Anil Ambani and Supreme Court  
ಸುದ್ದಿಗಳು

ಅನಿಲ್ ಅಂಬಾನಿ-ಆರ್‌ಕಾಮ್‌ ಬ್ಯಾಂಕ್ ವಂಚನೆ ಪ್ರಕರಣ: ತನಿಖೆಯ ಸ್ಥಿತಿಗತಿ ವರದಿ ಕೇಳಿದ ಸುಪ್ರೀಂ

ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ಇ ಎ ಎಸ್ ಶರ್ಮಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

Bar & Bench

ರಿಲಯನ್ಸ್ ಕಮ್ಯುನಿಕೇಷನ್ಸ್‌ (ಆರ್‌ಕಾಂ), ಅದರ ಅಂಗಸಂಸ್ಥೆಗಳು ಹಾಗೂ ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ಕೇಳಿ ಬಂದಿರುವ ಭಾರೀ ಪ್ರಮಾಣದ ಬ್ಯಾಂಕ್ ವಂಚನೆ ಆರೋಪಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಪ್ರಗತಿ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ನಿರ್ದೇಶಿಸಿದೆ [ಇ ಎ ಎಸ್ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ಇ ಎ ಎಸ್ ಶರ್ಮಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಿಜೆಐ ಸೂರ್ಯ ಕಾಂತ್‌, ನ್ಯಾಯಮೂಯರ್ತಿ ಜೊಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಆದೇಶ ನೀಡಿದೆ. ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಅನಿಲ್ ಅಂಬಾನಿ ಹಾಗೂ ಸಮೂಹ ಸಂಸ್ಥೆಗಳು ನ್ಯಾಯಾಲಯಕ್ಕೆ ಹಾಜರಾಗದೇ ಇರುವುದನ್ನು ಪ್ರಸ್ತಾಪಿಸಿದ ಪೀಠ ಅವರು ಹಾಜರಾಗಲು ಕೊನೆಯ ಅವಕಾಶ ನೀಡಿತು. ಈ ಸಂಬಂಧ ಹೊಸ ನೋಟಿಸ್ ಜಾರಿಗೊಳಿಸುವಂತೆ ರಿಜಿಸ್ಟ್ರಿಗೆ ಸೂಚಿಸಿತು.

ಶರ್ಮಾ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್‌ ಭೂಷಣ್‌ ಅವರು ಪ್ರಕರಣದಲ್ಲಿ ನಡೆದಿರುವ ಕಾರ್ಪೊರೇಟ್‌ ವಂಚನೆಯ ಮಟ್ಟ ಮತ್ತು ಅದರ ಜಟಿಲತೆ, ಇಂಡಿಯಾ ಬುಲ್ಸ್‌ ಪ್ರಕರಣದಲ್ಲಿ ಕಂಡುಬಂದ ವಂಚನೆಗಿಂತಲೂ ಮಿಗಿಲಾದದ್ದು ಎಂದರು.

ಈ ವಾದಕ್ಕೆ ತಮ್ಮ ವಿರೋಧವಿಲ್ಲ ಎಂದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಆದರೆ ಈ ಸಂಬಂಧ ಈಗಾಗಲೇ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದ್ದು ಸಿಬಿಐ ತನಿಖೆ ನಡೆಸುತ್ತಿದೆ ಎಂದರು.

ಆದರೆ ಇದಕ್ಕೆ ಆಕ್ಷೇಪಿಸಿದ ಪ್ರಶಾಂತ್‌ ಭೂಷಣ್‌ ಅವರು ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಕೆಲವು ಕಡೆ ಅಪೂರ್ಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಇ  ಡಿ ನಡೆಸುತ್ತಿರುವ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಬೇಕು ಎಂದು ಮನವಿ ಮಾಡಿದರು. ಅಂತೆಯೇ ವರದಿ ಸಲ್ಲಿಸುವಂತೆ ಆದೇಶಿಸಿದ ನ್ಯಾಯಾಲಯ ಅರ್ಜಿ ಸಂಬಂಧ ಅನಿಲ್‌ ಅಂಬಾನಿ ಅವರು ಖುದ್ದು ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿತು.

ಆರ್‌ಕಾಂ ಮತ್ತು ಅದರ ಅಂಗಸಂಸ್ಥೆಗಳಾದ ರಿಲಯನ್ಸ್‌ ಇನ್‌ಫ್ರಾಟೆಲ್‌ ಹಾಗೂ ರಿಲಯನ್ಸ್‌ ಟೆಲಿಕಾಂ, 2013ರಿಂದ 2017ರ ಅವಧಿಯಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ₹31,580 ಕೋಟಿ ಸಾಲ ಪಡೆದಿದ್ದವು. ಎಸ್‌ಬಿಐ ನೇಮಿಸಿದ್ದ ವಿಶೇಷ ಲೆಕ್ಕಪರಿಶೋಧನೆಯಿಂದ ನಿಧಿಗಳ ಭಾರೀ ದುರುಪಯೋಗ, ಸಂಬಂಧವಿರದ ಸಾಲಗಳ ಮರುಪಾವತಿ, ಸಂಬಂಧಿತ ಪಕ್ಷಕಾರರಿಗೆ ಹಣ ವರ್ಗಾವಣೆ, ಆವರ್ತನೀಯ ವಹಿವಾಟಿನ ಮೂಲಕ ಸಾಲ ಪಡೆದಿರುವುದನ್ನು ಶಾಶ್ವತವಾಗಿ ಮುಚ್ಚಿಹಾಕಿರುವುದು ಸೇರಿದಂತೆ ಗಂಭೀರ ಅಕ್ರಮಗಳು ಪತ್ತೆಯಾಗಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ವಿದೇಶಗಳಲ್ಲಿ ಹಣ ದುರ್ಬಳಕೆ ಮತ್ತು ಅಂತಾರಾಷ್ಟ್ರೀಯ ವಹಿವಾಟುಗಳ ಮೂಲಕ ಫೆಮಾ ಮತ್ತು ಪಿಎಂಎಲ್‌ಎ ಕಾಯಿದೆಯ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮತ್ತು ನಿಯಂತ್ರಕ ಸಂಸ್ಥೆಗಳ ಪಾತ್ರವನ್ನು ತನಿಖಾ ಸಂಸ್ಥೆಗಳು ಸಮರ್ಪಕವಾಗಿ ಪರಿಶೀಲಿಸುತ್ತಿಲ್ಲ ಎಂದು ಅವರು ದೂರಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಸಾರ್ವಜನಿಕ ಹಣ ಒಳಗೊಂಡಿರುವ ಈ ಪ್ರಕರಣದಲ್ಲಿ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಲು ನ್ಯಾಯಾಲಯದ ಮೇಲ್ವಿಚಾರಣೆ ಅಗತ್ಯವೆಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.