ಬಿಬಿಎಂಪಿ ಚುನಾವಣೆ ನಡೆಸಲು ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್‌

ರಾಜ್ಯ ಚುನಾವಣಾ ಆಯೋಗ ಹಾಗೂ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದ ಪ್ರಮುಖ ಅರ್ಜಿದಾರರಾದ ಎಂ ಶಿವರಾಜು, ಅಬ್ದುಲ್‌ ವಾಜಿದ್‌ ಮತ್ತು ರವಿ ಜಗನ್‌ ಅವರಿಗೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ನೋಟಿಸ್‌ ಜಾರಿ ಮಾಡಿದೆ.
Justice AS Bopanna, CJI Bobde and Justice V Ramasubramanian
Justice AS Bopanna, CJI Bobde and Justice V Ramasubramanian
Published on

ಆರು ವಾರಗಳ ಒಳಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ರಾಜ್ಯ ಚುನಾವಣಾ ಆಯೋಗ ಹಾಗೂ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದ ಪ್ರಮುಖ ಅರ್ಜಿದಾರರಾದ ಎಂ ಶಿವರಾಜು, ಅಬ್ದುಲ್‌ ವಾಜಿದ್‌ ಮತ್ತು ರವಿ ಜಗನ್‌ ಅವರಿಗೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರು ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಏರಿಕೆ ಮಾಡಿರುವ ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಮೂರನೇ ತಿದ್ದುಪಡಿ ಕಾಯಿದೆ – 2020ಯ (ತಿದ್ದುಪಡಿ ಕಾಯಿದೆ) ಸಿಂಧುತ್ವವನ್ನು ಡಿಸೆಂಬರ್‌ 4ರಂದು ಹೈಕೋರ್ಟ್‌ ಎತ್ತಿ ಹಿಡಿದಿತ್ತು.

ತಿದ್ದುಪಡಿ ಕಾಯಿದೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಅದನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆದರೆ, ತಿದ್ದುಪಡಿ ಮಾಡಿದ ನಿಬಂಧನೆಗಳು ಜಾರಿಗೆ ಬರುವ ಮೊದಲು ಚುನಾವಣೆಗೆ ಬಾಕಿ ಇದ್ದ ಕಾರ್ಪೊರೇಷನ್‌ಗಳ ಚುನಾವಣೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿತ್ತು. ಆ ಮೂಲಕ ತಿದ್ದುಪಡಿಗೂ ಮುನ್ನ ಅವಧಿ ಪೂರೈಸಿದ್ದ ಬಿಬಿಎಂಪಿಗೆ ಇದು ಅನ್ವಯಿಸುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿತ್ತು.

ತಿದ್ದುಪಡಿ ಕಾಯಿದೆಯ ಅನ್ವಯ ವಾರ್ಡ್‌ಗಳ ಸಂಖ್ಯೆಯನ್ನು198 ರಿಂದ 243ಕ್ಕೆ ಏರಿಕೆ ಮಾಡಿದ್ದರೂ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ ಎಂದು ರಾಜ್ಯ ಸರ್ಕಾರವು ವಕೀಲ ಶುಭ್ರಾಂಶು ಪಧಿ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

“ಬೇರೆ ಪದಗಳಲ್ಲಿ ಹೇಳುವುದಾದರೆ, ನ್ಯಾಯಯುತ ಮತ್ತು ಸರ್ವಾನುಮತದಿಂದ ಜಾರಿಗೆ ತರಲಾದ ಶಾಸನಕ್ಕೆ ವಿರುದ್ಧವಾದ ರೀತಿಯಲ್ಲಿ ಚುನಾವಣೆ ನಡೆಸಲು ಹೈಕೋರ್ಟ್ ರಾಜ್ಯಕ್ಕೆ ನಿರ್ದೇಶನ ನೀಡಿದೆ” ಎಂದು ರಾಜ್ಯ ಸರ್ಕಾರವು ಮೇಲ್ಮನವಿಯಲ್ಲಿ ಹೇಳಿತ್ತು.

Also Read
ವಾರ್ಡ್‌ಗಳ ಮರುವಿಂಗಡಣೆಯಾದರೆ ಕನಿಷ್ಠ ಒಂದು ವರ್ಷ ಬಿಬಿಎಂಪಿ ಚುನಾವಣೆ ತಡವಾಗಬಹುದು: ಹೈಕೋರ್ಟ್‌ಗೆ ಆಯೋಗ ಪ್ರತಿಕ್ರಿಯೆ

1976 ಕೆಎಂಸಿ ಕಾಯಿದೆಗೆ ತಿದ್ದುಪಡಿ ತಂದು ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಈ ಹಿಂದಿನ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯುವ ಮುನ್ನ (2020ರ ಸೆಪ್ಟೆಂಬರ್‌ 10) ನಡೆಸಿರಲಿಲ್ಲ.

ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ವಾರ್ಡ್‌ಗಳ ಸಂಖ್ಯೆಯನ್ನು ಕನಿಷ್ಠ 243ಕ್ಕೆ ಹೆಚ್ಚಿಸುವ ಉದ್ದೇಶದಿಂದ ಕೆಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಸಂವಿಧಾನಬದ್ಧವಾಗಿ ಸರ್ಕಾರವು ಜಾರಿಗೆ ತಂದ ತಿದ್ದುಪಡಿಯ ಸಿಂಧುತ್ವವನ್ನು ಹೈಕೋರ್ಟ್‌ ಎತ್ತಿ ಹಿಡಿಯಬೇಕಿತ್ತು. ಕಾನೂನು ತಿದ್ದಪಡಿಯು ಸಂವಿಧಾನದ 243(ಯು) ವಿಧಿಯ ಆಶಯಗಳಿಗೆ ವಿರುದ್ಧವಾಗಿಲ್ಲ” ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಿತ್ತು.

Kannada Bar & Bench
kannada.barandbench.com