High Court of Karnataka  
ಸುದ್ದಿಗಳು

ಆಂತರಿಕ್ಷ್‌-ದೇವಾಸ್‌ ಹಗರಣ: ಕಾನೂನು ಪ್ರಕ್ರಿಯೆ ದುರ್ಬಳಕೆ; ದೇವಾಸ್‌ ಷೇರುದಾರರಿಗೆ ₹5 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ವ್ಯಕ್ತಿಗೆ ಕಂಪನಿಯನ್ನು ಮುಚ್ಚುವಂತೆ ಎನ್‌ಸಿಎಲ್‌ಟಿಗೆ ಅರ್ಜಿಯನ್ನು ಸಲ್ಲಿಸಲು ಅನುವು ಮಾಡಿಕೊಡುವ ಕಂಪೆನಿಗಳ ಕಾಯಿದೆಯ ನಿಬಂಧನೆಯ ಸಿಂಧುತ್ವ ಪ್ರಶ್ನಿಸಿದ್ದ ಮನವಿಯನ್ನೂ ನ್ಯಾಯಾಲಯವು ವಜಾಗೊಳಿಸಿದೆ.

Bar & Bench

ಆಂತರಿಕ್ಷ್ ಕಾರ್ಪೊರೇಶನ್‌ನೊಂದಿಗಿನ ಬ್ಯಾಂಡ್‌ವಿಡ್ತ್ ಸೌಲಭ್ಯಗಳ ಕುರಿತು ಅಕ್ರಮವಾಗಿ ಒಪ್ಪಂದ ಮಾಡಿಕೊಂಡಿದ್ದ ಪ್ರಕರಣದಲ್ಲಿ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತಿತರ ಆರೋಪಗಳನ್ನು ಎದುರಿಸುತ್ತಿರುವ ದೇವಾಸ್ ಮಲ್ಟಿಮೀಡಿಯಾ ಪರವಾಗಿ ಅರ್ಜಿ ಸಲ್ಲಿಸಿದ್ದಕ್ಕಾಗಿ ದೇವಾಸ್ ನೌಕರರ ಮಾರಿಷಸ್ ಪ್ರೈವೇಟ್ ಲಿಮಿಟೆಡ್‌ಗೆ (ಅರ್ಜಿದಾರ) ಕರ್ನಾಟಕ ಹೈಕೋರ್ಟ್‌ ಈಚೆಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.

ದೇವಾಸ್ ಋಣವಿಮೋಚನಾ ಮನವಿಯ ಮೇರೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದ (ಎನ್‌ಸಿಎಲ್‌ಟಿ) ಮುಂದೆ ಅಂತಿಮ ವಿಚಾರಣೆಗೆ ನಿಗದಿಪಡಿಸಿದ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಸದರಿ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ. ಈ ನಡೆಯು ಕಾನೂನು ಪ್ರಕ್ರಿಯೆಯ ದುರ್ಬಳಕೆ ಮತ್ತು ದೇವಾಸ್‌ ಪರವಾಗಿ ಪರೋಕ್ಷ ಯುದ್ಧ ನಡೆಸುವ ರೀತಿಯಾಗಿದೆ” ಎಂದು ಪೀಠ ಹೇಳಿದೆ.

“ಕಳೆದ ಮಾರ್ಚ್‌ 2ರ ಎನ್‌ಸಿಎಲ್‌ಟಿ ಆದೇಶದ ಪ್ರಕಾರ ಅರ್ಜಿದಾರರ ಪರ ಹಿರಿಯ ವಕೀಲರು ಕಂಪೆನಿಯ ಪ್ರಮುಖ ಅರ್ಜಿಗೆ ಕಳೆದ ಮಾರ್ಚ್‌ 12ರ ಒಳಗೆ ಆಕ್ಷೇಪಣೆ ಸಲ್ಲಿಸುವುದಾಗಿ ಒಪ್ಪಿಕೊಂಡಿದ್ದರು. ಹೀಗಾಗಿ, ಮಾರ್ಚ್‌ 23ಕ್ಕೆ ಅಂತಿಮ ವಿಚಾರಣೆಯನ್ನು ನಿಗದಿಗೊಳಿಸಿ ಮುಂದೂಡಲಾಗಿತ್ತು. ಈ ರೀತಿಯಾಗಿ, ಕಂಪನಿಯ ಅರ್ಜಿಯನ್ನು ವಿರೋಧಿಸಲು ಸೂಕ್ತವಾದ ವೇದಿಕೆಯನ್ನು ಆಯ್ಕೆ ಮಾಡಿದ ನಂತರ, ಈ ರಿಟ್ ಅನ್ನು ಅಂತಿಮ ವಿಚಾರಣೆಗೆ ನಿಗದಿಪಡಿಸಿದ ದಿನಾಂಕಕ್ಕಿಂತ ಒಂದು ದಿನ ಮೊದಲು ಅಂದರೆ ಮಾರ್ಚ್ 22ರಂದು ಸಲ್ಲಿಸಲಾಗಿದೆ. ಇದು ದೇವಾಸ್‌ ಪರವಾಗಿ ಕಾನೂನು ಪ್ರಕ್ರಿಯೆ ದುರ್ಬಳಕೆ ಮತ್ತು ಪರೋಕ್ಷ ಯುದ್ಧ ಸಾರುವ ರೀತಿಯಾಗಿದೆ… ಆ ಕಾರಣಕ್ಕಾಗಿ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರ ಹೆಸರಿಗೆ ನಾಲ್ಕು ವಾರಗಳಲ್ಲಿ ಐದು ಲಕ್ಷ ರೂಪಾಯಿ ಪಾವತಿಸಬೇಕು ಮತ್ತು ಇದನ್ನು ರಿಜಿಸ್ಟ್ರಾರ್‌ ಜನರಲ್‌ ಇದರ ಅನುಸರಣೆಯನ್ನು ಖಾತರಿಪಡಿಸಬೇಕು” ಎಂದು ಪೀಠ ಹೇಳಿದೆ.

ದೇವಾಸ್ ಅನ್ನು ಮುಚ್ಚುವ ನಡವಳಿಗೆ ಚಾಲನೆ ನೀಡಲು ಆಂತರಿಕ್ಷ್‌ ಕಾರ್ಪೊರೇಶನ್‌ಗೆ 2021ರ ಜನವರಿ 18ರಂದು ಕೇಂದ್ರ ಸರ್ಕಾರವು ನೀಡಿದ ಮಂಜೂರಾತಿಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರವು ಅನುಮೋದನೆ ನೀಡುವ ಮೊದಲು ದೇವಾಸ್‌ಗೆ ಯಾವುದೇ ಅವಕಾಶವನ್ನು ನೀಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಆಂತರಿಕ್ಷ್‌ ಕಾರ್ಪೊರೇಶನ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಕೇಂದ್ರವು ನೀಡಿದ ಆದೇಶವು ಅಧಿಕಾರದ ಅಸಮರ್ಪಕ ಬಳಕೆಯಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ. ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ವ್ಯಕ್ತಿಗೆ ಎನ್‌ಸಿಎಲ್‌ಟಿಗೆ ಅರ್ಜಿಯನ್ನು ಸಲ್ಲಿಸಲು ಅನುವು ಮಾಡಿಕೊಡುವ ಕಂಪೆನಿಗಳ ಕಾಯಿದೆಯ ಸೆಕ್ಷನ್ 272(1)(ಇ) ರ ಸಾಂವಿಧಾನಿಕ ಸಿಂಧುತ್ವವನ್ನೂ ಅದು ಪ್ರಶ್ನಿಸಿತ್ತು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ಗಳಾದ ಎಂ ಬಿ ನರಗುಂದ ಅವರು ಭಾರತ ಸರ್ಕಾರದ ಪರ, ಎನ್‌ ವೆಂಕಟರಾಮನ್‌ ಅವರು ಆಂತರಿಕ್ಷ್‌ ಪರ ವಾದಿಸಿದ್ದು, ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮನವಿಗೆ ವಿರೋಧ ದಾಖಲಿಸಿದರು.

ಪ್ರತಿಸ್ಪರ್ಧಿ ವಾದ ಆಲಿಸಿದ ಪೀಠವು “ಸದರಿ ಪ್ರಕರಣದಲ್ಲಿ ಅರ್ಜಿದಾರರು ದೇವಾಸ್‌ನಲ್ಲಿ ಅತ್ಯಂತ ಕಡಿಮೆ ಷೇರುದಾರರಾಗಿದ್ದಾರೆ. ಇದಾಗಲೇ ಎನ್‌ಸಿಎಲ್‌ಟಿ ಎಂಬ ಸೂಕ್ತ ವೇದಿಕೆಯ ಮುಂದೆ ತಮ್ಮನ್ನು ಪ್ರಕರಣದಲ್ಲಿ ಆಲಿಸುವಂತೆ ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಮಂಜೂರಾತಿ ಆದೇಶದ ಬಗ್ಗೆ ದೇವಾಸ್‌ ತೊಂದರೆಗೊಳಗಾಗಿರುವುದಾಗಿಯೂ ದೂರಿಲ್ಲ. ಅಲ್ಲದೆ, ಎನ್‌ಸಿಎಲ್‌ಟಿ ಮುಂದೆ ತನ್ನೆಲ್ಲಾ ವಾದಗಳನ್ನು ಮಂಡಿಸಲು ಅರ್ಜಿದಾರರು ಅವಕಾಶ ಹೊಂದಿದ್ದರು. ಪ್ರಸಕ್ತ ಸಂದರ್ಭದಲ್ಲಿ ಯಾವುದೇ ನಾಗರಿಕ ಪರಿಣಾಮಕ್ಕೆ ಕಾರಣವಾಗುವ ಆದೇಶವೂ ಎದುರಾಗಿಲ್ಲ” ಎಂದಿತು. ಆ ಮೂಲಕ ಕೇಂದ್ರ ಸರ್ಕಾರದ ಅನುಮತಿಯು ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎನ್ನುವುದನ್ನು ನಿರೂಪಿಸುವಲ್ಲಿ ಅರ್ಜಿದಾರರು ಸೋತಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿತು. ಸೆಕ್ಷನ್‌ 272(1)(ಇ) ಅನ್ನು ಪ್ರಶ್ನಿಸಲು ಯಾವುದೇ ಪುರಾವೆ ಇಲ್ಲ ಎಂದು ಪೀಠ ಹೇಳಿತು.