nagaland map with afspa, tanks

 
ಸುದ್ದಿಗಳು

ನಾಗಾಲ್ಯಾಂಡ್‌: ಇನ್ನೂ 6 ತಿಂಗಳು ಎಎಫ್ಎಸ್‌ಪಿಎ ಕಾಯಿದೆ ಅನ್ವಯ

ಇಡೀ ಈಶಾನ್ಯ ರಾಜ್ಯಗಳಿಂದ ಕಾಯಿದೆ ಹಿಂತೆಗೆದುಕೊಳ್ಳುವ ಸಂಬಂಧ ಸಮಿತಿ ರಚಿಸಬೇಕು ಎಂದು ಕೆಲ ದಿನಗಳ ಹಿಂದೆ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಘೋಷಿಸಿದ್ದರು.

Bar & Bench

ನಾಗಾಲ್ಯಾಂಡ್‌ಗೆ ಇನ್ನೂ ಆರು ತಿಂಗಳ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (ಎಎಫ್‌ಎಸ್‌ಪಿಎ) ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿರುವ ಗೊಂದಲ ಮತ್ತು ಅಪಾಯಕಾರಿ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ನಾಗರಿಕ ಶಕ್ತಿಯ ನೆರವಿಗೆ ಸಶಸ್ತ್ರ ಪಡೆಗಳ ಬಳಕೆ ಅಗತ್ಯ ಎಂದು ಕೇಂದ್ರ ಸರ್ಕಾರ ಗುರುವಾರ ಹೊರಡಿಸಿದ ಗೆಜೆಟ್‌ ಅಧಿಸೂಚನೆಯಲ್ಲಿ ತಿಳಿಸಿದೆ. ಹೀಗಾಗಿ ಇಡೀ ರಾಜ್ಯವನ್ನು ಡಿಸೆಂಬರ್ 30, 2021 ರಿಂದ ಅನ್ವಯವಾಗುವಂತೆ ಕಾಯಿದೆಯಡಿಯ 'ಪ್ರಕ್ಷುಬ್ಧ ಪ್ರದೇಶ' ಎಂದು ಘೋಷಿಸಲಾಗಿದೆ.

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯು ಯಾರ ಮೇಲೆ ಬೇಕಾದರೂ ಗುಂಡು ಹಾರಿಸುವ ಮತ್ತು ಯಾರನ್ನಾದರೂ ಹಾಗೂ ಯಾವುದೇ ಸ್ಥಳವನ್ನಾದರೂ ಶೋಧಿಸಲು ಅವಕಾಶ ನೀಡಿ ಸೇನೆ ಮತ್ತು ಸೇನಾ ಪಡೆಗಳಿಗೆ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಅಧಿಕಾರ ಒದಗಿಸುತ್ತದೆ.

ಕಳೆದ ಡಿಸೆಂಬರ್ 4 ರಂದು ಮೊನ್ ಜಿಲ್ಲೆಯಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿ ಹದಿನಾಲ್ಕು ನಾಗರಿಕರನ್ನು ಕೊಂದ ಘಟನೆಗೆ ಸಂಬಂಧಿಸಿದಂತೆ ಮೇಘಾಲಯ, ಮಣಿಪುರ, ನಾಗಾಲ್ಯಾಂಡ್ ಹಾಗೂ ಈಶಾನ್ಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳು ಎಎಫ್‌ಎಸ್‌ಪಿಎ ರದ್ದತಿಗೆ ಕರೆ ನೀಡಿದ್ದವು.

ಇಡೀ ಈಶಾನ್ಯದಿಂದ ಕಾಯಿದೆಯನ್ನು ಹಿಂತೆಗೆದುಕೊಳ್ಳುವ ಸಂಬಂಧ 45 ದಿನಗಳಲ್ಲಿ ಪರಿಶೀಲಿಸಿ ವರದಿ ನೀಡಲು ಸಮಿತಿಯನ್ನು ರಚಿಸುವುದಾಗಿ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಭಾನುವಾರ ಘೋಷಿಸಿದ್ದರು.