ಐಡಿಬಿಐ ಬ್ಯಾಂಕ್ ಶೋಕಾಸ್ ನೋಟಿಸ್ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಉದ್ಯಮಿ ಅನಿಲ್ ಅಂಬಾನಿ ಅಕ್ಟೋಬರ್ 28 ರಂದು ಹಿಂಪಡೆದಿದ್ದಾರೆ [ಅನಿಲ್ ಅಂಬಾನಿ ಮತ್ತು ಐಡಿಬಿಐ ನಡುವಣ ಪ್ರಕರಣ].
ಮಧ್ಯಂತರ ಆದೇಶ ಹೊರಡಿಸಲು ಒಲವಿಲ್ಲ ಎಂದು ನ್ಯಾಯಾಲಯ ಹೇಳಿದ ಬಳಿಕ ಅವರು ಅರ್ಜಿ ಹಿಂಪಡೆದರು. ತನಗೆ ಬ್ಯಾಂಕ್ ಎಲ್ಲ ದಾಖಲೆಗಳನ್ನು ಒದಗಿಸುವವರೆಗೆ ಮತ್ತು ಪ್ರತಿಕ್ರಿಯಿಸಲು ನ್ಯಾಯಯುತ ಅವಕಾಶವನ್ನು ನೀಡುವವರೆಗೆ ಅಕ್ಟೋಬರ್ 30ರಂದು ಐಡಿಬಿಐ ನಿಗದಿಪಡಿಸಿದ್ದ ವೈಯಕ್ತಿಕ ವಿಚಾರಣೆ ನಡೆಸದಂತೆ ಅನಿಲ್ ಅವರ ಅರ್ಜಿ ಕೋರಿತ್ತು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸಂದೇಶ್ ಪಾಟೀಲ್ ಅವರಿದ್ದ ರಜಾಕಾಲೀನ ಪೀಠ ಯಾವುದೇ ಮಧ್ಯಂತರ ಆದೇಶ ಹೊರಡಿಸಲು ತನಗೆ ಒಲವು ಇಲ್ಲ ಎಂದು ತಿಳಿಸಿತು. ಆನಂತರ ಅನಿಲ್ ಅಂಬಾನಿ ಅವರು ಐಡಿಬಿಐ ಬ್ಯಾಂಕ್ ನಡೆಸುವ ವಿಚಾರಣೆಗೆ ಹಾಜರಾಗಲು ಮೊದಲಿಗೆ ಪ್ರತಿಭಟಿಸಿದರಾದರೂ ನಂತರ ಒಪ್ಪಿದರು.
ಅರ್ಜಿ ಹಿಂಪಡೆಯಲು ಅನುಮತಿಸಿದ ನ್ಯಾಯಾಲಯ ಬ್ಯಾಂಕ್ ಎದುರು ತನ್ನ ಸಮಗ್ರ ವಾದ ಮಂಡಿಸಲು ಮತ್ತು ಯಾವುದೇ ಪ್ರತಿಕೂಲ ಆದೇಶ ಬಂದರೆ, ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯ ನೀಡಿತು.
ಪ್ರಕರಣದ ಅರ್ಹತೆಯ ಬಗ್ಗೆ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದು ನ್ಯಾಯಮೂರ್ತಿ ಪಾಟೀಲ್ ಸ್ಪಷ್ಟಪಡಿಸಿದರು.
ಸಾಲ ಖಾತೆಗಳನ್ನು "ವಂಚನೆ" ಎಂದು ವರ್ಗೀಕರಿಸುವ ಕಾರ್ಯವಿಧಾನವನ್ನು ನಿಯಂತ್ರಿಸುವ ಸಂಬಂಧ ವಾಣಿಜ್ಯ ಬ್ಯಾಂಕುಗಳಲ್ಲಿ ವಂಚನೆ ಅಪಾಯ ನಿರ್ವಹಣೆ ಕುರಿತ ಭಾರತೀಯ ರಿಸರ್ವ್ ಬ್ಯಾಂಕಿನ ಸಮಗ್ರ ನಿರ್ದೇಶನಗಳ ಅಡಿಯಲ್ಲಿ ಐಡಿಬಿಐ ಬ್ಯಾಂಕ್ ಶೋಕಾಸ್ ನೋಟಿಸ್ ನೀಡಿತ್ತು.
ಐಡಿಬಿಐ ಬ್ಯಾಂಕಿನ ಕ್ರಮವು ದಿವಾಳಿತನ ಪ್ರಕ್ರಿಯೆಗೆ ಒಳಗಾಗುತ್ತಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್‌ಗೆ (ಆರ್‌ಕಾಮ್) ಗೆ ಅನ್ವಯಿಸಲಾದ ₹750 ಕೋಟಿ ಮೌಲ್ಯದ ಸಾಲಕ್ಕೆ ಸಂಬಂಧಿಸಿದೆ . ಹಣದ ದುರುಪಯೋಗ ನಡೆದಿರುವುದರಿಂದ ಆರ್ ಕಾಮ್‌ನ ಖಾತೆಯನ್ನು ವಂಚನೆ ವರ್ಗಕ್ಕೆ ಸೇರಿಸಬೇಕು ಎಂಬುದು ಬ್ಯಾಂಕ್‌ನ ವಾದವಾಗಿತ್ತು.
ಬ್ಯಾಂಕ್ ತನ್ನ ಆರೋಪಗಳಿಗೆ ಆಧಾರವಾಗಿರುವ ಸಂಪೂರ್ಣ ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿ ಮತ್ತು ಅನುಬಂಧಗಳನ್ನು ಹಂಚಿಕೊಂಡಿಲ್ಲ ಎಂದು ವಾದಿಸಿ, ವಿಚಾರಣೆಯನ್ನು ಮುಂದೂಡಬೇಕೆಂದು ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಕೋರಿದರು.
ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ಬ್ಯಾಂಕ್ ತನ್ನ ಆರೋಪಗಳಿಗೆ ಆಧಾರವಾಗಿರುವ ಸಂಪೂರ್ಣ ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿ ಹಾಗೂ ಅದರ ಅನುಬಂಧಗಳನ್ನು ನೀಡದೆ ಇರುವುದರಿಂದ ವಿಚಾರಣೆ ಮುಂದೂಡಬೇಕು ಎಂಬುದು ಅನಿಲ್ ಅವರ ಕೋರಿಕೆಯಾಗಿತ್ತು.
ಈ ತಿಂಗಳ ಆರಂಭದಲ್ಲಿ, ಬಾಂಬೆ ಹೈಕೋರ್ಟ್ ಅವರ ಸಾಲದ ಖಾತೆಗಳನ್ನು "ವಂಚನೆ" ಎಂದು ಘೋಷಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧಾರದ ವಿರುದ್ಧ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು . ಕಾರ್ಯವಿಧಾನ ನ್ಯಾಯಯುತವಾಗಿಲ್ಲ ಎಂಬ ಅಂಬಾನಿ ಅವರ ವಾದ ತಿರಸ್ಕರಿಸಿದ್ದ ನ್ಯಾಯಾಲಯ ಎಸ್‌ಬಿಐ ಕ್ರಮ ಎತ್ತಿಹಿಡಿದಿತ್ತು.