ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಕರಣ: ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರ ಎಂದು ಮಠದ ಪರ ವಾದ

ಶರಣರು ಪೀಠಾಧಿಪತಿ ಮತ್ತು ಟ್ರಸ್ಟ್‌ ಅಧ್ಯಕ್ಷರಾಗಿದ್ದು, ಉಸ್ತುವಾರಿಯನ್ನು ಬೇರೆಯವರಿಗೆ ವಹಿಸಿದ್ದಾರೆ. ಆದರೆ, ಸರ್ಕಾರ ಇದನ್ನೇ ಕಾರಣವಾಗಿಸಿಕೊಂಡು ಮಠದ ಮೇಲೆ ಅಧಿಕಾರ ಚಲಾಯಿಸಿದೆ ಎಂದು ವಾದ ಮಂಡನೆ.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru

ಸಂವಿಧಾನದ 162ನೇ ವಿಧಿಯ ಅನುಸಾರ ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರ ಎಂದು ಮಠದ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಗುರುವಾರ ಬಲವಾಗಿ ವಾದಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಹಿರಿಯ ವಕೀಲ ಜಯಕುಮಾರ್ ಎಸ್‌.ಪಾಟೀಲ್‌ ಅವರು “ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೊ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಶಿವಮೂರ್ತಿ ಮುರುಘಾ ಶರಣರನ್ನು 2022ರ ಸೆಪ್ಟೆಂಬರ್‌ 1ರಂದು ಬಂಧಿಸಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ” ಎಂದು ವಿವರಿಸಿದರು.

“ಶರಣರು ಪೀಠಾಧಿಪತಿ ಮತ್ತು ಟ್ರಸ್ಟ್‌ ಅಧ್ಯಕ್ಷರಾಗಿದ್ದು, ಉಸ್ತುವಾರಿಯನ್ನು ಬೇರೆಯವರಿಗೆ ವಹಿಸಿದ್ದಾರೆ. ಆದರೆ, ಸರ್ಕಾರ ಇದನ್ನೇ ಕಾರಣವಾಗಿಸಿಕೊಂಡು ಮಠದ ಮೇಲೆ ಅಧಿಕಾರ ಚಲಾಯಿಸಿದೆ. ಒಂದು ವೇಳೆ ಟ್ರಸ್ಟ್‌ ವ್ಯವಹಾರಗಳು ಸರಿಯಾಗಿ ನಡೆಯುತ್ತಿಲ್ಲ ಎಂದಾದರೆ ಸಿವಿಲ್‌ ಪ್ರಕ್ರಿಯಾ ಸಂಹಿತೆ-1908ರ (ಸಿಪಿಸಿ) ಕಲಂ 92ರ ಅನುಸಾರ ಪರಿಹಾರ ಪಡೆಯಲು ಮುಕ್ತ ಅವಕಾಶಗಳಿತ್ತು” ಎಂದರು.

Also Read
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಲಿಖಿತ ವಾದದಲ್ಲಿ ಹೊಸ ಅಂಶ ಪ್ರಸ್ತಾಪ; ಜ.12ಕ್ಕೆ ವಿಚಾರಣೆ ಮುಂದೂಡಿಕೆ

ಆಗ ಪೀಠವು “ಸರ್ಕಾರ ನೇಮಕ ಮಾಡಿರುವ ಆಡಳಿತಾಧಿಕಾರಿ ಮಠದ ಪರಂಪರೆಯ ಸಮುದಾಯಕ್ಕೆ ಸೇರಿದವರೇ?” ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿವಾದಿ ಪಿ ಎಸ್‌ ವಸ್ತ್ರದ ಪರ ಹಿರಿಯ ವಕೀಲ ಗಂಗಾಧರ ಗುರುಮಠ ಅವರು “ಹೌದು, ಅವರು ವೀರಶೈವ ಸಮುದಾಯಕ್ಕೆ ಸೇರಿದವರು” ಎಂದರು. ಇದಕ್ಕೆ ಜಯಕುಮಾರ್ ಪಾಟೀಲ್ ಬಲವಾದ ಆಕ್ಷೇಪ ವ್ಯಕ್ತಪಡಿಸಿ, ‘ವೀರಶೈವ‘ ಪದದ ಜೊತೆಗೆ ‘ಲಿಂಗಾಯತ‘ ಎಂಬುದನ್ನೂ ಸೇರಿಸಿದರು.

ಸುದೀರ್ಘ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿತು. ಪಿ ಎಸ್‌ ವಸ್ತ್ರದ ಪರ ವಕಾಲತ್ತು ವಹಿಸಿರುವ ಎಚ್ ಸುನಿಲ್‌ ಕುಮಾರ್ ಮತ್ತು ಮಧ್ಯಂತರ ಅರ್ಜಿದಾರರ ಪರ ವಕೀಲ ಪಿ ಪ್ರಸನ್ನಕುಮಾರ್ ಅವರೂ ಹಾಜರಿದ್ದರು.

Related Stories

No stories found.
Kannada Bar & Bench
kannada.barandbench.com