ಈ ವರ್ಷದ ಆರಂಭದಲ್ಲಿ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ಆರೋಪದಡಿ ಯೋಗ ಗುರು ಬಾಬಾ ರಾಮ್‌ದೇವ್ ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ಸಂಬಂಧ ಅವರನ್ನು ಬಂಧಿಸದಂತೆ ಈ ಹಿಂದೆ ನೀಡಲಾಗಿದ್ದ ಆದೇಶವನ್ನು ಅಕ್ಟೋಬರ್ 16ರವರೆಗೆ ರಾಜಸ್ಥಾನ ಹೈಕೋರ್ಟ್ ಸೋಮವಾರ ವಿಸ್ತರಿಸಿದೆ [ಸ್ವಾಮಿ ರಾಮ್‌ದೇವ್ ವಿರುದ್ಧ ರಾಜ್ಯ ಮತ್ತಿತರರ ನಡುವಣ ಪ್ರಕರಣ].
ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರುವ ಅಕ್ಟೋಬರ್ 5 ರಂದು ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ರಾಮ್‌ದೇವ್ ಅವರಿಗೆ ನ್ಯಾಯಮೂರ್ತಿ ಕುಲದೀಪ್ ಮಾಥುರ್ ಅವರು ಸೋಮವಾರ ಆದೇಶಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ರಾಮದೇವ್ ಅವರನ್ನು ಬಂಧಿಸದಂತೆ ನೀಡಲಾಗಿದ್ದ ಮಧ್ಯಂತರ ಆದೇಶವನ್ನು ನ್ಯಾಯಮೂರ್ತಿಯವರು ವಿಸ್ತರಿಸಿದರು.
"ಅರ್ಜಿದಾರರು 05.10.2023 ರಂದು ಬೆಳಿಗ್ಗೆ 11.30ಕ್ಕೆ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ತನಿಖಾಧಿಕಾರಿಗಳು ಕರೆದಾಗ ತನಿಖಾಧಿಕಾರಿಗಳೆದುರು ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಲಾಗಿದೆ. 16.10.2023 ರಂದು ಪ್ರಕರಣವನ್ನು ಪಟ್ಟಿ ಮಾಡಿ. 13.04.2023ರಂದು ನೀಡಲಾದ ಆದೇಶ ಮುಂದಿನ ವಿಚಾರಣೆಯವರೆಗೂ ಜಾರಿಯಲ್ಲಿರುತ್ತದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಅಕ್ಟೋಬರ್ 16ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳೆರಡೂ ಮತಾಂತರದ ಮೇಲೆ ಹೆಚ್ಚು ಗಮನಹರಿಸಿವೆ ಎಂದು ರಾಮದೇವ್ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.