ಮಹತ್ವದ ಬೆಳವಣಿಗೆಯೊಂದರಲ್ಲಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು 1972ರ ಗ್ರಾಚ್ಯುಟಿ ಪಾವತಿ ಕಾಯಿದೆಯಡಿಯಲ್ಲಿ ಗ್ರಾಚ್ಯುಟಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಮಣಿಬೆನ್ ಮಗನ್‌ಭಾಯ್ ಭಾರಿಯಾ ಮತ್ತು ದಾಹೋದ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ನಡುವಣ ಪ್ರಕರಣ].
ಅಂಗನವಾಡಿ ಕೇಂದ್ರಗಳಿಗೆ ಗ್ರಾಚ್ಯುಟಿ ಪಾವತಿ ಕಾಯ್ದೆ ಅನ್ವಯವಾಗುತ್ತದೆ ಎಂದು ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕ್ ಮತ್ತು ಅಜಯ್ ರಾಸ್ತೋಗಿ ಅವರ ಪೀಠ, ಇಂತಹ ಕಾರ್ಮಿಕರ ಕೆಲಸದ ಸ್ಥಿತಿ ಸುಧಾರಿಸುವ ಸಮಯ ಬರಬೇಕಿದೆ ಎಂದು ಅಭಿಪ್ರಾಯಪಟ್ಟಿತು.
ಅಂಗನವಾಡಿ ಕೇಂದ್ರಗಳಲ್ಲಿನ ಕೆಲಸದ ಸ್ವರೂಪ, ಅದರ ತೀವ್ರ ಹೆಚ್ಚಳ ಹಾಗೂ ಸೇವೆಗಳ ವಿತರಣೆಯ ಗುಣಮಟ್ಟ ಜೊತೆಗೆ ಸಮುದಾಯ ಭಾಗವಹಿಸುವಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಖಾತ್ರಿಪಡಿಸಿಕೊಳ್ಳಬೇಕಾದ ಸಮಯ ಬಂದಿದೆ. ತಮ್ಮ ಕೆಲಸದ ಸ್ವರೂಪಕ್ಕನುಗಣವಾಗಿ ಧ್ವನಿ ಇಲ್ಲದವರಿಗೆ ಉತ್ತಮ ಸೇವಾ ಸ್ಥಿತಿ ಒದಗಿಸಲು ವಿಧಾನಗಳನ್ನು ಕಂಡುಕೊಳ್ಳಬೇಕಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಮುಖ ತೀರ್ಪನ್ನು ಬರೆದ ನ್ಯಾ. ಓಕ್ ಅವರು, “ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಸ್ತುತ ಕೇಂದ್ರ ಸರ್ಕಾರದ ವಿಮಾ ಯೋಜನೆಯಡಿಯಲ್ಲಿ ಅತ್ಯಂತ ಕಡಿಮೆ ಸಂಭಾವನೆ ದೊರೆಯುತ್ತಿದ್ದು ಅತ್ಯಲ್ಪ ಪ್ರಯೋಜನ ನೀಡಲಾಗುತ್ತಿದೆ” ಎಂದು ಹೇಳಿದರು.
ಅಂತೆಯೇ ಅಂಗನವಾಡಿ ಕೇಂದ್ರಗಳಿಗೆ ಗ್ರಾಚ್ಯುಟಿ ಪಾವತಿ ಕಾಯಿದೆ ಅನ್ವಯವಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಟಿ ಪಾವತಿಗೆ ಅರ್ಹರು ಎಂದು ಕೆಳಹಂತದ ವೇದಿಕೆಗಳು ನೀಡಿದ್ದ ಆದೇಶವನ್ನು ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಬಳಿಕ ಅದನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಅರ್ಜಿದಾರರು ಗುಜರಾತ್ ಮೂಲದ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಾಗಿದ್ದು ನಿವೃತ್ತಿ ನಂತರ ತಮಗೆ ಗ್ರಾಚ್ಯುಟಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.