Amit Malviya, J P Nadda and Karnataka HC 
ಸುದ್ದಿಗಳು

ಕಾಂಗ್ರೆಸ್‌ ವಿರುದ್ಧದ ಆಕ್ಷೇಪಾರ್ಹ ವಿಡಿಯೋ: ನಡ್ಡಾ, ಮಾಳವಿಯಾ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಕಲಬುರ್ಗಿಯ ಸೈಬರ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಜಗತ್‌ ಪ್ರಕಾಶ್‌ ನಡ್ಡಾ ಮತ್ತು ಮಾಳವಿಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Bar & Bench

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯ ಕುರಿತು ಬಿಜೆಪಿಯ ಅಧಿಕೃತ ಸಾಮಾಜಿಕ ಖಾತೆಯಲ್ಲಿ ಪ್ರಸಾರ ಮಾಡಲಾಗಿದ್ದ ಆಕ್ಷೇಪಾರ್ಹವಾದ ಅನಿಮೇಟೆಡ್‌ ವಿಡಿಯೋವೊಂದನ್ನು ಆಕ್ಷೇಪಿಸಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ ಪಿ ನಡ್ಡಾ ಮತ್ತು ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯಾ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ರದ್ದುಪಡಿಸಿದೆ.

ಕಲಬುರ್ಗಿಯ ಸೈಬರ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಜಗತ್‌ ಪ್ರಕಾಶ್‌ ನಡ್ಡಾ ಮತ್ತು ಮಾಳವಿಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ವಿನೋದ್‌ ಕುಮಾರ್‌ ಅವರು “ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ವಿಚಾರವು ಕೋಮು ದ್ವೇಷಕ್ಕೆ ಎಡೆಮಾಡುವಂಥದ್ದಲ್ಲ. ಸುಪ್ರೀಂ ಕೋರ್ಟ್‌ ಜಾವೇದ್‌ ಅಹ್ಮದ್‌ ಆಜಂ ವರ್ಸಸ್‌ ಮಹಾರಾಷ್ಟ್ರ ರಾಜ್ಯ ಹಾಗೂ ಶಿವಪ್ರಸಾದ್‌ ಸೇಮ್ವಾಲ್‌ ವರ್ಸಸ್‌ ಉತ್ತರಾಖಂಡ ರಾಜ್ಯ ಪ್ರಕರಣದ ತೀರ್ಪುಗಳು ಹಾಲಿ ಪ್ರಕರಣಕ್ಕೆ ಅನ್ವಯಿಸುತ್ತವೆ. ಹೀಗಾಗಿ, ಪ್ರಕರಣ ವಜಾ ಮಾಡಬೇಕು” ಎಂದು ಕೋರಿದರು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಅರ್ಜಿದಾರರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವುದು ಕೋಮು ದ್ವೇಷಕ್ಕೆ ಪ್ರೇರೇಪಣೆ ನೀಡುವುದಾಗಿದೆ. ಇದರ ತನಿಖೆ ನಡೆಯಬೇಕಾಗಿದ್ದು, ಅರ್ಜಿದಾರರು ತನಿಖೆಯಲ್ಲಿ ಆರೋಪಮುಕ್ತವಾಗಿ ಬರಬೇಕಿರುವುದರಿಂದ ಅರ್ಜಿದಾರರ ಮನಿಯನ್ನು ವಜಾ ಮಾಡಬೇಕು” ಎಂದು ಕೋರಿದರು.

ಅಂತಿಮವಾಗಿ ಅರ್ಜಿದಾರರ ವಾದವನ್ನು ಮಾನ್ಯ ಮಾಡಿದ ನ್ಯಾಯಾಲಯವು ಅರ್ಜಿ ಪುರಸ್ಕರಿಸಿ, ಜೆ ಪಿ ನಡ್ಡಾ ಮತ್ತು ಅಮಿತ್‌ ಮಾಳವಿಯಾ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ ಅವರ ಅನಿಮೇಟೆಡ್‌ ವಿಡಿಯೋ ಪ್ರಕಟಿಸಲಾಗಿದ್ದು, ಅದರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಮೇತರರ ಆಸ್ತಿಯನ್ನು ಕಿತ್ತು, ಕಾಂಗ್ರೆಸ್‌ ಮುಸ್ಲಿಮ್‌ ಸಮುದಾಯಕ್ಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೇ, ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಸಂಪನ್ಮೂಲದಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ನೀಡಬೇಕು ಎಂದಿದ್ದರು ಎಂದು ಹೇಳಲಾಗಿದೆ ಎಂದು ಆಕ್ಷೇಪಿಸಿ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಪ್ರವೀಣ ಕುಮಾರ್‌ ಪಾಟೀಲ್‌ ಅವರು ಕಲಬುರ್ಗಿಯ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್‌ ಮಾಳವಿಯಾ ವಿರುದ್ಧ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 125, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(D)ಐಪಿಸಿ ಸೆಕ್ಷನ್‌ಗಳಾದ 53A, 504, 171ಎಫ್‌, 171ಜಿ, 505(2), 171ಸಿ ಅಡಿ ಪ್ರಕರಣ ದಾಖಲಿಸಲಾಗಿತ್ತು.