ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಪುತ್ರ ಹಾಗೂ ವಕೀಲ ಅನಿಲ್ ಗೌಡ ಅವರು ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರ ಜೊತೆ ಉದ್ಯಮದಲ್ಲಿ ಪಾಲುದಾರರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಗುರುವಾರ ಬಲವಾಗಿ ಪ್ರತಿಪಾದಿಸಿತು.
ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಪ್ರಶ್ನಿಸಿ ವಕೀಲ ಅನಿಲ್ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ದುಬೈ ಸರ್ಕಾರವು ಕ್ಯಾಸಲ್ ರಾಕ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಎಂಬ ಸಂಸ್ಥೆಗೆ ವಾಣಿಜ್ಯ ಪರವಾನಗಿ ನೀಡಿದೆ. ಈ ಕಂಪನಿಯಲ್ಲಿ ಅನಿಲ್ ಗೌಡ ಮ್ಯಾನೇಜರ್ ಎಂದು ಉಲ್ಲೇಖಿಸಲಾಗಿದೆ. ಇಲ್ಲಿ ಐದನೇ ಹೆಸರು ಪ್ರಮುಖ ಆರೋಪಿಯಾಗಿರುವ ಶಾಸಕ ವೀರೇಂದ್ರ ಪಪ್ಪಿ ಅವರದ್ದಾಗಿದೆ” ಎಂದರು.
“ಕ್ಯಾಸಲ್ ರಾಕ್ ಸಂಸ್ಥೆಯಲ್ಲಿ ವೀರೇಂದ್ರ ಪಪ್ಪಿ ಅವರು ಶೇ. 35ರಷ್ಟು ಷೇರು, ಅನಿಲ್ ಗೌಡ ಶೇ. 15ರಷ್ಟು ಷೇರು ಹೊಂದಿದ್ದಾರೆ. ಅನಿಲ್ ಗೌಡರಿಂದ ಜಫ್ತಿ ಮಾಡಿರುವ ಲ್ಯಾಪ್‌ಟಪ್‌ನಲ್ಲಿ ಶೇ. 5ರಷ್ಟು ಲಾಭಾಂಶ ಅಂದರೆ 29 ಕೋಟಿ ರೂಪಾಯಿಯನ್ನು ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಅನಿಲ್ ಗೌಡ ಅವರು ವೀರೇಂದ್ರ ಜೊತೆ ಉದ್ಯಮ ನಡೆಸುತ್ತಿದ್ದರು ಎಂಬುದಕ್ಕೆ 28.07.2021ರ ಇಮೇಲ್ ಸಾಕ್ಷಿ ಒದಗಿಸುತ್ತದೆ. 28.07.2021ರಲ್ಲಿ ಅನಿಲ್ ಗೌಡ ಎಲ್‌ಎಲ್‌ಬಿ ಕಲಿಯುತ್ತಿರಬಹುದು. 2022ರಲ್ಲಿ ಅನಿಲ್ ಗೌಡ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದಾರೆ. ಇಂದು ಕಾನೂನಿನ ಪ್ರಕಾರ ಅನಿಲ್ ಗೌಡ ವಕೀಲರಾಗಿರಬಹುದು. ಆದರೆ, ಲೀಗಲ್ ಸರ್ವೀಸ್ ನೀಡಿರುವುದಕ್ಕಾಗಿ ಅನಿಲ್ ಗೌಡರಿಗೆ ಸಮನ್ಸ್ ನೀಡಲಾಗಿಲ್ಲ. ಉದ್ಯಮದಲ್ಲಿ ಪಾಲುದಾರರಾಗಿರುವುದರಿಂದ ಅವರ ಹೇಳಿಕೆ ದಾಖಲಿಸಲು ಸಮನ್ಸ್ ನೀಡಲಾಗಿದೆ” ಎಂದರು.
ಅನಿಲ್ ಗೌಡ ಪ್ರತಿನಿಧಿಸಿದ್ದ ವಕೀಲ ರಜತ್ ಅವರು “ಅನಿಲ್ ಗೌಡ ಅವರು ಪ್ರಾಕ್ಟೀಸ್ ಮಾಡುತ್ತಿರುವ ವಕೀಲ ಎಂಬುದನ್ನು ತೋರಿಸಲು ಪೂರಕವಾದ ದಾಖಲೆ ಸಂಗ್ರಹಿಸಲಾಗುತ್ತಿದೆ. ಇವುಗಳನ್ನು ಸಲ್ಲಿಕೆ ಮಾಡಲು ಎರಡು ದಿನ ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದನ್ನು ಮನ್ನಿಸಿದ ಪೀಠವು ಸೂಕ್ತ ದಾಖಲೆಗಳನ್ನು ಸಲ್ಲಿಸಬಹುದು. ಅವುಗಳನ್ನು ಜಾರಿ ನಿರ್ದೇಶನಾಲಯದ ಪರ ವಕೀಲರಿಗೂ ಮುಂಚಿತವಾಗಿ ಹಂಚಿಕೆ ಮಾಡಬೇಕು ಎಂದು ಸೂಚಿಸಿ, ಅನಿಲ್ ಗೌಡ ವಿರುದ್ಧ ಆತುರದ ಕ್ರಮಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆ ಮುಂದೂಡಿತು.