ಸುದ್ದಿಗಳು

ಬೆಂಗಳೂರಿನ ರಸ್ತೆಗಳಲ್ಲಿ ಇರುವುದು ಕೇವಲ 400 ಗುಂಡಿ ಅನ್ನುವುದು ನಿಜವೇ? ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕಿಡಿ

ಟೆಂಡರ್ ಪ್ರಕ್ರಿಯೆ ನಡೆದಾಗ ಮಾತ್ರ ನೀವು ಕೆಲಸ ಮಾಡುತ್ತೀರಾ? ಅಲ್ಲಿಯವರೆಗೆ ಜನ ಗುಂಡಿಗಳಲ್ಲಿ ಬೀಳುತ್ತಿರಬೇಕಾ? ಯಾರಾದರೂ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುವಾಗ ಅವರು ಚರಂಡಿಗೆ ಬೀಳುತ್ತಾರೆ ಎಂದು ಪೀಠ ಟೀಕಿಸಿತು.

Bar & Bench

ಬೆಂಗಳೂರಿನ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ರಿಪೇರಿ ಮಾಡುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಿರ್ಲಕ್ಷ್ಯ ಮತ್ತು ನಿರಾಸಕ್ತಿಯು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ಅಸಮಾಧಾನಕ್ಕೆ ಕಾರಣವಾಯಿತು.

ಬೆಂಗಳೂರಿನ ರಸ್ತೆಗಳಲ್ಲಿ ಕೇವಲ 439 ಗುಂಡಿಗಳು ಮತ್ತು ಸುಮಾರು 4,000ದಷ್ಟು ಇತರೆ ಪಾದಚಾರಿ ಮಾರ್ಗದ ಸಮಸ್ಯೆಗಳಿವೆ. ಫುಟ್‌ಪಾತ್‌ ದುರಸ್ತಿಗೆ ಟೆಂಡರ್‌ ಕರೆಯಲಾಗಿದೆ ಎಂಬ ಅಧಿಕಾರಿಗಳ ಹೇಳಿಕೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠಕ್ಕೆ ತೃಪ್ತಿ ನೀಡಲಿಲ್ಲ.

“ಇಡೀ ಬೆಂಗಳೂರು ನಗರದಲ್ಲಿ ಇರುವುದು ಕೇವಲ 400 ಗುಂಡಿ ಅನ್ನುವುದು ನಿಜವೇ? ಕಾನೂನು ಸೇವಾ ಪ್ರಾಧಿಕಾರ ನೀಡಿದ್ದ ವರದಿಯನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡಿದ್ದೀರಾ?” ಎಂದು ವಿಚಾರಣೆಯ ವೇಳೆ ಪೀಠವು ಪ್ರಶ್ನಿಸಿತು. ನಗರದ ರಸ್ತೆಗಳ ಕುರಿತು ನಾಗರಿಕರು ವ್ಯಕ್ತಪಡಿಸಿದ್ದ ಅಸಮಾಧಾನವನ್ನು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ದಾಖಲಿಸಿತ್ತು. ಸುಮಾರು 5,435 ಗುಂಡಿ ಮತ್ತು ಫುಟ್‌ಪಾತ್ ಸಮಸ್ಯೆಗಳಿವೆ ಎಂದು ನಾಗರಿಕರು ವರದಿಯಲ್ಲಿ ಪ್ರತಿಕ್ರಿಯಿಸಿದ್ದರು.

ಟೆಂಡರ್‌ ಪ್ರತಿಕ್ರಿಯೆ ನಡೆಯುತ್ತಿದೆ ಎಂಬ ಬಿಬಿಎಂಪಿ ಅಧಿಕಾರಿಗಳ ಹೇಳಿಕೆ ಕುರಿತು ಸಹ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, “ಟೆಂಡರ್‌ ಪ್ರಕ್ರಿಯೆ ನಡೆದಾಗ ಮಾತ್ರ ನೀವು ಕೆಲಸ ಮಾಡುತ್ತೀರಾ? ಅಲ್ಲಿಯವರೆಗೆ ಜನ ಈ ಗುಂಡಿಗಳಲ್ಲಿ ಬೀಳುತ್ತಿರಬೇಕಾ? ಯಾರಾದರೂ ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದರೆ ಅವರು ನೇರವಾಗಿ ಚರಂಡಿ ಪಾಲಾಗುತ್ತಾರೆ” ಎಂದು ಬೇಸರಿಸಿತು. ಬೆಂಗಳೂರಿನ ರಸ್ತೆಗಳ ಕೆಟ್ಟ ಸ್ಥಿತಿ ಕುರಿತು 2015 ರಲ್ಲಿ ವಿಜಯನ್ ಮೆನನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ನಗರದಲ್ಲಿ ಗುಂಡಿ, ಕೆಟ್ಟ ರಸ್ತೆ ಮತ್ತು ಫುಟ್‌ಪಾತ್ ದುರಸ್ತಿಗಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸುವ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್‌ 30 ರಂದು ನಡೆಯಲಿದೆ.