ಮಾಹಿತಿ ಆಯುಕ್ತರು ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಮಧ್ಯಂತರ ಪರಿಹಾರ ಪರಿಗಣಿಸಬಾರದು ಎಂದೇನಿಲ್ಲ: ಹೈಕೋರ್ಟ್‌

ರಾಜ್ಯ ಸರ್ಕಾರವು ದಾಖಲೆಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಸೂಕ್ತ ಆದೇಶ ಮಾಡಲಿದೆ. ನೇಮಕಾತಿಯು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶಿಸಿರುವ ಹೈಕೋರ್ಟ್.‌
Justice R Devdas, Karnataka High Court
Justice R Devdas, Karnataka High Court
Published on

ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರು ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಅರ್ಜಿದಾರರು ಮಧ್ಯಂತರ ಆದೇಶ ಕೋರಿರುವುದನ್ನು ಪರಿಗಣಿಸಬಾರದು ಎಂದೇನಿಲ್ಲ. ರಾಜ್ಯ ಸರ್ಕಾರವು ದಾಖಲೆಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಸೂಕ್ತ ಆದೇಶ ಮಾಡಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ. ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ಪ್ರಮಾಣ ವಚನ ಕಾರ್ಯಕ್ರಮವು ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿದೆ.

ಶೋಧನಾ ಸಮಿತಿ ರಚಿಸದೇ ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ನಿವೃತ್ತ ಐಎಎಸ್‌ ಅಧಿಕಾರಿ ಆತಿಶ್‌ ಮೋಹನ್‌ ಪ್ರಸಾದ್‌ ಮತ್ತು ಮಾಹಿತಿ ಆಯುಕ್ತರನ್ನಾಗಿ ಕೆ‌ ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ‌.ಚನ್ನಾಳ, ಎಸ್.ರಾಜಶೇಖರ, ಕೆ ಬದ್ರುದ್ದೀನ್ & ಬಿ ಆರ್ ಮಮತಾ ನೇಮಕ ಮಾಡಿರುವುದಕ್ಕೆ ಮಧ್ಯಂತರ ಪರಿಹಾರದ ಭಾಗವಾಗಿ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಮಲ್ಲಿಕಾರ್ಜುನ ರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು “ರಾಜ್ಯ ಸರ್ಕಾರ ಮತ್ತು ಆತಿಶ್‌ ಮೋಹನ್‌ ಪ್ರಸಾದ್‌, ಕೆ‌ ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ‌.ಚನ್ನಾಳ, ಎಸ್.ರಾಜಶೇಖರ, ಕೆ ಬದ್ರುದ್ದೀನ್ & ಬಿ ಆರ್ ಮಮತಾ ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಮಧ್ಯಂತರ ಆದೇಶ ಕೋರಿರುವುದನ್ನು ಪರಿಗಣಿಸಬಾರದು ಎಂದೇನಿಲ್ಲ ಎಂದು ಸರ್ಕಾರ ಮತ್ತು ಪ್ರತಿವಾದಿಗಳಿಗೆ ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರವು ದಾಖಲೆಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಸೂಕ್ತ ಆದೇಶ ಮಾಡಲಿದೆ. ನೇಮಕಾತಿಯು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ಆದೇಶಿಸಿದೆ.

ರಾಜ್ಯ ಸರ್ಕಾರ ಮತ್ತು ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಅಶೋಕ್‌ ಪಾಟೀಲ್‌ ಅವರು “ಮಾಹಿತಿ ಹಕ್ಕು ಕಾಯಿದೆ ಸೆಕ್ಷನ್‌ 15(3)ರ ಅನ್ವಯ ಮುಖ್ಯಮಂತ್ರಿ, ವಿಪಕ್ಷ ನಾಯಕ ಹಾಗೂ ಒಬ್ಬ ಸಂಪುಟ ದರ್ಜೆಯ ಸಚಿವರ ನೇತೃತ್ವದ ಸಮಿತಿಯು ನಾಮನಿರ್ದೇಶನ ಮಾಡಿದವರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ. ಹುದ್ದೆಗೆ ನೂರಾರು ಅರ್ಜಿಗಳು ಬರುವುದರಿಂದ ಸಿಎಂ ನೇತೃತ್ವದ ಸಮಿತಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗದು. ಅದಕ್ಕಾಗಿ ಶೋಧನಾ ಸಮಿತಿಯನ್ನು ರಚಿಸಬೇಕು. ಪ್ರತಿಯೊಬ್ಬ ಅರ್ಜಿದಾರರ ಅರ್ಹತೆ ಆಧರಿಸಿ ಶೋಧನಾ ಸಮಿತಿಯು ಹೆಸರುಗಳನ್ನು ಅಂತಿಮಗೊಳಿಸುತ್ತದೆ. ಇದು ರಾಜ್ಯದಲ್ಲಿ ನಡೆದಿಲ್ಲ. ಅಂಜಲಿ ಭಾರದ್ವಾಜ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಗಳ ಪ್ರಕಾರ ಪ್ರತಿಯೊಂದು ರಾಜ್ಯವೂ ಶೋಧನಾ ಸಮಿತಿ ರಚಿಸಬೇಕು. ಸಲ್ಲಿಕೆಯಾಗುವ ಅರ್ಜಿಗಳನ್ನು ಶೋಧನಾ ಸಮಿತಿಯು ಪರಿಶೀಲಿಸಿ, ಶಿಫಾರಸ್ಸು ಮಾಡಬೇಕು. ಇದನ್ನು ಪಾಲಿಸಲಾಗಿಲ್ಲ” ಎಂದರು.

ಮುಂದುವರಿದು, “ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕವಾಗಿರುವ ಆಶಿತ್‌ ಮೋಹನ್‌ ಪ್ರಸಾದ್‌ ಅವರು ಆ ಹುದ್ದೆಗೆ ಅರ್ಜಿಯನ್ನೇ ಹಾಕಿರಲಿಲ್ಲ. ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ಅರ್ಜಿ ಹಾಕಿದ್ದರು. ಇದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ” ಎಂದರು.

Also Read
ರಾಜ್ಯ ಮಾಹಿತಿ ಆಯೋಗಕ್ಕೆ ಆಯುಕ್ತರ ನೇಮಕಾತಿ ಪ್ರಶ್ನಿಸಿ ಅರ್ಜಿ: ಹೈಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆ

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಶೋಧನಾ ಸಮಿತಿ/ಆಯ್ಕೆ ಸಮಿತಿ ದಾಖಲೆಗಳನ್ನು ಪರಿಶೀಲಿಸಿ, ಪ್ರತಿವಾದಿಗಳ ಹೆಸರುಗಳನ್ನು ಮುಖ್ಯಮಂತ್ರಿ ನೇತೃತ್ವದ ಸಮಿತಿಯು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದೆ. ಈ ಬಳಿಕ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇಂದು ಸಂಜೆ ಐದು ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಲಾಗಿದೆ. 2025ರ ಜನವರಿ 7ರಂದು ಸುಪ್ರೀಂ ಕೋರ್ಟ್‌ ತನ್ನ ನಿರ್ದೇಶನಗಳನ್ನು ರಾಜ್ಯ ಸರ್ಕಾರಗಳು ಪಾಲಿಸದಿರುವ ಕುರಿತಾದ ಅಹವಾಲುಗಳನ್ನು ಮುಂದಿನ ವಿಚಾರಣೆಯಲ್ಲಿ ಆಲಿಸುವುದಾಗಿ ತಿಳಿಸಿದೆ. ಈ ನೆಲೆಯಲ್ಲಿ ಅರ್ಜಿದಾರರನ್ನು ಸುಪ್ರೀಂ ಕೋರ್ಟ್‌ಗೆ ಸಂಪರ್ಕಿಸಲು ಆದೇಶಿಸಬೇಕು” ಎಂದು ಕೋರಿದರು.

ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ ಆತಿಶ್‌ ಮೋಹನ್‌ ಪ್ರಸಾದ್‌ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಹಾಜರಿದ್ದರು.

Kannada Bar & Bench
kannada.barandbench.com