Menstrual Leave Policy 
ಸುದ್ದಿಗಳು

ಮುಟ್ಟಿನ ರಜೆ ನೀತಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮನವಿ: ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಮುಟ್ಟಿನ ರಜೆಯು ರಾಜ್ಯದ ನೀತಿಯಾಗಿದ್ದು, ಜಾರಿಗೊಳಿಸದಿರುವ ಪ್ರಶ್ನೆಯೇ ಇಲ್ಲ. ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದ ಸರ್ಕಾರದ ವಕೀಲರು.

Bar & Bench

ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ಗೆಜೆಟ್‌ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್‌ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಆಯುಕ್ತರು, ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತಲ್ಲದೆ, ಋತುಚಕ್ರ ರಜೆ ಸೌಲಭ್ಯ ನೀತಿ ಅಸ್ತಿತ್ವದಲ್ಲಿರುವ ಕುರಿತು ಮಹಿಳಾ ಉದ್ಯೋಗಿಗಳ ಗಮನಕ್ಕೆ ತರುವಂತೆ ಉದ್ಯೋಗ ಸಂಸ್ಥೆಗಳಿಗೆ ಸೂಚಿಸಿ ಹೊರಡಿಸಲಾಗುವ ಸಂವಹನವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು 2026ರ ಜನವರಿ 5ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ಅವರು “ರಾಜ್ಯದಲ್ಲಿ ಮಹಿಳಾ ನೌಕರರಿಗೆ ಋತುಸ್ರಾವದ ಸಂದರ್ಭದಲ್ಲಿ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೊಸ ನೀತಿಯ ಅಡಿ ಅರ್ಜಿದಾರರು ಕೋರಿದ್ದ ರಜೆಯನ್ನು ಅವರಿಗೆ ನೀಡಲಾಗಿಲ್ಲ. ಹಲವಾರು ಕ್ಷೇತ್ರಗಳಲ್ಲಿನ ಉದ್ಯೋಗಿಗಳಿಗೆ ಈ ನೀತಿಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ, ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಸಂಸ್ಥೆಗಳಿಗೆ ಋತುಚಕ್ರದ ರಜೆಯ ನೀತಿ ಜಾರಿಗೊಳಿಸಲು ನಿರ್ದೇಶಿಸಬೇಕು ಹಾಗೂ ಆ ನೀತಿ ಅಸ್ತಿತ್ವದಲ್ಲಿರುವ ಬಗ್ಗೆ ಉದ್ಯೋಗಿಗಳಿಗೆ ತಿಳಿಸುವಂತಾಗಬೇಕು. ಇದರಿಂದ, ಮಹಿಳಾ ಉದ್ಯೋಗಿಗಳು ರಜೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ” ಎಂದರು.

ಸರ್ಕಾರದ ಪರ ವಕೀಲರು “ಇದು ರಾಜ್ಯದ ನೀತಿಯಾಗಿದ್ದು, ಜಾರಿಗೊಳಿಸದಿರುವ ಪ್ರಶ್ನೆಯೇ ಇಲ್ಲ. ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಸರ್ಕಾರದ ಆದೇಶಕ್ಕೆ ಒಳಪಡುವ ಎಲ್ಲ ಸಂಸ್ಥೆಗಳು, ಹೋಟೆಲ್‌ಗಳು ಇನ್ನಿತರ ಉದ್ಯೋಗ ಸಂಸ್ಥೆಗಳಿಗೆ ಈ ಕುರಿತು ಮಾಹಿತಿ ನೀಡಲು ಕ್ರಮ ಕೈಗೊಂಡು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಇಡಲಾಗುವುದು” ಎಂದರು.

ಪ್ರಕರಣದ ಹಿನ್ನೆಲೆ: ಬೆಳಗಾವಿಯ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರರಾಗಿರುವ ಚಂದ್ರವ್ವ ಹಣಮಂತ ಗೋಕಾವಿ ಮುಟ್ಟಿನ‌ ಸಂದರ್ಭದಲ್ಲಿ ರಜೆ ನೀಡುವಂತೆ ಕೋರಿದ್ದರು. ಆದರೆ, ರಜೆ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದ್ದರು. ಇದರಿಂದ, ಕಾರ್ಮಿಕ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದ ಚಂದ್ರವ್ವ, ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಕೋರಿದ್ದರು.

ಮುಂದುವರೆದು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ ಹಾಗೂ ಕಾರ್ಖಾನೆಗಳ ಅಧಿನಿಯಮಕ್ಕೆ ಒಳಪಡುವ ಎಲ್ಲ ಸಂಸ್ಥೆಗಳಲ್ಲಿ ಸರ್ಕಾರದ ನೀತಿಯ ಏಕರೂಪ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಜೆ ಪಡೆಯುವ ಮಹಿಳಾ ನೌಕರರಿಗೆ ವೇತನ ಕಡಿತ, ಬೆದರಿಕೆ ಅಥವಾ ಕೆಲಸದಿಂದ ದೂರವಿಡುವ ಕ್ರಮಗಳು ‌ನಡೆದರೆ ಅದನ್ನು ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು. ತಳಮಟ್ಟದ ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೋರಿದ್ದರು. ಆ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚಂದ್ರವ್ವ ಹೈಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದಾರೆ.