
ಸಾಮಾಜಿಕ ಮಾಧ್ಯಮ ಪೋಸ್ಟ್ ಲೈಕ್ ಮಾಡುವುದು ಅದನ್ನು ಪ್ರಕಟಿಸುವುದು ಇಲ್ಲವೇ ಹಂಚಿಕೊಳ್ಳುವುದಕ್ಕೆ ಸಮನಾಗುವುದಿಲ್ಲ ಹೀಗಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಲಾಗದು ಎಂದು ಅಲಾಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ [ ಇಮ್ರಾನ್ ಖಾನ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಈ ಸೆಕ್ಷನ್ ವ್ಯಕ್ತಿಯ "ಕಾಮುಕ" ಅಥವಾ "ಕಾಮಪ್ರಚೋದಕ ಹಿತಾಸಕ್ತಿ" ಇರುವಂತಹ ವಸ್ತುವಿಷಯ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದನ್ನು ಅಪರಾಧೀಕರಿಸುತ್ತದೆ.
ಪೋಸ್ಟ್ ಅಥವಾ ಸಂದೇಶವನ್ನು ಪ್ರಕಟಿಸಿದಾಗ ಅದು ಪ್ರಕಟವಾಗಿದೆ ಎಂದು ಹೇಳಬಹುದು. ಪೋಸ್ಟ್ ಅಥವಾ ಸಂದೇಶವನ್ನು ಹಂಚಿಕೊಂಡಾಗ ಅಥವಾ ಮರುಟ್ವೀಟ್ ಮಾಡಿದಾಗ ಅದು ರವಾನೆಯಾಗಿದೆ ಎಂದು ಹೇಳಬಹುದು ಎಂದು ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ತಿಳಿಸಿದರು.
"ಪ್ರಸ್ತುತ ಪ್ರಕರಣದಲ್ಲಿ, ಕಾನೂನುಬಾಹಿರ ಸಭೆಗಾಗಿ ಫರ್ಹಾನ್ ಉಸ್ಮಾನ್ ಅವರು ಮಾಡಿದ ಪೋಸ್ಟ್ ಅನ್ನು ಅರ್ಜಿದಾರರು ಲೈಕ್ ಮಾಡಿದ್ದಾರೆ ಎಂದು ತೋರಿಸುವ ಅಂಶ ಕೇಸ್ ಡೈರಿಯಲ್ಲಿದೆ ಎಂದು ಆರೋಪಿಸಲಾಗಿದೆ. ಆದರೆ ಪೋಸ್ಟ್ ಲೈಕ್ ಮಾಡುವುದು ಅದನ್ನು ಪ್ರಕಟಿಸುವುದಕ್ಕೇ ಆಗಲೀ ಅಥವಾ ರವಾನಿಸುವುದಕ್ಕೇ ಆಗಲಿ ಸಮನಾಗುವುದಿಲ್ಲ, ಆದ್ದರಿಂದ, ಕೇವಲ ಪೋಸ್ಟ್ ಅನ್ನು ಲೈಕ್ ಮಾಡುವುದು ಐಟಿ ಕಾಯಿದೆಯ ಸೆಕ್ಷನ್ 67ರ ವ್ಯಾಪ್ತಿಗೆ ಬರುವುದಿಲ್ಲ " ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಚೌಧರಿ ಫರ್ಹಾನ್ ಉಸ್ಮಾನ್ ಅವರ ಪೋಸ್ಟ್ ಅನ್ನು ಲೈಕ್ ಮಾಡಿದ್ದ ಇಮ್ರಾನ್ ಖಾನ್ ಎಂಬ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ಉಸ್ಮಾನ್ ಅವರ ಪೋಸ್ಟ್ ರಾಷ್ಟ್ರಪತಿಗಳಿಗೆ ಜ್ಞಾಪನಾ ಪತ್ರವನ್ನು ನೀಡುವುದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಲಿರುವ ಪ್ರತಿಭಟನಾ ಸಭೆಯನ್ನು ಉಲ್ಲೇಖಿಸುತ್ತದೆ.
"ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ, ಅನುಮತಿಯಿಲ್ಲದೆ ಮೆರವಣಿಗೆ ಆಯೋಜಿಸಿದ್ದಕ್ಕಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು 600-700 ಜನರು ಗುಂಪುಗೂಡಲು ಕಾರಣವಾದ" ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಸಾಕ್ಷ್ಯಾಧಾರಗಳನ್ನು ಗಮನಿಸಿದರೆ ಖಾನ್ ಅವರು ಬೇರೊಬ್ಬರು ಪ್ರಕಟಿಸಿದ್ದ ಸಂದೇಶವನ್ನು ಲೈಕ್ ಮಾಡಿದ್ದಾರೆ. ಇದು ಐಟಿ ಕಾಯಿದೆಯ ಸೆಕ್ಷನ್ 67 ಅಥವಾ ಇನ್ನಾವುದೇ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ಐಟಿ ಕಾಯಿದೆಯ ಸೆಕ್ಷನ್ 67 ಅಶ್ಲೀಲ ವಿಷಯ ತಡೆಯುವ ಉದ್ದೇಶ ಹೊಂದಿದ್ದು ಪ್ರಚೋದನಕಾರಿ ವಿಷಯಗಳಿಗೆ ಅದನ್ನು ಅನ್ವಯಿಸಲಾಗದು ಎಂದು ಪೀಠ ಇದೇ ವೇಳೆ ತೀರ್ಪು ನೀಡಿದೆ. ಹೀಗಾಗಿ, ಖಾನ್ ವಿರುದ್ಧ ಯಾವುದೇ ಅಪರಾಧ ಸಾಬೀತಾಗಿಲ್ಲ ಎಂದು ನಿರ್ಧರಿಸಿದ ನ್ಯಾಯಾಲಯ ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]