ಸುದ್ದಿಗಳು

ಸಾ. ಮಾಧ್ಯಮ ಹೇಳಿಕೆ ನೀಡಿದವರನ್ನು ಯಾಂತ್ರಿಕವಾಗಿ ವಶಕ್ಕೆ ಪಡೆಯಲು ಆದೇಶಿಸಿದರೆ ಕ್ರಮ: ಆಂಧ್ರ ಹೈಕೋರ್ಟ್ ಎಚ್ಚರಿಕೆ

ಅರ್ನೇಶ್ ಕುಮಾರ್ ಮತ್ತು ಇಮ್ರಾನ್ ಪ್ರತಾಪ್‌ಗಢಿ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೈಕೋರ್ಟ್ ಹೇಳಿದೆ.

Bar & Bench

ಸಾಮಾಜಿಕ ಮಾಧ್ಯಮ ಹೇಳಿಕೆ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸುವ ಮುನ್ನ ಅರ್ನೇಶ್ ಕುಮಾರ್ ಮತ್ತು ಇಮ್ರಾನ್ ಪ್ರತಾಪ್‌ಗಢಿ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಂಧ್ರಪ್ರದೇಶ ಹೈಕೋರ್ಟ್ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ಗಳಿಗೆ ಆದೇಶಿಸಿದೆ .

ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ನ ನಿರ್ಧಾರಗಳನ್ನು ಪಾಲಿಸದಿದ್ದರೆ, ಅವರು ನ್ಯಾಯಾಂಗ ನಿಂದನೆ ಮತ್ತು ಇಲಾಖಾ ವಿಚಾರಣೆ  ಎದುರಿಸಬೇಕಾಗುತ್ತದೆ ಎಂದು ಶುಕ್ರವಾರ ಹೊರಡಿಸಿದ ಸುತ್ತೋಲೆಯಲ್ಲಿ ಹೈಕೋರ್ಟ್ ತಿಳಿಸಿದೆ.

ಎಲ್ಲಾ ಮ್ಯಾಜಿಸ್ಟ್ರೇಟ್‌ಗಳು ಸುತ್ತೋಲೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಈ ವಿಚಾರವಾಗಿ ತಪ್ಪಿ ನಡೆದರೆ ಇಲಾಖಾ ವಿಚಾರಣೆಯ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣವನ್ನೂ ಅವರು ಎದುರಿಸಬೇಕಾಗುತ್ತದೆ ಎಂದು ಸುತ್ತೋಲೆ ಎಚ್ಚರಿಕೆ ನೀಡಿದೆ.

ಆರೋಪಿಯನ್ನು ವಶಕ್ಕೆ ಪಡೆಯುವಂತೆ ಆದೇಶಿಸುವ ಮುನ್ನ ಮ್ಯಾಜಿಸ್ಟ್ರೇಟ್‌ಗಳು ಕಾನೂನು ಪಾಲಿಸುತ್ತಿಲ್ಲ ಎಂಬುದು ತನ್ನ ಗಮನಕ್ಕೆ ಬಂದಿರುವುದಾಗಿ ಹೈಕೋರ್ಟ್‌ ಹೇಳಿದೆ.

ಅರ್ನೇಶ್ ಕುಮಾರ್ ವರ್ಸಸ್ ಸ್ಟೇಟ್ ಆಫ್ ಬಿಹಾರ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌,  ಏಳು ವರ್ಷಗಳಿಗಿಂತಲೂ ಕಡಿಮೆ ಜೈಲು ಶಿಕ್ಷೆ ವಿಧಿಸಿರುವ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಬಂಧನಕ್ಕೆ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು ಮತ್ತು ಅಗತ್ಯವಿದ್ದರೆ ಮಾತ್ರ ಬಂಧನಕ್ಕೆ ಮುಂದಾಗಬೇಕು ಎಂದು ಹೇಳಿದೆ.  

ಮ್ಯಾಜಿಸ್ಟ್ರೇಟ್‌ಗಳು ಬಂಧನಕ್ಕೆ ಯಾಂತ್ರಿಕವಾಗಿ ಆದೇಶಿಸಬಾರದು. ಮಾರ್ಗಸೂಚಿಗಳನ್ನು ಪಾಲಿಸಲು ವಿಫಲವಾದರೆ ಪೊಲೀಸ್ ಅಧಿಕಾರಿಗಳು ಮತ್ತು ಮ್ಯಾಜಿಸ್ಟ್ರೇಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಆಗ ತಿಳಿಸಿತ್ತು.

ಇದೇ ವೇಳೆ ಇಮ್ರಾನ್ ಪ್ರತಾಪ್ಗಢಿ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣದಲ್ಲಿ ಮುಕ್ತ ಭಾಷಣ, ಬರವಣಿಗೆ ಅಥವಾ ಕಲಾತ್ಮಕ ಅಭಿವ್ಯಕ್ತಿಗೆ (ಅಪರಾಧಗಳಿಗೆ 3-7 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ) ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸರು ಪ್ರಾಥಮಿಕ ತನಿಖೆ ನಡೆಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ನುಡಿದಿತ್ತು.

ಅಂತಹ ತನಿಖೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಅನುಮೋದನೆ ಸೂಚಿಸಿ 14 ದಿನಗಳಲ್ಲಿ ಮುಕ್ತಾಯಗೊಳಿಸಬೇಕು ಎಂದು ಅದು ಹೇಳಿತ್ತು.