Justice Jasti Chelameswar
Justice Jasti Chelameswar

ಅಂಬಾನಿ ಒಡೆತನದ ವಂತಾರ ವಿರುದ್ಧ ಆರೋಪ: ನ್ಯಾ. ಚೆಲಮೇಶ್ವರ್ ನೇತೃತ್ವದ ಎಸ್ಐಟಿ ರಚಿಸಿದ ಸುಪ್ರೀಂ ಕೋರ್ಟ್

ದೇಶ ವಿದೇಶಗಳಿಂದ ಅಕ್ರಮವಾಗಿ ವನ್ಯಜೀವಿಗಳನ್ನು ತಂದಿರುವುದು, ಪ್ರಾಣಿ ದೌರ್ಜನ್ಯ, ಆರ್ಥಿಕ ಅಕ್ರಮ ಹಾಗೂ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ವಂತಾರ ವಿರುದ್ಧ ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
Published on

ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ಪ್ರತಿಷ್ಠಾನ ಒಡೆತನದ ವಂತಾರ ಗ್ರೀನ್ಸ್ ವನ್ಯ ಜೀವಿ ಸಂರಕ್ಷಣೆ ಮತ್ತು ಪುನರ್‌ವಸತಿ ಕೇಂದ್ರದ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಸ್ತಿ ಚೆಲಮೇಶ್ವರ್ ನೇತೃತ್ವದಲ್ಲಿ ಈ ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸಲಿದ್ದು, ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ , ಮುಂಬೈ ಮಾಜಿ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಹಾಗೂ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಅನೀಶ್ ಗುಪ್ತಾ ಅವರು ತಂಡದ ಇತರ ಸದಸ್ಯರು.

Also Read
ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಿಂದ ಪ್ರಾಣಿಗಳಿಗೆ ತೊಂದರೆ: ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಭಾರತದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಕಾನೂನುಬಾಹಿರವಾಗಿ ವನ್ಯಜೀವಿಗಳನ್ನು ವಂತಾರಾಗೆ ತಂದಿರುವುದು, ಸೆರೆಯಲ್ಲಿರುವ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸಿರುವುದು, ಆರ್ಥಿಕ ಅಕ್ರಮ ಎಸಗಿರುವುದು ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಮುಂತಾದ ಆರೋಪಗಳಿಗೆ ಸಂಬಂಧಿಸಿದಂತೆ ವಂತಾರ ವಿರುದ್ಧ ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌ ಮತ್ತು ಪ್ರಸನ್ನ ಬಿ ವರಾಳೆ ಅವರ ವಿಭಾಗೀಯ ಪೀಠವು ಎಸ್‌ಐಟಿ ರಚನೆಯ ಆದೇಶ ಹೊರಡಿಸಿದೆ.

ಅರ್ಜಿಗಳು ಕೇವಲ ಸುದ್ದಿ ವರದಿ, ಸಾಮಾಜಿಕ ಮಾಧ್ಯಮದ ಹೇಳಿಕೆಗಳು ಹಾಗೂ ಎನ್‌ಜಿಒಗಳ ದೂರು ಆಧರಿಸಿದ್ದು ಯಾವುದೇ ಪ್ರಾಯೋಗಿಕ ಮೌಲ್ಯದ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಹೇಳಿದ್ದರೂ ದೂರುಗಳು ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ಸಿಐಟಿಇಎಸ್‌ ರೀತಿಯ ಶಾಸನಬದ್ಧ ಸಂಸ್ಥೆಗಳ ವಿರುದ್ಧವೂ ಕೇಳಿಬಂದಿರುವುದರಿಂದ ಆರೋಪಗಳ ಕುರಿತಾದ ವಾಸ್ತವಾಂಶವನ್ನು ಪರಿಶೀಲಿಸಲು ಸ್ವತಂತ್ರ ಮಾಹಿತಿ ಪಡೆಯಬೇಕಿದೆ. ತನಿಖೆಗೆ ಆದೇಶ ನೀಡಿರುವುದು ಸಂಪೂರ್ಣವಾಗಿ ವಾಸ್ತವಾಂಶ ಪರಿಶೀಲನೆಗಾಗಿ ಮಾತ್ರ. ಇದು ವಂತಾರಾ ಅಥವಾ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ತನಿಖೆ ಎಂಬ ನಕಾರಾತ್ಮಕ ಅಭಿಪ್ರಾಯ ಸೂಚಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ ಎಸ್‌ಐಟಿಗೆ ಈ ಕೆಳಗಿನ ಅಂಶಗಳನ್ನು ಪರೀಶೀಲಿಸಿ ವರದಿ ನೀಡಲು ನಿರ್ದೇಶನಗಳನ್ನು ನೀಡಿದೆ:

  • (ಎ) ಭಾರತ ಮತ್ತು ವಿದೇಶಗಳಿಂದ ಪ್ರಾಣಿಗಳನ್ನು ತಂದಿರುವ ಬಗ್ಗೆ, ಅದರಲ್ಲಿಯೂ ಆನೆಗಳನ್ನು ತಂದಿರುವ ಬಗ್ಗೆ

  • (ಬಿ) ವನ್ಯಜೀವಿ (ಸಂರಕ್ಷಣಾ) ಕಾಯಿದೆ- 1972ರ ಅಡಿ ರೂಪಿಸಲಾಗಿದ್ದ ಪ್ರಾಣಿಸಂಗ್ರಹಾಲಯ ನಿಯಮಗಳ ಪಾಲನೆಯಾಗಿದೆಯೇ?

  • (ಸಿ) ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಸ್ಯ ಮತ್ತು ಪ್ರಾಣಿ ಸಂಕುಲದ ವ್ಯಾಪಾರದ ಅಂತಾರಾಷ್ಟ್ರೀಯ ಸಮಾವೇಶ (ಸಿಐಟಿಇಎಸ್‌),  ಆಮದು/ರಫ್ತು ಕಾನೂನುಗಳು ಹಾಗೂ ಜೀವಂತ ಪ್ರಾಣಿಗಳ ಆಮದು/ರಫ್ತಿಗೆ ಸಂಬಂಧಿಸಿದ ಇತರ ಶಾಸನಬದ್ಧ ಅವಶ್ಯಕತೆಗಳನ್ನು ಪೂರೈಸಲಾಗಿದೆಯೇ? 

  • (ಡಿ) ಪ್ರಾಣಿಗಳ ಆರೈಕೆ, ವೈದ್ಯಕೀಯ ಸೌಲಭ್ಯ, ಸಾವಿನ ಪ್ರಮಾಣ ಕುರಿತು ತನಿಖೆ ನಡೆಸಬೇಕು.,

  • (ಇ) ಪರಿಸರ ಸಂಬಂಧಿ ವಿಚಾರಗಳು ಮತ್ತು ಕೈಗಾರಿಕಾ ವಲಯದ ಬಳಿಯೇ ವಂತಾರ ತಲೆ ಎತ್ತಿರುವುದಕ್ಕೆ ಸಂಬಂಧಿಸಿದ ಆರೋಪಗಳು;

  • (ಎಫ್) ಖಾಸಗಿ ಸಂಗ್ರಹ, ಸಂತಾನೋತ್ಪತ್ತಿ, ಸಂರಕ್ಷಣಾ ಕಾರ್ಯಕ್ರಮಗಳು ಮತ್ತು ಜೀವವೈವಿಧ್ಯ ಸಂಪನ್ಮೂಲಗಳ ಬಳಕೆ ಕುರಿತಾದ ದೂರುಗಳು;

  • (ಜಿ) ನೀರು ಮತ್ತು ಇಂಗಾಲ ಕ್ರೆಡಿಟ್‌ (ಹಾನಿಕಾರಕ ಅನಿಲ ತಡೆಗಾಗಿ ಸರ್ಕಾರ ವಿಧಿಸುವ ಮಿತಿ. ಈ ಮಿತಿಗಿಂತಲೂ ಕಡಿಮೆ ಇಂಗಾಲ ಉತ್ಪಾದಿಸಿದರೆ ಕ್ರೆಡಿಟ್‌ ಉಳಿಸಿಕೊಳ್ಳಬಹುದು, ಮಿತಿ ಮೀರಿದರೆ ಹೆಚ್ಚುವರಿ ಕ್ರೆಡಿಟ್‌ಗಳನ್ನು ಹಣತೆತ್ತು ಖರೀದಿಸಬೇಕಾಗುತ್ತದೆ) ದುರುಪಯೋಗದ ಬಗೆಗಿನ ದೂರುಗಳು;

  • (ಎಚ್‌) ಅರ್ಜಿಗಳಲ್ಲಿ ಉಲ್ಲೇಖಿಸಿರುವ ವಿವಿಧ ಕಾಯಿದೆಗಳ ಉಲ್ಲಂಘನೆ, ವನ್ಯಜೀವಿಗಳು ಮತ್ತು ವನ್ಯಜೀವಿ ಉತ್ಪನ್ನಗಳ ವ್ಯಾಪಾರ, ವನ್ಯಜೀವಿ ಕಳ್ಳಸಾಗಣೆ ಇತ್ಯಾದಿ ದೂರುಗಳು

  • (ಐ) ಹಣದ ಅವ್ಯವಹಾರ, ಅಕ್ರಮ ಹಣ ವರ್ಗಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳು.

  • (ಜೆ) ಈ ಅರ್ಜಿಗಳಲ್ಲಿ ಮಾಡಲಾದ ಆರೋಪಗಳಿಗೆ ಸಂಬಂಧಿಸಿದ ಯಾವುದೇ ಉಳಿದ ವಿಷಯಕ್ಕೆ ಸಂಬಂಧಿಸಿದ ದೂರುಗಳು.

ಎಸ್‌ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೇಂದ್ರ ಮೃಗಾಲಯ ಪ್ರಾಧಿಕಾರ, ಸಿಐಟಿಇಎಸ್‌ ನಿರ್ವಹಣಾ ಪ್ರಾಧಿಕಾರ, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಗುಜರಾತ್‌ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ಎಸ್‌ಐಟಿ ಸೆಪ್ಟೆಂಬರ್ 12, 2025ರೊಳಗೆ ತನಿಖಾ ವರದಿ ಸಲ್ಲಿಸಬೇಕು ಎಂದು ತಿಳಿಸಿರುವ ನ್ಯಾಯಾಲಯ ಸೆಪ್ಟೆಂಬರ್ 15ರಂದು ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಉದ್ಯಮಿ ಮುಖೇಶ್‌ ಅಂಬಾನಿ ಮತ್ತು ರಿಲಯನ್ಸ್‌ ಪ್ರತಿಷ್ಠಾನ ಸ್ಥಾಪಿಸಿರುವ ವಂತಾರ ಪ್ರಾಣಿಗಳ ರಕ್ಷಣೆ, ಆರೈಕೆ ಮತ್ತು ಪುನರ್ವಸತಿ ಕೇಂದ್ರವಾಗಿದ್ದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟಿಸಿದ್ದರು.

Kannada Bar & Bench
kannada.barandbench.com