ಸುದ್ದಿಗಳು

ಕೇರಳದಿಂದ ಕರ್ನಾಟಕ ಪ್ರವೇಶಿಸುವ ಪ್ರಯಾಣಿಕರ ಮೇಲಿನ ನಿರ್ಬಂಧ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ

ಕರ್ನಾಟಕ ಜುಲೈ 31ರಂದು ಹೊರಡಿಸಿರುವ ನಿಯಮಾವಳಿ ಪ್ರಕಾರ, ಕೇರಳದಿಂದ ರಾಜ್ಯ ಪ್ರವೇಶಿಸುವ ಎಲ್ಲಾ ಪ್ರಯಾಣಿಕರು ಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರೂ ಆರ್‌ಟಿ -ಪಿಸಿಆರ್ ಋಣಾತ್ಮಕ ಪ್ರಮಾಣಪತ್ರ ತೋರಿಸಬೇಕಿದೆ.

Bar & Bench

ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣಿಸುವವರಿಗೆ ವಿಧಿಸಿರುವ ಪ್ರಯಾಣ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ (ಎಕೆಎಂ ಅಶ್ರಫ್‌ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).

ಕರ್ನಾಟಕ ಸರ್ಕಾರ ಜುಲೈ 31ರಂದು ಹೊರಡಿಸಿರುವ ನಿಯಮಾವಳಿ ಪ್ರಕಾರ, ಕೇರಳದಿಂದ ರಾಜ್ಯ ಪ್ರವೇಶಿಸುವ ಎಲ್ಲಾ ಪ್ರಯಾಣಿಕರು ಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರೂ ಪ್ರಯಾಣದ 72 ಗಂಟೆ ಅವಧಿಯಲ್ಲಿ ಸ್ವೀಕರಿಸಿರುವ ಆರ್‌ಟಿ-ಪಿಸಿಆರ್‌ ಋಣಾತ್ಮಕ ಪ್ರಮಾಣಪತ್ರ ಪಡೆಯಬೇಕಿದೆ.

ಕೇರಳ –ಕರ್ನಾಟಕ ಗಡಿ ಮುಚ್ಚುವಂತೆ ಮತ್ತು ಗಡಿ ದಾಟುವ ಸರ್ಕಾರಿ ಬಸ್‌ಗಳನ್ನು ರದ್ದುಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜುಲೈ 31, 2021ರಂದು ಆದೇಶ ಜಾರಿಗೊಳಿಸಿದ್ದರು.

"ಎರಡು ಡೋಸ್‌ ಕೋವಿಡ್ -19 ಲಸಿಕೆ ತೆಗೆದುಕೊಂಡವರು ಕೂಡ (ಆರ್‌ಟಿ-ಪಿಸಿಆರ್) ಪರೀಕ್ಷೆಗೆ ಒಳಗಾಗಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಎಲ್ಲಾ ವಾಹನಗಳು ನಿಯಮಗಳಿಗೆ ಅನುಸಾರವಾಗಿ ರಾಜ್ಯ ಪ್ರವೇಶಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಕೇರಳ ಗಡಿಯಲ್ಲಿ ಸಿಬ್ಬಂದಿ ನೇಮಿಸಬೇಕು ಎಂದು ಪ್ರತಿವಾದಿ ( ಕರ್ನಾಟಕ ಸರ್ಕಾರ) ತನ್ನಆದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿತ್ತು” ಎಂಬುದಾಗಿ ವಕೀಲ ಹ್ಯಾರಿಸ್‌ ಬೀರನ್‌ಅವರು ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ವಕೀಲ ಆರ್‌ ಎಸ್‌ ಜೆನಾ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಶಿಕ್ಷಣ, ವ್ಯಾಪಾರ, ಉದ್ಯೋಗಗಳು, ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಕಾರಣಗಳಿಗಾಗಿ ಪ್ರತಿದಿನ ರಾಜ್ಯಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೇಲೆ ನಿರ್ಬಂಧ ಪರಿಣಾಮ ಬೀರುತ್ತದೆ. ಅಲ್ಲದೆ "ದೈನಂದಿನ ಪ್ರಯಾಣಿಕರ ಸಂಚಾರ ವಿಚಾರದಲ್ಲಿ ಯಾವುದೇ ಅರ್ಥ ಇರುವುದಿಲ್ಲ" ಎಂದು ಹೇಳಲಾಗಿದೆ.

ಅಲ್ಲದೆ, ಕೇರಳದ ಮಂಜೇಶ್ವರ ಸುತ್ತಮುತ್ತಲಿನ ಜನ ತಮ್ಮ ಮೂಲಭೂತ ಅಗತ್ಯಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಮಂಗಳೂರು ನಗರವನ್ನು ಹೇಗೆ ಅವಲಂಬಿಸಿದ್ದಾರೆ ಎಂಬುದನ್ನು ಅರ್ಜಿಯಲ್ಲಿ ಎತ್ತಿ ತೋರಿಸಲಾಗಿದೆ. "ದಕ್ಷಿಣ ಕನ್ನಡ ಜಿಲ್ಲೆ ಕೇವಲ 10 ರಿಂದ 20 ಕಿಲೋಮೀಟರ್‌ ದೂರದಲ್ಲಿರುವುದರಿಂದ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ರಾಜ್ಯದ ಈ ಮನಸೋಇಚ್ಛೆಯ ನಿರ್ಧಾರದಿಂದ ನೊಂದಿದ್ದಾರೆ" ಎಂದು ಮನವಿ ತಿಳಿಸಿದೆ.

ಅಲ್ಲದೆ ಕರ್ನಾಟಕ ಸರ್ಕಾರ ಆಗಸ್ಟ್ 25, 2021 ರಂದು ಹೊರಡಿಸಿರುವ ಮಾರ್ಗಸೂಚಿ ಕೇಂದ್ರ ಹೊರಡಿಸಿದ ಮಾರ್ಗಸೂಚಿಗೆ ವಿರುದ್ಧವಾಗಿದೆ. ಪೂರ್ಣ ಲಸಿಕೆ ಪಡೆದವರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪಯಣಿಸುವಾಗ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಬಾರದು ಎನ್ನುತ್ತದೆ ಕೇಂದ್ರದ ನಿರ್ದೇಶನ.

ಪ್ರಾದೇಶಿಕ ನ್ಯಾಯವ್ಯಾಪ್ತಿಯ ಸಮಸ್ಯೆ ಉಲ್ಲೇಖಿಸಿ ಕೇರಳ ಹೈಕೋರ್ಟ್ ಅರ್ಜಿ ವಜಾಗೊಳಿಸಿತ್ತು ಮತ್ತು ಕರ್ನಾಟಕದ ಹೈಕೋರ್ಟ್ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯತಿರಿಕ್ತವಾದ ನಿರ್ದೇಶನ ನೀಡಿರುವುದನ್ನು ಎತ್ತಿತೋರಿಸಿತ್ತು.

"ಕರ್ನಾಟಕ ಸರ್ಕಾರ ಹೊರಡಿಸಿದ ಸುತ್ತೋಲೆಗಳಲ್ಲಿ ಹಸ್ತಕ್ಷೇಪ ಮಾಡುವ ಸಂಬಂಧ ಈ ನ್ಯಾಯಾಲಯದ ಪ್ರಾದೇಶಿಕ ನ್ಯಾಯವ್ಯಾಪ್ತಿ ಸ್ಥಾಪಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ತಿಳಿಸಲು ನಾವು ಹಿಂಜರಿಯುವುದಿಲ್ಲ" ಎಂಬುದಾಗಿ ಹೈಕೋರ್ಟ್‌ ಹೇಳಿತ್ತು.

ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿರುವ ಮೇಲ್ಮನವಿಯಲ್ಲಿ “ನ್ಯಾಯವ್ಯಾಪ್ತಿ ಕೊರತೆಯ ಆಧಾರದ ಮೇಲೆ ರಿಟ್‌ ವಜಾಗೊಳಿಸಿರುವುದು ಸೂಕ್ತವಲ್ಲ, ಏಕೆಂದರೆ ಕಲಂ 226ರ ಅಡಿಯಲ್ಲಿ ಸರ್ಕಾರ ಅಥವಾ ಅಧಿಕಾರಿಗಳು ತನ್ನ ಪ್ರಾಂತ್ಯದ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಹೈಕೋರ್ಟ್‌ ಯಾವುದೇ ಸರ್ಕಾರಕ್ಕೆ ರಿಟ್‌ ನೀಡುವ ಅಧಿಕಾರವನ್ನು ಸಂಪೂರ್ಣ ಅಥವಾ ಭಾಗಶಃವಾಗಿ ಹೊಂದಿದೆ” ಎಂದುವಿವರಿಸಲಾಗಿದೆ.

"(ಕರ್ನಾಟಕ ಸರ್ಕಾರದ) ಆದೇಶಗಳ ಪರಿಣಾಮವನ್ನು ಕೇರಳದ ಜನ ತೀವ್ರವಾಗಿ ಅನುಭವಿಸಿದ್ದಾರೆ. ಆದ್ದರಿಂದ ಈ ಆದೇಶಗಳಿಂದ ಕೇರಳದ ಜನರಿಗೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ವ್ಯಾಜ್ಯ ಕಾರಣ ಸ್ಪಷ್ಟವಾಗಿ ಕೇರಳ ರಾಜ್ಯದೊಳಗೆ ಇದೆ" ಎಂದು ಅರ್ಜಿದಾರರು ತಿಳಿಸಿದ್ದಾರೆ.