪರಿಷತ್ ಪ್ರಾದೇಶಿಕ ಕ್ಷೇತ್ರಗಳಿಗೆ (ಜಡ್‌ಪಿಟಿಸಿ) ಚುನಾವಣಾ ಪ್ರಕ್ರಿಯೆಯನ್ನು ಪುನರಾರಂಭಿಸಲು ಹೊಸ ಅಧಿಸೂಚನೆ ಹೊರಡಿಸುವಂತೆ ನ್ಯಾಯಮೂರ್ತಿ ಎಂ ಸತ್ಯನಾರಾಯಣ ಮೂರ್ತಿ ಅವರಿದ್ದ ಪೀಠ ನಿರ್ದೇಶಿಸಿತು.

ಹಿನ್ನೆಲೆ: ಸುಪ್ರೀಂ ಕೋರ್ಟ್‌ ತನ್ನ ನಿರ್ದೇಶನದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಚುನಾವಣಾ ದಿನಾಂಕಕ್ಕಿಂತ ನಾಲ್ಕು ವಾರ ಮೊದಲು ಅನುಷ್ಠಾನಗೊಳಿಸಬೇಕು ಎಂದು ಸ್ಪಷ್ಟವಾಗಿ ನಿರ್ದೇಶಿಸಿತ್ತು. ಆದರೆ, ರಾಜ್ಯ ಚುನಾವಣಾ ಆಯೋಗವು ಇದನ್ನು ತಪ್ಪಾಗಿ ಅರ್ಥೈಸಿತ್ತು. ಅಲ್ಲದೆ, ಚುನಾವಣಾ ಪ್ರಕ್ರಿಯೆಗಳು ಆರಂಭಗೊಂಡ ನಂತರ, ಚುನಾವಣಾ ನೀತಿ ಸಂಹಿತೆಯನ್ನು ನಾಲ್ಕು ವಾರಗಳಿಗೆ ಹೆಚ್ಚಿಲ್ಲದಂತೆ ಜಾರಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿತು. ಆಯೋಗದ ಈ ನಡೆ ನ್ಯಾಯಾಲಯವನ್ನು ಕೆಂಡಾಮಂಡಲವಾಗಿಸಿತು.

ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಇದು ವಿವಿಧ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಮಾಡುವುದನ್ನು ಕಸಿದುಕೊಂಡಿದೆ. ಆಯೋಗದ ಈ ನಡೆಯು ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಕ್ರಮವಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಇದೇ ವೇಳೆ ನ್ಯಾಯಾಲಯ ಭಾರತದ ಸಂವಿಧಾನದ 243 ಒ ವಿಧಿಯಡಿ ಚುನಾವಣಾ ವಿಷಯಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪದ ಕುರಿತು ಇರುವ ನಿರ್ಬಂಧ ನಿಚ್ಚಳವಾದುದಲ್ಲ ಎಂದು ಹೇಳಿತು. "ರಾಜ್ಯ ಚುನಾವಣಾ ಆಯುಕ್ತರು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸದಿದ್ದಾಗ ನ್ಯಾಯಾಲಯ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಹುದು ... ರಾಜ್ಯ ಚುನಾವಣಾ ಆಯೋಗ ಸಾಂವಿಧಾನಿಕ ನಿಬಂಧನೆಗಳನ್ನು ಅಥವಾ ಇನ್ನಾವುದೇ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸಿದಾಗ ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಹುದು" ಎಂದು ಪೀಠ ಸ್ಪಷ್ಟಪಡಿಸಿತು.

ಆಯೋಗದ ನಿರ್ಧಾರವನ್ನು ʼಜನಸೇನಾʼ ಎಂಬ ನೋಂದಾಯಿತ ಪಕ್ಷ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಜನಸೇನಾ ಪರವಾಗಿ ವಕೀಲರಾದ ವಿ ವೇಣುಗೋಪಾಲ ರಾವ್ ಮತ್ತು ವೇದುಲ ವೆಂಕಟರಮಣ ಆಯೋಗದ ಪರವಾಗಿ ಹಿರಿಯ ವಕೀಲ ಸಿ ವಿ ಮೋಹನ್ ರೆಡ್ಡಿ ಮತ್ತು ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಎಸ್ ಶ್ರೀರಾಂ ಹಾಜರಿದ್ದರು.