Women officers
Women officers 
ಸುದ್ದಿಗಳು

ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರ ಸೇರ್ಪಡೆಗೆ ಕೇಂದ್ರ ಸರ್ಕಾರ ಅಸ್ತು: ಸುಪ್ರೀಂ ಕೋರ್ಟ್‌ಗೆ ಮಾಹಿತಿ

Bar & Bench

ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಯುವತಿಯರನ್ನು ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಕ್ಷಣಾ ಪಡೆಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ವಿಚಾರವನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.

“ಈ ವಿಚಾರವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ಯುವತಿಯರು ಎನ್‌ಡಿಎಗೆ ಸೇರಲು ಅನುಮತಿಸಲಾಗುವುದು. ಈ ಸಂಬಂಧ ವಿಸ್ತೃತವಾದ ಅಫಿಡವಿಟ್‌ ಅನ್ನು ನಾವು ಸಲ್ಲಿಸಲಿದ್ದೇವೆ” ಎಂದು ಎಎಸ್‌ಜಿ ಭಾಟಿ ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯವು ಪ್ರಕರಣವನ್ನು ಸೆಪ್ಟೆಂಬರ್‌ 22ಕ್ಕೆ ಮುಂದೂಡಿತು.

ಮಹಿಳೆಯರಿಗೆ ಎನ್‌ಡಿಎದ ಭಾಗವಾಗಲು ನಿರಾಕರಿಸುವುದು ಸಂವಿಧಾನದ 14, 15, 16 ಮತ್ತು 19ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.

ಎನ್‌ಡಿಎ ಪ್ರವೇಶ ಪರೀಕ್ಷೆ ಬರೆಯಲು ಅನುಮತಿಸಿ ಸುಪ್ರೀಂ ಕೋರ್ಟ್‌ ಕಳೆದ ವಿಚಾರಣೆಯ ಸಂದರ್ಭದಲ್ಲಿ ಮಧ್ಯಂತರ ಆದೇಶ ಹೊರಡಿಸಿತ್ತು. ನಿಯಮ ಮತ್ತು ಮೂಲಸೌಲಭ್ಯದಲ್ಲಿ ಬದಲಾವಣೆ ಮಾಡಬೇಕಿರುವುದರಿಂದ ಪರೀಕ್ಷೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಲು ಅವಕಾಶ ಮಾಡಿಕೊಡಬೇಕು ಎಂದು ಎಎಸ್‌ಜಿ ಕೋರಿದರು.

ಕೇಂದ್ರದ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ “ಎನ್‌ಡಿಎ ಮಹಿಳೆಯರ ಪ್ರವೇಶಾತಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳನ್ನು ಪ್ರೇರೇಪಿಸಿದ್ದೇವೆ. ದೇಶದಲ್ಲಿ ರಕ್ಷಣಾ ಪಡೆಗಳಿಗೆ ಹೆಚ್ಚಿನ ಗೌರವವಿದೆ. ಆದರೆ, ಲಿಂಗ ಸಮಾನತೆ ವಿಚಾರದಲ್ಲಿ ಅವರು ಇನ್ನೂ ಸಾಕಷ್ಟು ಸುಧಾರಣೆಗಳನ್ನು ತರಬೇಕಿದೆ. ಸರ್ಕಾರದ ಸದ್ಯದ ನಿಲುವಿನಿಂದ ಸಂತೋಷವಾಗಿದೆ. ಸುಧಾರಣೆ ಒಂದೇ ದಿನದಲ್ಲಿ ಆಗುವುದಿಲ್ಲ, ಇದರ ಅರಿವು ನಮಗೂ ಇದೆ” ಎಂದಿತು.

“ಎನ್‌ಡಿಎಗೆ ಮಹಿಳೆಯರನ್ನು ಸೇರ್ಪಡೆಗೊಳಿಸಲು ರಕ್ಷಣಾ ಪಡೆಗಳು ನಿರ್ಧರಿಸಿವೆ ಎಂದು ಎಎಸ್‌ಜಿ ಹೇಳಿದ್ದಾರೆ. ಉಳಿದ ವಿಚಾರಗಳನ್ನು ಪರಿಶೀಲಿಸಲಾಗುವುದು. ಅಭಿವೃದ್ಧಿ ಯೋಜನೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಲಾಗಿದೆ. ಲಿಂಗ ಸಮಾನತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ರಕ್ಷಣಾ ಪಡೆ ಕ್ರಮಕೈಗೊಳ್ಳುವಂತೆ ಮನವೊಲಿಸಿರುವ ಎಸ್‌ಎಸ್‌ಜಿ ಶ್ರಮಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಮಹಿಳೆಯರು ನಿಭಾಯಿಸುತ್ತಿರುವ ಪ್ರಮುಖ ಪಾತ್ರವನ್ನು ರಕ್ಷಣಾ ಪಡೆಗಳು ಗೌರವಿಸುತ್ತವೆ ಎಂದು ನಾವು ನಂಬುತ್ತೇವೆ. ನ್ಯಾಯಾಲಯಗಳು ಮಧ್ಯಪ್ರವೇಶಿಸುವುದಕ್ಕಿಂತ ಮುನ್ನ ಲಿಂಗಾಧಾರಿತ ಪಾತ್ರಗಳ ಕುರಿತು ರಕ್ಷಣಾ ಪಡೆಗಳು ಸ್ವಯಂಪ್ರೇರಿತವಾಗಿ ಕ್ರಮಕ್ಕೆ ಮುಂದಾಗಬೇಕು ಎಂಬುದು ನಮ್ಮ ಇರಾದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪುರುಷ ಸಹೋದ್ಯೋಗಿಗಳಿಗೆ ಕಲ್ಪಿಸಲಾಗಿರುವಂತೆ ಮಹಿಳಾ ಅಧಿಕಾರಿಗಳ ಸೇವೆಯನ್ನು ಕಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು (ಪರ್ಮನೆಂಟ್‌ ಕಮಿಷನ್) ಎಂದು ಕಳೆದ ವರ್ಷದ ಫೆಬ್ರವರಿಯಲ್ಲಿ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್‌ ಹೊರಡಿಸಿತ್ತು. ಕೇಂದ್ರ ಸರ್ಕಾರದ ವ್ಯಾಪಕ ವಿರೋಧದ ನಡುವೆಯೂ ನ್ಯಾಯಾಲಯ ಈ ಆದೇಶ ಹೊರಡಿಸಿತ್ತು.