Andhra Pradesh, Telangana water dispute 
ಸುದ್ದಿಗಳು

ಜಲ ವಿವಾದ: ತೆಲಂಗಾಣ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಆಂಧ್ರಪ್ರದೇಶ

ಬಚಾವತ್ ತೀರ್ಪು ಮತ್ತು ಆಂಧ್ರಪ್ರದೇಶ ಮರುರಚನೆ ಕಾಯಿದೆ- 2014ರ ನಿಬಂಧನೆಗಳನ್ನು ತೆಲಂಗಾಣ ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Bar & Bench

ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗಾಗಿನ ತನ್ನ ನ್ಯಾಯಸಮ್ಮತ ನೀರಿನ ಪಾಲನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಆಂಧ್ರಪ್ರದೇಶ ಸರ್ಕಾರ ತೆಲಂಗಾಣ ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಶ್ರೀಶೈಲಂ ಅಣೆಕಟ್ಟು ಯೋಜನೆಯಡಿ, ತೆಲಂಗಾಣ ವಿದ್ಯುತ್ ಉತ್ಪಾದಿಸುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಇದನ್ನು ತಡೆಯುವಂತೆ ತೆಲಂಗಾಣಕ್ಕೆ ವಿನಂತಿ ಮಾಡಲಾಗಿದ್ದರೂ ಅದನ್ನು ಪಾಲಿಸಿಲ್ಲ ಎಂದು ಅರ್ಜಿಯಲ್ಲಿ ದೂರು ನೀಡಲಾಗಿದೆ.

ಜೊತೆಗೆ ನಾಗಾರ್ಜುನಸಾಗರ ಯೋಜನೆ, ಪುಲಿಚಿಂತಿಲ ಯೋಜನೆಗಳಲ್ಲಿ ನೀರಿನ ಲಭ್ಯತೆ ಇಲ್ಲದಿರುವುದು ಆಂಧ್ರದ ಜನರಿಗೆ ಸಂಕಷ್ಟ ಉಂಟು ಮಾಡಿದೆ. ತೆಲಂಗಾಣ ಸರ್ಕಾರದ ಕ್ರಮಗಳು ಅಸಾಂವಿಧಾನಿಕ ಮತ್ತು ಆಂಧ್ರಪ್ರದೇಶದ ಜನರ ಜೀವಿಸುವ ಹಕ್ಕನ್ನು ಉಲ್ಲಂಘಿಸಿವೆ. ಆಂಧ್ರಪ್ರದೇಶ ಮರುರಚನಾ ಕಾಯಿದೆ 2014ರ ಅಡಿಯಲ್ಲಿ ರಚಿಸಲಾದ ಸರ್ವೋಚ್ಚ ಸಮಿತಿ ಮತ್ತು ಕೇಂದ್ರ ಸರ್ಕಾರದ ನಿರ್ದೇಶನದಡಿ ರಚಿಸಲಾಗಿರುವ ಕೃಷ್ಣಾ ನದಿ ನಿರ್ವಹಣಾ ಮಂಡಳಿಯ (ಕೆಆರ್‌ಎಂಬಿ) ನಿರ್ದೇಶನಗಳನ್ನು ಪಾಲಿಸಲು ತೆಲಂಗಾಣ ನಿರಾಕರಿಸುತ್ತಿದೆ ಎಂದು ಆಂಧ್ರಪ್ರದೇಶ ವಿವರಿಸಿದೆ.

ಬಚಾವತ್‌ ತೀರ್ಪು ಎಂದೇ ಪ್ರಸಿದ್ಧವಾದ 1976ರ ಮೇ 31ರಂದು ನೀಡಲಾಗಿದ್ದ ತೀರ್ಪನ್ನು ಆಂಧ್ರಪ್ರದೇಶ ಮರುರಚನೆ ಕಾಯಿದೆ- 2014ರ ನಿಬಂಧನೆಗಳನ್ನು ತೆಲಂಗಾಣ ಉಲ್ಲಂಘಿಸಿದೆ. 2014 ರಲ್ಲಿ ರಾಜ್ಯ ಮರುರಚನೆಯಾಗಿದ್ದರೂ ಸರ್ವೋಚ್ಚ ಸಮಿತಿಯನ್ನು ಸಮಯಕ್ಕೆ ಸರಿಯಾಗಿ ಘೋಷಿಸಲಾಗಿದ್ದರೂ , ಕೆಆರ್‌ಎಂಬಿ ಮಂಡಳಿಯ ವ್ಯಾಪ್ತಿಯನ್ನು 2014 ರ ಸೆಕ್ಷನ್ 87 ರ ಅಡಿಯಲ್ಲಿ ಇನ್ನೂ ಘೋಷಿಸಿಲ್ಲ. ತೆಲಂಗಾಣ ರಾಜ್ಯ ಮತ್ತು ಅದರ ಅಧಿಕಾರಿಗಳು ಗಂಭೀರ ಸಾಂವಿಧಾನಿಕ ಸಮಸ್ಯೆಗಳನ್ನು ಸೃಷ್ಟಿಸಲು ಇದು ಕಾರಣವಾಗುತ್ತಿದೆ ಎಂದು ವಕೀಲ ಮೆಹ್ಫೂಜ್‌ ಎ ನಜ್ಕಿ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಆಂಧ್ರಪ್ರದೇಶದ ಪ್ರಮುಖ ಕೋರಿಕೆಗಳು:

- 2014ರ ಕಾಯಿದೆಯ ಪ್ರಕಾರ ನ್ಯಾಯವ್ಯಾಪ್ತಿಯನ್ನು ತಿಳಿಸಲು ತೆಲಂಗಾಣ ಸರ್ಕಾರಕ್ಕೆ ನಿರ್ದೇಶನ ನೀಡಿ.

- 2021ರ ಜೂನ್ 28 ರಂದು ತೆಲಂಗಾಣ ಸರ್ಕಾರ ಜಾರಿಗೊಳಿಸಿದ ಆದೇಶ ಅನ್ಯಾಯದಿಂದ ಕೂಡಿದ್ದು ಕಾನೂನುಬಾಹಿರವಾಗಿರುವುದರಿಂದ ಅದನ್ನು ರದ್ದುಗೊಳಿಸಬೇಕು.

- ಶ್ರೀಶೈಲಂ, ನಾಗಾರ್ಜುನ ಸಾಗರ ಮತ್ತು ಪುಲಿಚಿಂತಲ ಸಾಮಾನ್ಯ ಜಲಾಶಯಗಳ ಮೇಲೆ ಆಂಧ್ರಪ್ರದೇಶಕ್ಕೆ ನಿಯಂತ್ರಣ ದೊರೆಯಬೇಕು.