ಕಾಂಗ್ರೆಸ್‌ ವಿರುದ್ಧದ ಆಕ್ಷೇಪಾರ್ಹ ಅನಿಮೇಟೆಡ್‌ ವಿಡಿಯೋ: ನಡ್ಡಾ, ಮಾಳವಿಯಾಗೆ ಖುದ್ದು ಹಾಜರಾತಿಯಿಂದ ವಿನಾಯಿತಿ

“ಪ್ರಕರಣವನ್ನು ವಿಸ್ತೃತವಾಗಿ ಪರಿಗಣಿಸಬೇಕಿದೆ. ತನಿಖೆ ಮುಂದುವರಿಸಬಹುದು, ಆದರೆ, ತನಿಖಾಧಿಕಾರಿಯು ಅರ್ಜಿದಾರ ಜೆ ಪಿ ನಡ್ಡಾ ಖುದ್ದು ಹಾಜರಾತಿಗೆ ಸೂಚಿಸಬಾರದು” ಎಂದಿರುವ ಪೀಠ.
Amit Malviya, J P Nadda and Karnataka HC
Amit Malviya, J P Nadda and Karnataka HC

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯ ಕುರಿತು ಬಿಜೆಪಿಯ ಅಧಿಕೃತ ಸಾಮಾಜಿಕ ಖಾತೆಯಲ್ಲಿ ಪ್ರಸಾರ ಮಾಡಲಾಗಿದ್ದ ಆಕ್ಷೇಪಾರ್ಹವಾದ ಅನಿಮೇಟೆಡ್‌ ವಿಡಿಯೋವೊಂದನ್ನು ಆಕ್ಷೇಪಿಸಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯಾ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಅನುಮತಿಸಿರುವ ಕರ್ನಾಟಕ ಹೈಕೋರ್ಟ್‌, ಪ್ರಸ್ತುತ ಕೇಂದ್ರ ಸಚಿವರಾಗಿರುವ ನಡ್ಡಾ ಮತ್ತು ಮಾಳವಿಯಾ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಿದೆ.

ಕಲಬುರ್ಗಿಯ ಸೈಬರ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬಿಜೆಪಿ ಮುಖಂಡ ಜಗತ್‌ ಪ್ರಕಾಶ್‌ ನಡ್ಡಾ ಮತ್ತು ಮಾಳವಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ಏಕಸದಸ್ಯ ಪೀಠ ನಡೆಸಿತು.

“ಪ್ರಕರಣವನ್ನು ವಿಸ್ತೃತವಾಗಿ ಪರಿಗಣಿಸಬೇಕಿದೆ. ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಲಾಗಿದ್ದು, ಎರಡನೇ ಪ್ರತಿವಾದಿಗೆ ತುರ್ತು ನೋಟಿಸ್‌ಗೆ ಆದೇಶಿಸಲಾಗಿದೆ. ತನಿಖೆ ಮುಂದುವರಿಸಬಹುದು, ಆದರೆ, ತನಿಖಾಧಿಕಾರಿಯು ಅರ್ಜಿದಾರ ಜೆ ಪಿ ನಡ್ಡಾ ಮತ್ತು ಮಾಳವಿಯಾ ಖುದ್ದು ಹಾಜರಾತಿಗೆ ಸೂಚಿಸಬಾರದು” ಎಂದು ಆದೇಶಿಸಿ ನ್ಯಾಯಾಲಯ ವಿಚಾರಣೆ ಮುಂದೂಡಿತು.

ಇದಕ್ಕೂ, ನಡ್ಡಾ ಮತ್ತು ಮಾಳವಿಯಾ ಪರ ವಕೀಲ ಎಂ ವಿನೋದ್‌ ಕುಮಾರ್‌ ಅವರು “ದೂರಿನಲ್ಲಿ ಮತ ಪಡೆಯಲು ಹೀಗೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಪ್ರಜಾಪ್ರತಿನಿಧಿ ಕಾಯಿದೆಯೆ ಸೆಕ್ಷನ್‌ 125 ಮಾತ್ರ ಅನ್ವಯಿಸುತ್ತದೆ. ಉಳಿದ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ” ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಅವರು “ತನಿಖೆ ನಡೆಸಲು ಅನುಮತಿಸಿ. ನಾವು ಅವರ ವಿರುದ್ಧ ದುರುದ್ದೇಶದ ಕ್ರಮಕೈಗೊಳ್ಳುವುದಿಲ್ಲ” ಎಂದರು.

ಆಗ ಪೀಠವು “ನಡ್ಡಾ ಅನುಪಸ್ಥಿತಿಯಲ್ಲಿ ತನಿಖೆ ಮಾಡುತ್ತೀರಾ? ಅರ್ಜಿದಾರರ ವೈಯಕ್ತಿಕ ಉಪಸ್ಥಿತಿ ಕೇಳುವುದಿಲ್ಲವೇ?” ಎಂದರು. ಇದಕ್ಕೆ ಎಎಸ್‌ಪಿಪಿ ಸಹಮತಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ತನಿಖೆಗೆ ಅನುಮತಿಸಿತು.

Also Read
ರಾಹುಲ್‌ ವಿರುದ್ಧ ಆಕ್ಷೇಪಾರ್ಹ ವಿಡಿಯೊ ಟ್ವೀಟ್‌: ಬಿಜೆಪಿ ಮುಖಂಡ ಅಮಿತ್‌ ಮಾಳವಿಯಾ ವಿರುದ್ಧದ ಎಫ್‌ಐಆರ್‌ಗೆ ತಡೆ

ಪ್ರಕರಣದ ಹಿನ್ನೆಲೆ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ ಅವರ ಅನಿಮೇಟೆಡ್‌ ವಿಡಿಯೋ ಪ್ರಕಟಿಸಲಾಗಿದ್ದು, ಅದರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಮೇತರರ ಆಸ್ತಿಯನ್ನು ಕಿತ್ತು, ಕಾಂಗ್ರೆಸ್‌ ಮುಸ್ಲಿಮ್‌ ಸಮುದಾಯಕ್ಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೇ, ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಸಂಪನ್ಮೂಲದಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ನೀಡಬೇಕು ಎಂದಿದ್ದರು ಎಂದು ಹೇಳಲಾಗಿದೆ ಎಂದು ಆಕ್ಷೇಪಿಸಿ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಪ್ರವೀಣ ಕುಮಾರ್‌ ಪಾಟೀಲ್‌ ಅವರು ಕಲಬುರ್ಗಿಯ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್‌ ಮಾಳವಿಯಾ ವಿರುದ್ಧ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 125, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(D), ಐಪಿಸಿ ಸೆಕ್ಷನ್‌ಗಳಾದ 53A, 504, 171ಎಫ್‌, 171ಜಿ, 505(2), 171ಸಿ ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com