Justice Dharam Chand Chaudhary
Justice Dharam Chand Chaudhary 
ಸುದ್ದಿಗಳು

ರಕ್ಷಣಾ ಸಚಿವಾಲಯದ ಒತ್ತಡದಿಂದ ನ್ಯಾಯಮೂರ್ತಿ ವರ್ಗ: ಕೆಲಸಕ್ಕೆ ಗೈರಾದ ಚಂಡಿಗಢದ ಸಶಸ್ತ್ರ ಪಡೆ ನ್ಯಾಯಮಂಡಳಿ ವಕೀಲರ ಸಂಘ

Bar & Bench

ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಧರಂ ಚಂದ್ ಚೌಧರಿ ಅವರನ್ನು ಚಂಡಿಗಢದಿಂದ ಕೋಲ್ಕತ್ತಾದ ಎಎಫ್‌ಟಿ ಪೀಠಕ್ಕೆ ವರ್ಗಾಯಿಸಿರುವುದನ್ನು ಪ್ರತಿಭಟಿಸಿ ಚಂಡಿಗಢದ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ವಕೀಲರ ಸಂಘ ಅನಿರ್ದಿಷ್ಟ ಕಾಲ ಕೆಲಸದಿಂದ ದೂರ ಉಳಿಯಲು ನಿರ್ಧರಿಸಿದೆ.

ನ್ಯಾಯಮೂರ್ತಿ ಚೌಧರಿ ಅವರ ಹಠಾತ್ ವರ್ಗಾವಣೆ, ನ್ಯಾಯಾಂಗ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಎಎಫ್‌ಟಿ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸೋಮವಾರ ಕೈಗೊಂಡ ನಿರ್ಣಯದ ವೇಳೆ ತಿಳಿಸಿದೆ.

ಇದಕ್ಕೂ ಮೊದಲು, ನ್ಯಾಯಮೂರ್ತಿ ಚೌಧರಿ ಅವರನ್ನು ವರ್ಗಾವಣೆ ಮಾಡುವ ಎಎಫ್‌ಟಿ ಅಧ್ಯಕ್ಷರ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಕೀಲರ ಮಂಡಳಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿತ್ತು. ನ್ಯಾ. ಧರಂ ಚಂದ್‌ ಚೌಧರಿ ಅವರ ವರ್ಗಾವಣೆಯು ನ್ಯಾಯಾಂಗದ ಮೇಲಿನ ನೇರ ಹಲ್ಲೆಯಾಗಿದ್ದು ಕೂಡಲೇ ಸಿಜೆಐ ಅವರು ಮಧ್ಯಪ್ರವೇಶಿಸಿ ವರ್ಗಾವಣೆ ಆದೇಶವನ್ನು ರದ್ದುಪಡಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳ ವಿರುದ್ಧ ಅವರು ಜಾರಿ ಮಾಡಿದ ಕಠಿಣ ಆದೇಶಗಳ ಪರಿಣಾಮ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಿಜೆಐಗೆ ಬರೆದಿರುವ ಪತ್ರದಲ್ಲಿ ವಕೀಲರು ಆರೋಪಿಸಿದ್ದಾರೆ.

ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ವಿರುದ್ಧ ಅಹಿತಕರ ಆದೇಶ ಬಯಸದ ಸಚಿವಾಲಯ ಮತ್ತು ಎಎಫ್‌ಟಿ ಅಧ್ಯಕ್ಷರ ಒತ್ತಡಕ್ಕೆ ಮಣಿಯಲು ನಿರಾಕರಿಸಿರುವ ಸಾಧ್ಯತೆ ಇರುವುದರಿಂದ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.