ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳನ್ನು ಕಾರ್ಯಾಂಗವು ನೇಮಕ ಮಾಡುವ ಪ್ರಕ್ರಿಯೆ ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ಕೇಂದ್ರ ಸರ್ಕಾರವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಕ ಮಾಡುವುದರಿಂದ ಸಂವಿಧಾನದ 14 ಮತ್ತು 324(2) ನೇ ವಿಧಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸರ್ಕಾರೇತರ ಸಂಸ್ಥೆಯಾದ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಗಾದೆ ಎತ್ತಿದೆ.
“ಕಾನೂನು ಆಯೋಗವು 2015ರ ಮಾರ್ಚ್‌ನಲ್ಲಿ ತನ್ನ 255ನೇ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ಚುನಾವಣಾ ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡಲು ಪಕ್ಷಾತೀತ ಮತ್ತು ಸ್ವತಂತ್ರ ಕೊಲಿಜಿಯಂ/ಆಯ್ಕೆ ಸಮಿತಿ ಹುಟ್ಟು ಹಾಕುವ ಸಂಬಂಧ ನಿರ್ದೇಶನ ನೀಡಬೇಕು” ಎಂದು ಮನವಿಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಕೋರಿದ್ದಾರೆ.
ಚುನಾವಣಾ ಆಯೋಗದ ಸದಸ್ಯರ ನೇಮಕಾತಿಯು ಕಾರ್ಯಾಂಗದ ಇಷ್ಟಾನಿಷ್ಟಗಳಿಗೆ ತಕ್ಕಂತೆ ನಡೆಯುವುದು ಆ ಸಂಸ್ಥೆಯನ್ನು ರಚಿಸಿರುವ ಮೂಲ ಉದ್ದೇಶವನ್ನೇ ಉಲ್ಲಂಘಿಸುತ್ತದೆ. ಆ ಮೂಲಕ ಅದನ್ನು ಕಾರ್ಯಾಂಗದ ಮತ್ತೊಂದು ಅಂಗವಾಗಿ ಮಾಡುತ್ತದೆ ಎಂದು ಎಡಿಆರ್ ತನ್ನ ಅರ್ಜಿಯಲ್ಲಿ ವಾದಿಸಿದೆ.
ಚುನಾವಣಾ ಆಯೋಗವು ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಜವಾಬ್ದಾರಿಯನ್ನಷ್ಟೇ ನಿಭಾಯಿಸುವುದಿಲ್ಲ. ಅದು ಆಡಳಿತಾರೂಢ ಸರ್ಕಾರದ ಸಹಿತ ಎಲ್ಲ ರಾಜಕೀಯ ಪಕ್ಷಗಳ ಜೊತೆ ಅರೆನ್ಯಾಯಿಕ ಸಂಸ್ಥೆಯ ಸ್ವರೂಪದಲ್ಲಿ ಕೆಲಸ ಮಾಡುತ್ತದೆ.
ಹಾಗಾಗಿ, ಚುನಾವಣಾ ಆಯೋಗದ ಸದಸ್ಯರ ನೇಮಕದಲ್ಲಿ ಕಾರ್ಯಾಂಗವು ಏಕಾಂಗಿಯಾಗಿ ಪಾಲ್ಗೊಳ್ಳುವುದು ಸರಿಯಲ್ಲ. ಏಕೆಂದರೆ ಅದು ಆಡಳಿತ ಪಕ್ಷಕ್ಕೆ ನಿಷ್ಠೆಯನ್ನು ಖಾತ್ರಿಪಡಿಸಿಕೊಳ್ಳುವ ವ್ಯಕ್ತಿಯನ್ನು ಆಯ್ಕೆ ಮಾಡಲು ಅನಿಯಂತ್ರಿತ ವಿವೇಚನೆಯನ್ನು ನೀಡುತ್ತದೆ ಮತ್ತು ಆ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಪ್ರಭಾವಿಸಬಹುದಾದ ಸುಲಭಸಾಧ್ಯತೆಯನ್ನು ನೀಡುತ್ತದೆ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗವನ್ನು ಅಸಮರ್ಥವಾಗಿಸುವುದರ ಜೊತೆಗೆ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.