Murugha Mutt and Dr. Shivamurthy Murugha Sharanaru 
ಸುದ್ದಿಗಳು

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಮಠಕ್ಕೆ ಅನುದಾನ ನೀಡುವಾಗ ಸರ್ಕಾರ ಷರತ್ತು ವಿಧಿಸಿತ್ತೇ? ಹೈಕೋರ್ಟ್‌ ಪ್ರಶ್ನೆ

ಆಡಳಿತಾಧಿಕಾರಿ ನೇಮಕಕ್ಕೂ ಮುನ್ನ ಸಿಎಂ ನೂರು ಬಾರಿ ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಮಠದ ಆಸ್ತಿಯ ಸಂರಕ್ಷಣೆ ಮತ್ತು ಭಕ್ತರ ಹಿತಾಸಕ್ತಿ ಕಾಪಾಡುವ ಉದ್ದೇಶ ಇದರಲ್ಲಿ ಅಡಗಿದೆ. ಮಠದ ಜೊತೆಗೆ ಸಂಘರ್ಷಕ್ಕಿಳಿಯುವ ಧೋರಣೆಯಿಲ್ಲ ಎಂದು ಎಜಿ ವಾದ.

Bar & Bench

ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ನಿರ್ಮಿಸಲಾಗುತ್ತಿರುವ ಅತಿ ಎತ್ತರದ ಬಸವೇಶ್ವರ ಪ್ರತಿಮೆ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ರಾಜ್ಯ ಸರ್ಕಾರ ನೀಡಿರುವ ಕೋಟ್ಯಂತರ ರೂಪಾಯಿಗಳ ಅನುದಾನದ ಸಂಪೂರ್ಣ ಮಾಹಿತಿ ಒದಗಿಸಬೇಕು ಮತ್ತು ಈ ಅನುದಾನ ನೀಡುವಾಗ ಸರ್ಕಾರ ಷರತ್ತುಗಳನ್ನು ವಿಧಿಸಿತ್ತೇ ಎಂಬುದನ್ನು ತಿಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ ಅವರನ್ನು ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ರಾಜ್ಯ ಸರ್ಕಾರದ ಪರ ವಾದಿಸಿದ ಅಡ್ವೊಕೇಟ್‌ ಜನರಲ್ ಪ್ರಭುಲಿಂಗ ಕೆ.ನಾವದಗಿ ಅವರು ಮುರುಘಾಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ದುರದೃಷ್ಟವಶಾತ್‌ ಮಠದ ಪೀಠಾಧಿಪತಿ ಮುರುಘಾ ಶರಣರು ಪೋಕ್ಸೊ ಕಾಯಿದೆ ಅಡಿಯಲ್ಲಿ ಬಂಧಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಠಕ್ಕೆ ಸೇರಿದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹಾಗೂ ನೂರಾರು ವಿದ್ಯಾಸಂಸ್ಥೆಗಳ ದೈನಂದಿನ ಆಡಳಿತಕ್ಕೆ ವ್ಯತ್ಯಯ ಉಂಟಾಗಬಾರದು ಎಂಬ ಏಕೈಕ ಕಾರಣಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂದು ಸರ್ಕಾರದ ನಿಲುವನ್ನು ಬಲವಾಗಿ ಸಮರ್ಥಿಸಿದರು.

ಮಠದ ವತಿಯಿಂದ ನಿರ್ಮಿಸಲಾಗುತ್ತಿರುವ ಅತಿ ಎತ್ತರದ ಬಸವ ಪ್ರತಿಮೆ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರಕ್ಕೆ ಸರ್ಕಾರವು ಕಾಲಕಾಲಕ್ಕೆ ಕೋಟ್ಯಂತರ ರೂಪಾಯಿಗಳ ಬೃಹತ್‌ ಅನುದಾನ ನೀಡುತ್ತಾ ಬಂದಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ 2022ರ ಸೆಪ್ಟೆಂಬರ್ 15ರಂದು ಸರ್ಕಾರ ₹ 10 ಕೋಟಿ ನೀಡಿದೆ. ಇದಕ್ಕೂ ಮುನ್ನ ಸಾಕಷ್ಟು ಆರ್ಥಿಕ ನೆರವು ಒದಗಿಸಲಾಗಿದೆ. ಈ ಕುರಿತ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು ಎಂದರು.

ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಆರ್ಥಿಕ ನೆರವಿನ ಅಂಶಗಳೂ ಅಡಗಿವೆ ಎಂಬುದನ್ನು ಪೀಠ ಪರಿಗಣಿಸಬೇಕು. ಅಂತೆಯೇ, ಆಡಳಿತಾಧಿಕಾರಿ ನೇಮಕಕ್ಕೂ ಮುನ್ನ ಮುಖ್ಯಮಂತ್ರಿ ಸ್ವತಃ ನೂರು ಬಾರಿ ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಇದರಲ್ಲಿ ಮಠದ ಆಸ್ತಿ ಸಂರಕ್ಷಣೆ ಮತ್ತು ಭಕ್ತರ ಹಿತಾಸಕ್ತಿ ಕಾಪಾಡುವ ಉದ್ದೇಶ ಅಡಗಿದೆ. ಮಠದ ಜೊತೆಗೆ ಸಂಘರ್ಷಕ್ಕಿಳಿಯುವ ಅಥವಾ ವ್ಯಾಜ್ಯ ಮಾಡುವ ಧೋರಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಪೀಠವು ಈ ಅನುದಾನವನ್ನು ನೀವು ಯಾವುದಾದರೂ ಷರತ್ತುಗಳಿಗೆ ಒಳಪಟ್ಟು ನೀಡಿದ್ದೀರೊ ಅಥವಾ ಬೇಷರತ್ತಾಗಿ ನೀಡಿದ್ದೀರೊ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸೂಚಿಸಿತು.

ಅಡ್ವೊಕೇಟ್ ಜನರಲ್‌ ತಮ್ಮ ಸುದೀರ್ಘ ವಾದ ಮಂಡನೆಯನ್ನು ಸೋಮವಾರ ಮುಕ್ತಾಯಗೊಳಿಸಿದರು. ಆಡಳಿತಾಧಿಕಾರಿ ಪರ ಹಿರಿಯ ವಕೀಲ ಗಂಗಾಧರ ಗುರುಮಠ ಅವರಿಗೆ ಫೆಬ್ರುವರಿ 2ರಂದು ವಾದ ಮಂಡಿಸಲು ಅವಕಾಶ ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಮುರುಘಾ ಶರಣರ ವಿರುದ್ಧ ತನಿಖಾಧಿಕಾರಿಗಳು, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ–1988ರ ಕಲಂ 8 (2)ರ ಅನ್ವಯ ಅವರು, ವಿಚಾರಣೆ ಮುಗಿಯುವ ತನಕ ತಾವು ಹೊಂದಿರುವ ಅಧಿಕಾರ ಚಲಾಯಿಸುವಂತಿಲ್ಲ ಎಂದು ಆಪಾದಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಸಂದೀಪ್‌ ಎಸ್‌.ಪಾಟೀಲ್‌ ಇದೇ ವೇಳೆ ಪೀಠಕ್ಕೆ ತಿಳಿಸಿದರು.