ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಗಾಯಗೊಂಡ ಯೋಧರೊಬ್ಬರ ಪುತ್ರನಿಗೆ 1999ರ ಪಂಜಾಬ್ ಸರ್ಕಾರದ ನೀತಿಯ ಪ್ರಕಾರ ಯುದ್ಧ ವೀರ / ಯುದ್ಧ ಅಪಘಾತ ಸಿಬ್ಬಂದಿಯ ಪುತ್ರ ವರ್ಗದಡಿಯಲ್ಲಿ ಉದ್ಯೋಗ ಪಡೆಯಲು ಅರ್ಹತೆ ಇದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಸುರೀಂದರ್ ಪಾಲ್ ಇನ್ನಿತರರು ಮತ್ತು ಪಂಜಾಬ್ ಸರ್ಕಾರ ಮತ್ತಿತರರ ನಡುವಣ ಪ್ರಕರಣ].
ಅರ್ಜಿದಾರರು ಅಂಗವೈಕಲ್ಯದ ಹೊರತಾಗಿಯೂ ಸೇವೆಯಲ್ಲಿ ಮುಂದುವರೆದರು ಎಂಬ ಕಾರಣಕ್ಕೆ 1999ರ ನೀತಿಯಡಿಯಲ್ಲಿ ಅರ್ಜಿದಾರರ ಪುತ್ರನಿಗೆ ಉದ್ಯೋಗ ನಿರಾಕರಿಸಿರುವುದು ಅಸಮರ್ಥನೀಯ ಎಂದು ನ್ಯಾಯಮೂರ್ತಿ ಅಮನ್ ಚೌಧರಿ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.
ಅರ್ಜಿದಾರ ಸೇವೆಯಲ್ಲಿ ಮುಂದುವರೆದ ಹಿನ್ನೆಲೆಯಲ್ಲಿ ಅವರಿಗೆ ಸೌಲಭ್ಯ ನಿರಾಕರಿಸುವ ಬದಲು ಅದನ್ನು ಒದಗಿಸುವ ನಿಟ್ಟಿನಲ್ಲಿ ಅರ್ಥೈಸಿಕೊಳ್ಳಬೇಕಿತ್ತು ಎಂದು ನ್ಯಾಯಾಲಯ ನುಡಿದಿದೆ.
"ಅಂಗವೈಕಲ್ಯದಿಂದ ಬಳಲುತ್ತಿದ್ದರೂ ಸೇವೆಯಲ್ಲಿ ಮುಂದುವರಿದಿರುವುದು ಅರ್ಜಿದಾರರಿಗೆ ಸಲ್ಲುವ ಶ್ರೇಯಸ್ಸು. ಆದರೆ ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿರುವುದು ದಿಗ್ಭ್ರಮೆಗೊಳಿಸುವಂತಿದೆ” ಎಂದು ಪೀಠ ಹೇಳಿದೆ.
ಅರ್ಜಿದಾರರು ಸೇವೆಯಿಂದ ನಿರ್ಗಮಿಸಲು ಅವರ ಅಂಗವೈಕಲ್ಯ ಕಾರಣವಲ್ಲ, ಬದಲಾಗಿ ತಮ್ಮ ಸೇವಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರು ನಿರ್ಗಮಿಸುತ್ತಿದ್ದಾರೆ ಎಂಬ ಕಾರಣ ನೀಡಿ ಅವರಿಗೆ ನೀತಿಯಡಿ ಸೌಲಭ್ಯ ನಿರಾಕರಿಸಲಾಗಿತ್ತು. ಹೀಗಾಗಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರಿಗೆ ಸವಲತ್ತು ನಿರಾಕರಿಸುವುದನ್ನು ಅನ್ಯಾಯ ಮತ್ತು ಮನಸೋಇಚ್ಛೆಯಿಂದ ಕೂಡಿರುವಂತದ್ದು ಎಂದಿರುವ ನ್ಯಾಯಾಲಯ ನೀತಿ ರೂಪಿಸಿರುವ ಶಾಸಕಾಂಗದ ಉದ್ದೇಶದ ಪ್ರಕಾರ ಅರ್ಜಿದಾರರ ಹಕ್ಕು ಕಾನೂನುಬದ್ಧವಾಗಿ ಸಮರ್ಥನೀಯವಾಗಿದೆ ಎಂದಿದೆ.
ಮಂಜಿತ್ ಕೌರ್ ಮತ್ತು ಹರಿಯಾಣ ಸರ್ಕಾರ ಹಾಗೂ ಇತರ ಪ್ರಕರಣಗಳನ್ನು ಉಲ್ಲೇಖಿಸಿದ ನ್ಯಾಯಾಲಯ ಅರ್ಜಿದಾರರ ಮಗನಿಗೆ ಉದ್ಯೋಗ ದೊರೆಯುವ ಅರ್ಹತೆ ಇದೆ ಎಂದು ತಿಳಿಸಿ ಮೂರು ತಿಂಗಳೊಳಗೆ ಅವರನ್ನು ನೇಮಕಾತಿಗಾಗಿ ಪರಿಗಣಿಸುವಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿತು.