ನಾಗಾಲ್ಯಾಂಡ್ ಸರ್ಕಾರವು ರಾಜ್ಯದಲ್ಲಿ ಶ್ವಾನ ಮಾಂಸ ಆಮದು, ವ್ಯಾಪಾರ ಮತ್ತು ಮಾರಾಟ ನಿಷೇಧಿಸಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಅವಧಿಯಲ್ಲಿ ಪ್ರತಿಕ್ರಿಯೆ ದಾಖಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಗುವಾಹಾಟಿ ಹೈಕೋರ್ಟ್ ಜುಲೈನಲ್ಲಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿದೆ (ನೈಜೆವೊಲೈ ಕುವಾಟ್ಸೊ ಅಲಿಯಾಸ್ ಟೋನಿ ಕುವಾಟ್ಸೊ ಮತ್ತು ಇತರರು ವರ್ಸಸ್ ನಾಗಾಲ್ಯಾಂಡ್ ಸರ್ಕಾರ ಮತ್ತು ಇತರರು).
ರಾಜ್ಯ ಸರ್ಕಾರವು ಶ್ವಾನ ಮಾಂಸ ಆಮದು ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶ ಪ್ರಶ್ನಿಸಿ ಕೋಹಿಮಾದ ಶ್ವಾನ ಮಾಂಸ ಮಾರಾಟಗಾರರು ಸಲ್ಲಿಸಿದ್ದ ಮನವಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಶ್ವಾನ ಮಾಂಸ ನಿಷೇಧಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸುವಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಸೆಪ್ಟೆಂಬರ್ 14 ರಂದು ಹೈಕೋರ್ಟ್ ಸೂಚಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ನ್ಯಾಯಮೂರ್ತಿ ಎಸ್ ಹುಕಾಟೊ ಸು ಅವರಿದ್ದ ಪೀಠಕ್ಕೆ ಸರ್ಕಾರದ ವಕೀಲರು ಕಳೆದ ಬುಧವಾರ ವಿವರಿಸಿದ್ದರು.
ಮನವಿದಾರರ ವಾದವನ್ನು ಪರಿಗಣಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯವರೆಗೆ ಸರ್ಕಾರವು ಜುಲೈ 4ರಂದು ಹೊರಡಿಸಿರುವ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಹೇಳಿತು.
ಮುಂದಿನ ವಿಚಾರಣೆಯ ವೇಳೆಗೆ ಪ್ರತಿಕ್ರಿಯೆ ದಾಖಲಿಸಲು ಯತ್ನಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠವು ಆದೇಶಿಸಿದೆ. ರಜಾ ಕಾಲದ ಅವಧಿಯಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅರ್ಜಿದಾರರ ಪರ ವಕೀಲ ಎಲ್ ಇರಲು ಅವರು ಕೆಳಗಿನ ವಾದಗಳನ್ನು ಮುಂದು ಮಾಡಿದ್ದರು:
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ಶ್ವಾನ ಮಾಂಸ ನಿಷೇಧ ಆದೇಶ ಹೊರಡಿಸಿದ್ದಾರೆ. ಆದರೆ, ಅವರಿಗೆ ಅಂಥ ಶಾಸನಾತ್ಮಕ ಆದೇಶ ಹೊರಡಿಸುವ ಅಧಿಕಾರವಿಲ್ಲ. ಆಹಾರ ಭದ್ರತಾ ಮಾನದಂಡಗಳ ಕಾಯಿದೆ-2006 ಅಡಿ ಆಹಾರ ಭದ್ರತಾ ಆಯುಕ್ತರಿಗೆ ಆ ಅಧಿಕಾರ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 4ರಂದು ವಾಣಿಜ್ಯ ಉದ್ದೇಶಕ್ಕಾಗಿ ಶ್ವಾನದ ಮಾಂಸ ಆಮದು ಮತ್ತು ಮಾರಾಟ ಹಾಗೂ ಮಾರುಕಟ್ಟೆ, ರೆಸ್ಟೋರೆಂಟ್‌ಗಳಲ್ಲಿ ವಿವಿಧ ಭಕ್ಷ್ಯ ತಯಾರಿಸಲು ನಿಷೇಧ ಹೇರಿರುವುದು ಕಾನೂನು ಬಾಹಿರ.
ಆದೇಶ ಹೊರಡಿಸುವುದಕ್ಕೂ ಮುನ್ನ ಪ್ರಶ್ನಾರ್ಹವಾದ ಆಹಾರವು ಭೋಜನಕ್ಕೆ ಯೋಗ್ಯವೇ ಎಂಬುದು ಸೇರಿದಂತೆ ಆಹಾರ ಭದ್ರತಾ ಮಾನದಂಡಗಳ ಕಾಯಿದೆಯ ಅಡಿ ವಿವಿಧ ಕಾರ್ಯವಿಧಾನಗಳನ್ನು ಅನುಸರಿಸಬೇಕಿದೆ. ನಿಷೇಧಕ್ಕೂ ಮುನ್ನ ಆದೇಶದಿಂದ ತೊಂದರೆಗೆ ಒಳಗಾಗುವ ಜನರಿಗೆ ನೋಟಿಸ್ ನೀಡಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ.
ಸಂವಿಧಾನದ 14, 19 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸಿದರೆ, ಸಂವಿಧಾನದ 162ನೇ ವಿಧಿಯ ಅನ್ವಯ ಹೊರಡಿಸಲಾದ ಕಾರ್ಯಾದೇಶವು ಅಸಿಂಧುವಾಗಲಿದೆ. ಆದೇಶಗಳಿಗೆ ಶಾಸನದ ಬೆಂಬಲದ ಅಗತ್ಯ.
ಸಚಿವ ಸಂಪುಟದ ತೀರ್ಮಾನ ಆಧರಿಸಿ ಜುಲೈ 4ರಂದು ಕಾರ್ಯಾದೇಶ ಹೊರಡಿಸಲಾಗಿದ್ದು, ಇದಕ್ಕೆ ಶಾಸನ ಸಭೆಯ ಬೆಂಬಲವಿಲ್ಲ ಮತ್ತು ಇದು ಕಾನೂನು ಬಾಹಿರ ಎಂದು ಮನವಿದಾರರು ಆದೇಶವನ್ನು ಪ್ರಶ್ನಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಶ್ವಾನ ಮಾಂಸ ನಿಷೇಧ ಮಾಡಿದ್ದರಿಂದ ಅರ್ಜಿದಾರರ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ವಕೀಲ ಇರಲು ವಾದಿಸಿದರು. ರಿಟ್ ಅರ್ಜಿ ವಿಲೇವಾರಿಯಾಗುವವರೆಗೆ ಪ್ರಶ್ನಾರ್ಹವಾದ ಆದೇಶಕ್ಕೆ ತಡೆ ನೀಡುವಂತೆ ಮನವಿದಾರರ ಕೋರಿಕೆಯನ್ನು ನ್ಯಾಯಾಲಯ ಪುರಸ್ಕರಿಸಿದೆ.