Anil Ambani and Supreme Court  
ಸುದ್ದಿಗಳು

ವಂಚನೆ ವರ್ಗಕ್ಕೆ ಬ್ಯಾಂಕ್ ಖಾತೆ: ಸುಪ್ರೀಂ ಕೋರ್ಟ್ ಮೊರೆ ಹೋದ ಅನಿಲ್ ಅಂಬಾನಿ

ಆರ್‌ಕಾಮ್‌ನ ಪ್ರವರ್ತಕ ಮತ್ತು ನಿಯಂತ್ರಕರಾಗಿರುವ ಅನಿಲ್ ಅಂಬಾನಿ ಅವರು ಎಸ್‌ಬಿಐ ಕೈಗೊಂಡ ಕ್ರಮದ ಪರಿಣಾಮ ಎದುರಿಸಬೇಕು ಎಂದು ಬಾಂಬೆ ಹೈಕೋರ್ಟ್ ಅಕ್ಟೋಬರ್ 2025 ರಲ್ಲಿ ತೀರ್ಪು ನೀಡಿತ್ತು.

Bar & Bench

ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್  ಮತ್ತದರ ಪ್ರವರ್ತಕರ ಸಾಲದ ಖಾತೆಗಳನ್ನು ವಂಚನೆ ವರ್ಗಕ್ಕೆ ಸೇರಿಸಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಹೊರಡಿಸಿದ್ದ ನಿರ್ಧಾರ ಎತ್ತಿಹಿಡಿದಿದ್ದ ಬಾಂಬೆ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಉದ್ಯಮಿ ಅನಿಲ್‌ ಅಂಬಾನಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಅನಿಲ್ ಅಂಬಾನಿ ಮತ್ತು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವಣ ಪ್ರಕರಣ].

ಕಳೆದ ವಾರ ಮೇಲ್ಮನವಿ ಸಲ್ಲಿಸಲಾಗಿದ್ದು, ಪ್ರಕರಣವನ್ನು ಇನ್ನೂ ಪಟ್ಟಿ ಮಾಡಲಾಗಿಲ್ಲ ಎಂದು ನಿಕಟ ಮೂಲಗಳು ʼಬಾರ್ & ಬೆಂಚ್‌ʼಗೆ ತಿಳಿಸಿವೆ.

ಆರ್‌ಕಾಮ್‌ನ ಪ್ರವರ್ತಕ ಮತ್ತು ನಿಯಂತ್ರಕರಾಗಿರುವ ಅನಿಲ್ ಅಂಬಾನಿ ಎಸ್‌ಬಿಐ ಕೈಗೊಂಡ ಕ್ರಮದ ಪರಿಣಾಮ ಎದುರಿಸಬೇಕು ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರಿದ್ದ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ ಅಕ್ಟೋಬರ್ 2025 ರಲ್ಲಿ ತೀರ್ಪು ನೀಡಿತ್ತು.

ಆರ್‌ಕಾಮ್, ರಿಲಯನ್ಸ್ ಟೆಲಿಕಾಂ ಮತ್ತು ರಿಲಯನ್ಸ್ ಇನ್ಫ್ರಾಟೆಲ್‌ಗೆ ₹3,600 ಕೋಟಿಗೂ ಹೆಚ್ಚಿನ ಸಾಲವನ್ನು 2012 ಮತ್ತು 2016 ರ ನಡುವೆ, ಎಸ್‌ಬಿಐ ಮಂಜೂರು ಮಾಡಿತ್ತು. ಸುಸ್ತಿದಾರನಾದ ನಂತರ, ಆರ್‌ಕಾಮ್‌ನ ಖಾತೆಯನ್ನು ಆಗಸ್ಟ್ 2016 ರಲ್ಲಿ ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ಘೋಷಿಸಿತ್ತು.

ಬಿಡಿಒ ಇಂಡಿಯಾ ನಡೆಸಿದ್ದ 2013–2017ರ ವಿಶೇಷ ಲೆಕ್ಕ ಪರಿಶೋಧನೆ (ಫೊರೆನ್ಸಿಕ್‌ ಆಡಿಟ್‌) ವೇಳೆ ಅನೇಕ ಅಕ್ರಮಗಳು ಪತ್ತೆಯಾಗಿದ್ದವು. ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್‌) ಮತ್ತದರ ಪ್ರವರ್ತಕ ಅನಿಲ್ ಅಂಬಾನಿ ಅವರ ಸಾಲದ ಖಾತೆಗಳನ್ನು ಜೂನ್ 2025ರಲ್ಲಿ ಎಸ್‌ಬಿಐ ವಂಚನೆ ವರ್ಗಕ್ಕೆ ಸೇರಿಸಿತ್ತು. ಹಣದ ಮರು ಹೊಂದಾಣಿಕೆ, ಒಪ್ಪಂದ ಉಲ್ಲಂಘನೆ ಹಾಗೂ ಸಂಬಂಧಿತ ಪಕ್ಷಕಾರರ ವಹಿವಾಟುಗಳ ಕಾರಣಕ್ಕೆ ಖಾತೆಯನ್ನು ತಾನು ವಂಚನೆ ವರ್ಗಕ್ಕೆ ಸೇರಿಸುತ್ತಿರುವುದಾಗಿ ಅದು ಹೇಳಿತ್ತು. ನಂತರ ಆರ್‌ಬಿಐಗೆ ಮಾಹಿತಿ ನೀಡಿದ್ದ ಅದು ಸಿಬಿಐಗೆ ಮೊರೆ ಹೋಗಲು ನಿರ್ಧರಿಸಿತ್ತು.

ತಾನು ಕಾರ್ಯ ನಿರ್ವಹಣಾ ನಿರ್ದೇಶಕನಲ್ಲ. ತಮ್ಮ ಆಯ್ಕೆ ಪ್ರತ್ಯೇಕವಾದದುದು. ಮತ್ತೊಂದೆಡೆ ಪ್ರತಿವಾದ ಮಂಡಿಸಲು ತನಗೆ ಸಾಕಷ್ಟು ಸಮಯಾವಕಾಶ ದೊರೆತಿಲ್ಲ‌ ಎಂದು ಅನಿಲ್‌ ಅಂಬಾನಿ ವಾದಿಸಿದ್ದರು.

ಆದರೆ ವಂಚನೆ ವರ್ಗಕ್ಕೆ ಖಾತೆಗಳನ್ನು ಸೇರಿಸುವ ಸಂಬಂಧ ಆರ್‌ಬಿಐ ಜುಲೈ 2024ರಲ್ಲಿ ನೀಡಿದ್ದ ಅತಿಮುಖ್ಯ ನಿರ್ದೇಶನಗಳನ್ನು ಎಸ್‌ಬಿಐ ಪಾಲಿಸಿದೆ ಎಂಬುದನ್ನು ಗಮನಿಸಿದ ಹೈಕೋರ್ಟ್‌ ಅರ್ಜಿ ವಜಾಗೊಳಿಸಿತ್ತು.

ಗಮನಾರ್ಹ ಸಂಗತಿ ಎಂದರೆ, ಆರ್‌ಬಿಐನ ಪ್ರಧಾನ ಸುತ್ತೋಲೆ ಪಾಲಿಸದಿರುವುದನ್ನು ಉಲ್ಲೇಖಿಸಿ, ಅಂಬಾನಿ ವಿರುದ್ಧ ಕೆನರಾ ಬ್ಯಾಂಕ್ ಹೊರಡಿಸಿದ್ದ ಇದೇ ರೀತಿಯ ಆದೇಶವನ್ನು ಇದೇ ಪೀಠ ಈ ಹಿಂದೆ  ತಡೆಹಿಡಿದಿತ್ತು. ಆ ಸುತ್ತೋಲೆಯ ಅನ್ವಯ ಯಾವುದೇ ಖಾತೆಯನ್ನು ವಂಚನೆ ವರ್ಗಕ್ಕೆ ಸೇರ್ಪಡಿಸುವುದಕ್ಕೂ ಮುನ್ನ ಸಾಲದಾತರನ್ನು ಆಲಿಸಬೇಕು ಎನ್ನಲಾಗಿತ್ತು. ತದನಂತರ ಕೆನರಾ ಬ್ಯಾಂಕ್‌ ತಾನು ವರ್ಗೀಕರಣ ಆದೇಶವನ್ನು ಹಿಂಪಡೆದಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನ್ಯಾಯಾಲಯ ವಿಲೇವಾರಿ ಮಾಡಿತ್ತು.

ಖಾತೆಯನ್ನು ವಂಚನೆ ವರ್ಗಕ್ಕೆ ಸೇರಿಸಿದ್ದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ  ನಿರ್ಧಾರದ ವಿರುದ್ಧವೂ ಅನಿಲ್‌‌ ಅಂಬಾನಿ ಅರ್ಜಿ ಸಲ್ಲಿಸಿದ್ದರು. ಆದರೆ, ಅದೇ ಪೀಠ ತಡೆಯಾಜ್ಞೆ ನೀಡಿರಲಿಲ್ಲ. ಬದಲಿಗೆ  ಆರ್‌ಬಿಐ ಸಂಪರ್ಕಿಸುವಂತೆ ಸೂಚಿಸಿತ್ತು.