
ಆನ್ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಸಂಬಂಧ ಸಮನ್ಸ್ ಜಾರಿಗೊಳಿಸದೆ ಚಿತ್ರದುರ್ಗದ ಶಾಸಕ ಕೆ ಸಿ ವೀರೇಂದ್ರ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯಿದೆ ಅಡಿ ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ವೀರೇಂದ್ರ ಪತ್ನಿ ಆರ್ ಡಿ ಚೈತ್ರಾ ಪರ ವಕೀಲರು ಬಲವಾಗಿ ವಾದಿಸಿದ್ದಾರೆ.
ಚಿತ್ರದುರ್ಗದ ಶಾಸಕರಾದ ತಮ್ಮ ಪತಿ ಕೆ ಸಿ ವೀರೇಂದ್ರ ಅವರನ್ನು ಪಿಎಂಎಲ್ ಕಾಯಿದೆ ಅಡಿ ಜಾರಿ ನಿರ್ದೇಶನಾಲಯವು ಬಂಧಿಸಿರುವ ಕ್ರಮವನ್ನು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ಚೈತ್ರಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇದಕ್ಕೂ ಮುನ್ನ ಚೈತ್ರಾ ಪರ ಹಿರಿಯ ವಕೀಲ ಸಿದ್ಧಾರ್ಥ್ ದವೆ ಅವರು “ವೀರೇಂದ್ರ ವಿರುದ್ಧ 2011ರ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲಿಸಲಾಗಿತ್ತು. ಆ ಪ್ರಕರಣದ ಆರೋಪಗಳಿಂದ 2014ರಲ್ಲಿ ಅವರು ಖುಲಾಸೆಯಾಗಿದ್ದರು. ಇದೇ ಪ್ರಕರಣ ಸಂಬಂಧ 2015ರ ಮತ್ತೊಂದು ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. 2016ರಲ್ಲಿ ದಾಖಲಾದ ಪ್ರಕರಣದಲ್ಲಿ ಕೆ ಸಿ ವೀರೇಂದ್ರ ಅವರು ಆರೋಪಿಯಾಗಿರಲಿಲ್ಲ. 2022ರ ದಾಖಲಾದ ಪ್ರಕರಣ ಸಂಬಂಧ ಆರೋಪಪಟ್ಟಿಯಲ್ಲಿ ವೀರೇಂದ್ರ ಹೆಸರು ಕೈಬಿಡಲಾಗಿತ್ತು. ಮತ್ತೆರಡು ಪ್ರಕರಣಗಳು 2024ರಲ್ಲಿ ಮುಕ್ತಾಯಗೊಂಡಿವೆ” ಎಂದು ವಿವರಿಸಿದರು.
“ವೀರೇಂದ್ರ ಅವರು ಸಿಕ್ಕಿಂನಲ್ಲಿದ್ದಾಗ ಮನೆ, ವ್ಯಾಪಾರ ಸ್ಥಳಲ್ಲಿ ಇಡಿ ದಾಳಿ ನಡೆಸಿದೆ. ಅಂದರೆ ವಿರೇಂದ್ರ ಅವರ ಅನುಪಸ್ಥಿತಿಯಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಪಿಎಂಎಲ್ ಕಾಯಿದೆ ಅಡಿ ಯಾವುದೇ ಅನುಸೂಚಿತ (ಮೂಲ ಅಪರಾಧ) ಪ್ರಕರಣವಿಲ್ಲದಿದ್ದರೂ ವೀರೇಂದ್ರ ಅವರನ್ನು ಬಂಧಿಸಲಾಗಿದೆ. ಪಿಎಂಎಲ್ ಕಾಯಿದೆ ಅಡಿ ಶಾಸಕರನ್ನು ಬಂಧಿಸುವ ಮುನ್ನ ಸಮನ್ಸ್ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಬಂಧನ ಮಾಡುವವರೆಗೂ ಸಮನ್ಸ್ ನೀಡಿಲ್ಲ. ಬಂಧನ ಮೆಮೊವನ್ನು ಸಕಾಲಕ್ಕೆ ನೀಡಿಲ್ಲ. ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ. ಮತ್ತೆ ಕೆಲ ಪ್ರಕರಣಗಳಲ್ಲಿ ವೀರೇಂದ್ರ ಅವರ ವಿರುದ್ಧ ಯಾವುದೇ ನೇರ ಸಾಕ್ಷ್ಯಾಧಾರಗಳು ಇಲ್ಲ. ಇಡಿ ಅಧಿಕಾರಿಗಳು ವೀರೇಂದ್ರ ಅವರ ಬಂಧನದಲ್ಲಿ ಸೂಕ್ತವಾಗಿ ವಿವೇಚನೆ ಬಳಸಿಲ್ಲ. ಆದ್ದರಿಂದ ವೀರೇಂದ್ರ ಅವರ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಬೇಕು” ಎಂದು ಕೋರಿದರು.