Karnataka High Court 
ಸುದ್ದಿಗಳು

ಮಾಹಿತಿ ಆಯುಕ್ತರ ನೇಮಕಾತಿ: ಶೋಧನಾ ಸಮಿತಿ ರಚನೆ ಕುರಿತ ಅಧಿಸೂಚನೆ ಬಗ್ಗೆ ಹೈಕೋರ್ಟ್‌ನಲ್ಲಿ ಜಿಜ್ಞಾಸೆ

"ಸೂಕ್ತ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡುತ್ತೀರಾ ಅಥವಾ ಆ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ ಮುಂದೆ ಮಾತ್ರ ಇಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ ಎಂದು ಆದೇಶದಲ್ಲಿ ದಾಖಲಿಸಬೇಕೆ?" ಎಂದು ಪ್ರಶ್ನಿಸಿದ ಹೈಕೋರ್ಟ್‌.

Bar & Bench

ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಶೋಧನಾ ಸಮಿತಿ ರಚಿಸಿರುವುದರ ಅಧಿಸೂಚನೆಯನ್ನು ಹೈಕೋರ್ಟ್‌ ಮುಂದೆ ಸಲ್ಲಿಸಬೇಕು ಎನ್ನುವ ಕೋರಿಕೆ ಬುಧವಾರ ಹೈಕೋರ್ಟ್‌ನಲ್ಲಿ ಕೇಳಿಬಂದಿತು.

ಶೋಧನಾ ಸಮಿತಿ ರಚಿಸದೇ ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ನಿವೃತ್ತ ಐಎಎಸ್‌ ಅಧಿಕಾರಿ ಆತಿಶ್‌ ಮೋಹನ್‌ ಪ್ರಸಾದ್‌ ಮತ್ತು ಮಾಹಿತಿ ಆಯುಕ್ತರನ್ನಾಗಿ ಕೆ‌ ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ‌.ಚನ್ನಾಳ, ಎಸ್.ರಾಜಶೇಖರ, ಕೆ ಬದ್ರುದ್ದೀನ್ ಮತ್ತು ಬಿ ಆರ್ ಮಮತಾ ನೇಮಕ ಮಾಡಿರುವುದಕ್ಕೆ ಮಧ್ಯಂತರ ಪರಿಹಾರದ ಭಾಗವಾಗಿ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಮಲ್ಲಿಕಾರ್ಜುನ ರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಮಾಹಿತಿ ಆಯುಕ್ತರ ನೇಮಕಾತಿ ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಮಾರ್ಚ್‌ 4ಕ್ಕೆ ನಿಗದಿಯಾಗಿದೆ. ಅಲ್ಲಿಗೆ ಅನುಪಾಲನಾ ವರದಿ ಸಲ್ಲಿಸಲಾಗುವುದು. ಈಗ ಅರ್ಜಿ ವಿಚಾರಣೆಯನ್ನು ಮುಂದೂಡಬೇಕು” ಎಂದು ಕೋರಿದರು.

ಅರ್ಜಿದಾರರ ಪರ ವಕೀಲ ಅಶೋಕ್‌ ಪಾಟೀಲ್‌ ಅವರು “ವಾಸ್ತವದಲ್ಲಿ ರಾಜ್ಯ‌ ಸರ್ಕಾರವು ಶೋಧನಾ ಸಮಿತಿ ರಚಿಸದೆಯೇ ನೇಮಕಾತಿ ಮಾಡುವ ಮೂಲಕ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿದೆ. ಶೋಧನಾ ಸಮಿತಿ ರಚಿಸುವುದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಸಲ್ಲಿಸಬೇಕು. ಇದನ್ನು ಆಧರಿಸಿ ನ್ಯಾಯಾಲಯ ಪ್ರಕರಣ ನಿರ್ಧರಿಸುವುದಕ್ಕೆ ಆಕ್ಷೇಪವಿಲ್ಲ” ಎಂದರು.

ಒಂದು ಹಂತದಲ್ಲಿ ಮಾಹಿತಿ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ನಡುವಿನ ಚರ್ಚೆಯ ದಾಖಲೆಯನ್ನು ಎಜಿಯವರು ಪೀಠಕ್ಕೆ ಸಲ್ಲಿಸಿದರು.

ಇದನ್ನು ಪರಿಶೀಲಿಸಿದ ಪೀಠವು ನಿಮ್ಮ ವಾದಕ್ಕೆ (ಎಜಿ) ಪೂರಕವಾದ ಅಂಶಗಳಿಲ್ಲ ಎಂದು ಮರಳಿಸಿತು. ಅಲ್ಲದೇ, "ಈಗ ಆದೇಶದಲ್ಲಿ ಏನು ದಾಖಲಿಸಬೇಕು? ಸೂಕ್ತ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡುತ್ತೀರಾ ಅಥವಾ ಆ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ ಮುಂದೆ ಮಾತ್ರ ಇಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ ಎಂದು ಆದೇಶದಲ್ಲಿ ದಾಖಲಿಸಬೇಕೆ?" ಎಂದು ಕೇಳಿತು.

ಆಗ ಅಡ್ವೊಕೇಟ್‌ ಜನರಲ್‌ ಅವರು  ಸ್ವಲ್ಪ ಕಾಲಾವಕಾಶ ನೀಡಿದರೆ ಸೂಚನೆ ಪಡೆದು, ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದರು. ಈ ನೆಲೆಯಲ್ಲಿ ಪೀಠವು ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿತು.

ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರು ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಅರ್ಜಿದಾರರು ಮಧ್ಯಂತರ ಆದೇಶ ಕೋರಿರುವುದನ್ನು ಪರಿಗಣಿಸಬಾರದು ಎಂದೇನಿಲ್ಲ. ರಾಜ್ಯ ಸರ್ಕಾರವು ದಾಖಲೆಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಸೂಕ್ತ ಆದೇಶ ಮಾಡಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಫೆಬ್ರವರಿ 4ರ ವಿಚಾರಣೆಯಂದು ಹೇಳಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.