ಮತ್ತೊಂದು ಅಕ್ರಮ ಡಿನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಾನೂನು ಹಿನ್ನೆಡೆ ಅನುಭವಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ಕೋರಿ ಬಿಎಸ್‌ವೈ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ರೂ. 25 ಸಾವಿರ ದಂಡವನ್ನೂ ವಿಧಿಸಿದೆ.
ಗಂಗೇನಹಳ್ಳಿ ವ್ಯಾಪ್ತಿಗೆ ಸಂಬಂಧಿಸಿದ ಜಮೀನಿನ ಡಿನೋಟಿಫಿಕೇಷನ್ ಪ್ರಕರಣ ಇದಾಗಿದ್ದು ದಶಕದ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇದನ್ನು ಬಿಎಸ್‌ವೈ ಅಕ್ರಮವಾಗಿ ಡಿನೋಟಿಫೈ ಮಾಡಿದ್ದರು ಎನ್ನುವ ಆರೋಪವಿದೆ. ಈ ಸಂಬಂಧ ಜಯಕುಮಾರ್ ಹಿರೇಮಠ ಎನ್ನುವವರು 2015ರಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದರು.
ಪೂರ್ವಾನುಮತಿಯನ್ನು ಪಡೆಯದೆ ತಮ್ಮ ವಿರುದ್ಧ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿ ಬಿಎಸ್‌ವೈ ಅರ್ಜಿ ಸಲ್ಲಿಸಿದ್ದರು. ದೂರು ದಾಖಲಿಸಲು ಪೂರ್ವಾನುಮತಿಯ ಅಗತ್ಯವಿಲ್ಲ ಎಂದಿರುವ ನ್ಯಾ. ಮೈಕೆಲ್ ಕುನ್ಹಾ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸುವುದರ ಜೊತೆಗೆ ರೂ. 25 ಸಾವಿರ ದಂಡ ಪಾವತಿಸಲು ಆದೇಶಿಸಿದೆ. ಪ್ರಕರಣದ ತನಿಖೆಯನ್ನು ಮುಂದುವರೆಸಲು ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ.
ಕೆಲ ದಿನಗಳ ಹಿಂದೆಯಷ್ಟೇ ಐಟಿ ಕಾರಿಡಾರ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಅಕ್ರಮ ಡಿನೋಟಿಫೈ ಮಾಡಿದ್ದ ಆರೋಪದ ಮತ್ತೊಂದು ಪ್ರಕರಣದ ವಿಚಾರಣೆ ರದ್ದುಗೊಳಿಸಲು ಕೋರಿದ್ದ ಬಿಎಸ್‌ವೈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅಲ್ಲದೆ, ಪ್ರಕರಣದ ತನಿಖೆಯಲ್ಲಿ ಲೋಕಾಯುಕ್ತ ಪೊಲೀಸರು ತೋರಿದ್ದ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠವು, ಜನಪ್ರತಿನಿಧಿಗಳನ್ನು ಒಳಗೊಂಡಿರುವ ಕ್ರಿಮಿನಲ್ ಪ್ರಕರಣದ ತನಿಖೆಗಳ ಬಗ್ಗೆ ವಿಶೇಷ ಗಮನ ನೀಡುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿತ್ತು.