ಖುಷಿಗಾಗಿ ಪೌರ ಕಾರ್ಮಿಕರು ಶೌಚಗುಂಡಿಗೆ ಇಳಿದರೆ? ಜಲ ಮಂಡಳಿ ವಿರುದ್ಧ ಕರ್ನಾಟಕ ಹೈಕೋರ್ಟ್ ಕಿಡಿ
Manual Scavenging

ಖುಷಿಗಾಗಿ ಪೌರ ಕಾರ್ಮಿಕರು ಶೌಚಗುಂಡಿಗೆ ಇಳಿದರೆ? ಜಲ ಮಂಡಳಿ ವಿರುದ್ಧ ಕರ್ನಾಟಕ ಹೈಕೋರ್ಟ್ ಕಿಡಿ

ಶೌಚಗುಂಡಿಗೆ ಇಳಿದು ನಿಧನರಾದವರಲ್ಲಿ ಒಬ್ಬ ಕಾರ್ಮಿಕ ಸ್ವಯಂಪ್ರೇರಣೆಯಿಂದ ಮ್ಯಾನ್‌ಹೋಲ್‌ಗೆ ಇಳಿದಿದ್ದರು ಎಂಬ ಮಂಡಳಿಯ ಹೇಳಿಕೆ ಪೀಠವನ್ನು ಕೆರಳಿಸಿತು.

ಶೌಚಗುಂಡಿ ಸ್ವಚ್ಛತೆ ಮತ್ತು ಅದರಿಂದುಂಟಾಗುವ ಸಾವುಗಳ ಕುರಿತಂತೆ ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಕಲಬುರ್ಗಿಯಲ್ಲಿ ಶೌಚಗುಂಡಿಗೆ ಇಳಿದು ನಿಧನರಾದವರಲ್ಲಿ ಒಬ್ಬ ಕಾರ್ಮಿಕ, ಸ್ವಯಂಪ್ರೇರಣೆಯಿಂದ ಮಲದಗುಂಡಿಗೆ ಇಳಿದಿದ್ದರು ಎಂಬ ಮಂಡಳಿಯ ಹೇಳಿಕೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವನ್ನು ಕೆರಳಿಸಿತು.

"ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಮಲದ ಗುಂಡಿಗೆ ಇಳಿದರು ಎಂದು ನೀವು ಹೇಗೆ ನಿಲುವು ತಳೆಯಬಹುದು? ನಿಮ್ಮ (ಮಂಡಳಿ) ಶೋಧನೆಗಳ ಸ್ವರೂಪದ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಶೌಚಗುಂಡಿ ಕಾರ್ಮಿಕರು ತಮ್ಮ ಖುಷಿಗಾಗಿ ಮ್ಯಾನ್‌ಹೋಲ್‌ಗೆ ಇಳಿದರು ಎಂದು ನೀವು ಸೂಚಿಸುತ್ತಿದ್ದೀರಾ?” ಎಂದು ಖಾರವಾಗಿ ಪ್ರಶ್ನಿಸಿತು.

ಪೌರ ಕಾರ್ಮಿಕರು ತಮ್ಮ ಖುಷಿಗಾಗಿ ಮ್ಯಾನ್ಹೋಲ್ಗಳಿಗೆ ಇಳಿದರು ಎಂದು ನೀವು ಸೂಚಿಸುತ್ತಿದ್ದೀರಾ?
ಕರ್ನಾಟಕ ಹೈಕೋರ್ಟ್

ಶೌಚಗುಂಡಿಗೆ ಪೌರ ಕಾರ್ಮಿಕರನ್ನು ಇಳಿಸುವ ಪ್ರವೃತ್ತಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಜನವರಿ 28ರಂದು ಕಲಬುರ್ಗಿಯಲ್ಲಿ ಮಲದ ಗುಂಡಿಗೆ ಇಳಿದು ಉಸಿರುಗಟ್ಟಿ ಮೃತಪಟ್ಟವರ ಬಗ್ಗೆ ಪೀಠ ನಿರ್ದಿಷ್ಟವಾಗಿ ವಿಚಾರಣೆ ನಡೆಸುತ್ತಿತ್ತು.

“ಮಲದ ಗುಂಡಿಯಲಿ ಸಮಸ್ಯೆ ಏನಿದೆ ಎಂದು ಪರಿಶೀಲಿಸಲು ವ್ಯಕ್ತಿಯೊಬ್ಬರು ಸ್ವತಃ ಶೌಚಗುಂಡಿಗೆ ಇಳಿದರು. ಒಳಗೆ ಇಳಿದ ನಂತರ ಅವರು ಪ್ರಜ್ಞೆ ತಪ್ಪಿದರು. ಇದನ್ನು ಕಂಡು ಮತ್ತೊಬ್ಬ ಕಾರ್ಮಿಕ ಕೂಡ ಗುಂಡಿಗೆ ಇಳಿದು ಅಲ್ಲಿ ಸಿಲುಕಿಕೊಂಡರು. ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬಳಿಕ ಮೃತಪಟ್ಟರು” ಎಂದು ಮಂಡಳಿ ತನ್ನ ಆಂತರಿಕ ತನಿಖೆ ಪೂರ್ಣಗೊಳಿಸಿದ ನಂತರ ಗುರುವಾರ ನ್ಯಾಯಾಲಯಕ್ಕೆ ತಿಳಿಸಿತು.

ಈ ಹೇಳಿಕೆಯನ್ನು ಒಪ್ಪಲು ಇಚ್ಛಿಸದ ನ್ಯಾಯಾಲಯ “ವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ಗುಂಡಿಗೆ ಇಳಿದರು ಎಂದು ಮಂಡಳಿ ಹೇಗೆ ಹೇಳುತ್ತದೆ” ಎಂದು ಪ್ರಶ್ನಿಸಿತು.

“ಅವರು ಮಲದ ಗುಂಡಿಗೆ ಏಕೆ ಇಳಿದರು? ಏಕೆಂದರೆ ಅವರನ್ನು (ಇಳಿಯಿರಿ) ಎಂದು ಕೇಳಲಾಯಿತು, ಸರಿಯೇ?” ಎಂದು ಪ್ರಶ್ನಿಸಿತು.

Also Read
ಪೊಲೀಸರು‌ ಏನು ಮಾಡಿದ್ದಾರೆ ಎಂಬುದು ತಿಳಿಯಬೇಕು: ಪೌರ ಕಾರ್ಮಿಕರ ಸಾವಿನ ತನಿಖಾ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ

ಆಗ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮಂಡಳಿ ಇಡೀ ಘಟನೆಗೆ ಸಂಬಂಧಿಸಿದಂತೆ ಐದು ಮಂದಿ ಪ್ರತ್ಯಕ್ಷದರ್ಶಿಗಳಿದ್ದಾರೆ ಎಂದು ತಿಳಿಸಿತು. ಅವರನ್ನು ಮಲದಗುಂಡಿಗೆ ಇಳಿಯಲು ಸೂಚಿಸಿದ್ದರೆ ಅವರನ್ನು ನೇಮಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಂಡಳಿ ಪರ ವಕೀಲರು ತಿಳಿಸಿದರು. ಆಗ ನ್ಯಾಯಾಲಯ “ಗುತ್ತಿಗೆದಾರರ ವಿರುದ್ಧ ನೀವು ಏನು ಕ್ರಮ ಕೈಗೊಂಡಿದ್ದೀರಿ?” ಎಂದು ಪ್ರಶ್ನಿಸಿತು. ಅದಕ್ಕೆ ಮಂಡಳಿ ಪರ ವಕೀಲರು “ಕೆಲ ದಿನಗಳ ಹಿಂದೆ ಒಪ್ಪಂದದ ಅವಧಿ ಮುಗಿದಿದ್ದು ಗುತ್ತಿಗೆದಾರರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ ಎಂದರು. ಈ ಹಂತದಲ್ಲಿ ಪೀಠ “ನೀವು ಅವರಿಗೆ ಬೇರೆ ಎಲ್ಲಿಯಾದರೂ ಕೆಲಸ ನೀಡಿರಬೇಕು” ಎಂದು ವ್ಯಂಗ್ಯವಾಡಿತು.

ಇಬ್ಬರು ಪೌರ ಕಾರ್ಮಿಕರ ಸಾವಿಗೆ ಯಾರೂ ಕಾರಣರಲ್ಲ ಎಂಬ ಅಧಿಕಾರಿಗಳ ನಿಲುವಿಗೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು. “ಈಗ ಇಬ್ಬರು ಕಾರ್ಮಿಕರ ಸಾವಿಗೆ ಯಾರೂ ಹೊಣೆಗಾರರಲ್ಲ ತಾನೇ? ನೀವು (ಮಂಡಳಿ) ಅಲ್ಲ, ಗುತ್ತಿಗೆದಾರರೂ ಅಲ್ಲ?” ಎಂದು ಕುಟುಕಿತು. ಬಳಿಕ ಪೀಠ, ಇಬ್ಬರು ಮೃತ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಮಲದಗುಂಡಿಗೆ ಇಳಿದರೆ ಅಥವಾ ಹಾಗೆ ಇಳಿಯಲು ಸೂಚಿಸಲಾಗಿತ್ತೇ ಎಂದು ಪತ್ತೆ ಹಚ್ಚಲು ಐದು ಮಂದಿ ಪ್ರತ್ಯಕ್ಷದರ್ಶಿಗಳ ವರದಿ ಸಲ್ಲಿಸುವಂತೆ ಮಂಡಳಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 6ಕ್ಕೆ ನಿಗದಿಯಾಗಿದೆ.

ಶೌಚಗುಂಡಿ ಕಾರ್ಮಿಕರ ವೃತ್ತಿ ನಿಷೇಧ ಮತ್ತು ಪುನರ್ವಸತಿ ಕಾಯಿದೆ- 2013ರ ಸೂಕ್ತ ಅನುಷ್ಠಾನಕ್ಕಾಗಿ 2020ರ ಡಿಸೆಂಬರ್‌ನಲ್ಲಿ ಹೈಕೋರ್ಟ್ ನಿರ್ದೇಶನಗಳನ್ನು ನೀಡಿತ್ತು. ಆದರೂ 2021ರ ಜನವರಿಯಲ್ಲಿ ಇಬ್ಬರು ಶೌಚಗುಂಡಿ ಕಾರ್ಮಿಕರು ಮೃತಪಟ್ಟಿದ್ದು ನ್ಯಾಯಾಲಯ ಮತ್ತೆ ಪ್ರಕರಣವನ್ನು ಪರಿಗಣಿಸಲು ಪ್ರೇರಣೆ ಒದಗಿಸಿತ್ತು. ಕಾಯಿದೆಯ ನಿಬಂಧನೆ ಜಾರಿಗೆ ತರಲು ಸರ್ಕಾರ ವಿಫಲವಾಗಿದೆ ಎಂದು ಪೀಠ ಫೆಬ್ರವರಿಯಲ್ಲಿ ಅಭಿಪ್ರಾಯಪಟ್ಟಿತ್ತು.

No stories found.
Kannada Bar & Bench
kannada.barandbench.com