ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ತನಿಖೆಯ ವೈಖರಿಯ ಬಗ್ಗೆ ಬಾಂಬೆ ಹೈಕೋರ್ಟ್ ಗುರುವಾರ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈವರೆಗಿನ ತನಿಖೆಯಲ್ಲಿ ಆರೋಪಿಗಳನ್ನು ಹೆಸರಿಸುವಲ್ಲಿ ಮುಂಬೈ ಪೊಲೀಸರು ವಿಫಲವಾಗಿರುವುದನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿತು. ಒಂದು ಹಂತದಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ಸಿಬಿಐ ಅನ್ನು ‘ಪಂಜರದ ಗಿಣಿ’ ಎಂದಿದ್ದನ್ನೂ ಸಹ ಅದು ನೆನಪಿಸಿತು. ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಷ್ ಪಿಟಾಲೆ ಅವರನ್ನು ಒಳಗೊಂಡ ವಿಭಾಗೀಯ ಪೀಠವು ವಿಚಾರಣೆಯನ್ನು ಇಂದೂ ಸಹ ಮುಂದುವರೆಸಿತು.
‘ನೀವು ಅವರನ್ನು (ರಿಪಬ್ಲಿಕ್ ಟಿವಿ ಅಧಿಕಾರಿಗಳು) ಮೊದಲು ಆರೋಪಿಗಳು ಎಂದು ಆನಂತರ ಸಾಕ್ಷ್ಯಗಳಿವೆ ಎನ್ನಲಾಗದು. ನಿಮ್ಮ ಬಳಿ ಸಾಕ್ಷ್ಯಗಳಿದ್ದರೆ ಅವರನ್ನು ಆರೋಪಿಗಳು ಎಂದು ಮಾಡಿ. ಆಗ ಅವರಿಗೆ ತಾವು ಏನು ಪರಿಹಾರವನ್ನು ಕೋರಬೇಕು ಎನ್ನುವುದಾದರೂ ತಿಳಿಯುತ್ತದೆ,” ಎಂದು ನ್ಯಾಯಮೂರ್ತಿ ಮನೀಷ್ ಪಿಟಾಲೆ ವಿಚಾರಣೆಯ ವೇಳೆ ಹೇಳಿದರು. ಇದಕ್ಕೆ ದನಿಗೂಡಿಸಿದ ರಿಪಬ್ಲಿಕ್ ಟಿವಿ ಪರ ಹಿರಿಯ ವಕೀಲ ಮುಂಡರಗಿ, “ನಮ್ಮ ತಲೆಯ ಮೇಲೆ ಕತ್ತಿ ತೂಗುವುದನ್ನು ಸಹಿಸಲಾಗದು,” ಎಂದರು.
ಮುಂದುವರೆದ ನ್ಯಾಯಾಲಯ, “ನೀವಾದರೂ ಈ ನ್ಯಾಯಾಲಯಕ್ಕೆ ಪರಿಹಾರ ಕೋರಿ ಬರುವಂತಹ ಕಕ್ಷಿದಾರರನ್ನು ಪ್ರತಿನಿಧಿಸುತ್ತಿದ್ದೀರಿ. ಇಲ್ಲಿಗೆ ಬರಲಾಗದೆ ಸರಳುಗಳ ಹಿಂದೆ ಹಾಕಲಾದ ವ್ಯಕ್ತಿಗಳ ಪರಿಸ್ಥಿತಿಯ ಬಗ್ಗೆ ಒಮ್ಮೆ ಯೋಚಿಸಿ ನೋಡಿ,” ಎಂದು ನ್ಯಾ. ಪಿಟಾಲೆ ಅವರು ಹೇಳಿದರು. ಈ ವೇಳೆ ಅವರು ಮುಖ್ಯ ಸರ್ಕಾರಿ ಅಭಿಯೋಜಕ ದೀಪಕ್ ಥಾಕರೆ ಅವರಿಗೆ, ಇದು ಕೇವಲ ಇದೊಂದೇ ತನಿಖೆಗೆ ಸಂಬಂಧಿಸಿದ್ದಲ್ಲ. ಎಲ್ಲ ತನಿಖಾ ಸಂಸ್ಥೆಗಳಿಗೂ, ತನಿಖೆಗಳಿಗೂ ಅನ್ವಯಿಸುವ ಮಾತು ಎಂದರು. ಇದೇ ಸಂದರ್ಭದಲ್ಲಿ ಸಿಬಿಐ ಅನ್ನು ಈ ಹಿಂದೆ ಸುಪ್ರೀಂ ಕೋರ್ಟ್ ‘ಪಂಜರದ ಗಿಣಿ’ ಎಂದದ್ದನ್ನು ಅವರು ನೆನೆದರು.
ಒಂದು ಹಂತದಲ್ಲಿ ಹಿರಿಯ ವಕೀಲ ಮುಂಡರಗಿ ಅವರು ರಿಪಬ್ಲಿಕ್ ಟಿವಿಯ ಹಿರಿಯ ಅಧಿಕಾರಿಗಳನ್ನು ಬಂದಿಸಿದ ರೀತಿಯ ಬಗ್ಗೆ ವಿವರಿಸುತ್ತಾ, ಹೇಗೆ ತನಿಖೆಯು ಸಹಜ ತನಿಖಾ ಪ್ರಕ್ರಿಯೆಯನ್ನು ಪಾಲಿಸದೆ ತಿರುವುಮುರುವಾಗಿ ಹೋಗುತ್ತಿದೆ ಎನ್ನುವ ಬಗ್ಗೆ ವಾದ ಮಂಡಿಸಿದರು. “ಮೊದಲು ಅವರನ್ನು ಬೇಕಾಗಿರುವ ಆರೋಪಿಗಳು (ವಾಂಟೆಡ್ ಅಕ್ಯೂಸ್ಡ್) ಎಂದರು, ನಂತರ ಅವರನ್ನು ಶಂಕಿತರು (ಸಸ್ಪೆಕ್ಟ್ಸ್) ಎಂದರು. ಹೀಗೆ ತಿರುವುಮುರುವಾಗಿ ಹೋಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ನ್ಯಾ. ಪಿಟಾಲೆ ಅವರು, “ಮೊದಲು ಬೇಕಾಗಿರುವ ಆರೋಪಿಗಳು, ನಂತರ ಶಂಕಿತರು, ತದನಂತರ ಮುಗ್ಧರು,” ಎಂದು ಹೇಳುವ ಮೂಲಕ ತನಿಖೆಯ ಕಾರ್ಯ ವೈಖರಿಗೆ ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಂಡರಗಿ ಅವರು 'ಅವರು ಹಾಗೆ (ಮುಗ್ಧರು ಎಂದು) ಮಾತ್ರ ಮಾಡುವುದಿಲ್ಲ," ಎಂದರು. ವಿಚಾರಣೆಯ ಮತ್ತೊಂದು ಹಂತದಲ್ಲಿ ನ್ಯಾಯಪೀಠವು ತನಿಖಾಧಿಕಾರಿಗಳ ಮಾಹಿತಿ, ಅವರ ಹಿರಿತನ, ಸೇವಾವಧಿಯ ಬಗ್ಗೆಯೂ ಕೇಳಿತು.
ವಿಚಾರಣೆಯವ ವೇಳೆ ಸಂವಿಧಾನದ 226ನೇ ವಿಧಿ ಮತ್ತು ಕ್ರಿಮಿನಲ್ ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 482ರ ಅಡಿ ನ್ಯಾಯಾಲಯದ ಅಸಾಧಾರಣ ಅಧಿಕಾರಗಳಿಗೆ ಸಂಬಂಧಿಸಿದಂತೆ ಭಜನಲಾಲ್ ಪ್ರಕರಣದಲ್ಲಿ ಉಲ್ಲೇಖಿಸಿರುವಂತೆ ಯಾವುದಾದರೂ ವಿಭಾಗಕ್ಕೆ ಪ್ರಕರಣ ಒಳಪಡುವುದೇ ಎಂಬುದನ್ನು ಪರಿಶೀಲಿಸುವುದಾಗಿ ನ್ಯಾಯಪೀಠವು ಹೇಳಿತು. ಈ ಮೂಲಕ ಯಾವುದೇ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ ಅಥವಾ ನ್ಯಾಯದಾನ ತುದಿಗಳನ್ನು ಸಂರಕ್ಷಿಸುವ ಕೆಲಸ ಮಾಡಲಾಗುವುದು ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಎಆರ್‌ಜಿ ಔಟ್ಲಿಯರ್ ಮತ್ತು ಅರ್ನಾಬ್ ಗೋಸ್ವಾಮಿ ಅವರ ವಿರುದ್ಧ ತನಿಖೆ ಮುಂದುವರಿಸಲು ಪೊಲೀಸರು ಬಯಸಿದ್ದಾರೆ ಎಂದು ಮುಖ್ಯ ಸರ್ಕಾರಿ ಅಭಿಯೋಜಕ ಠಾಕರೆ ಅವರು ಹೇಳುತ್ತಿದ್ದಂತೆ, “ಕಳೆದ ಮೂರು ತಿಂಗಳಿಂದ ವಿಚಾರಣೆ ನಡೆಯುತ್ತಿದೆ. ಅರ್ಜಿದಾರರು ಆರೋಪಿ ಎಂಬುದನ್ನು ಸೂಚಿಸುವ ಯಾವುದೇ ಅಂಶಗಳನ್ನು ಒಳಗೊಂಡ ದಾಖಲೆಯನ್ನು ನಾವು ನೋಡಿಲ್ಲ” ಎಂದು ನ್ಯಾಯಮೂರ್ತಿ ಶಿಂಧೆ ಹೇಳಿದರು. “ಅರ್ಜಿದಾರರ ಪ್ರಕರಣವು ಭಜನ್‌ಲಾಲ್ ಪ್ರಕರಣದ ಯಾವುದಾದರೂ ವಿಭಾಗದಲ್ಲಿ ಬಂದರೆ ತನಿಖೆ ಪೂರ್ಣಗೊಳ್ಳುವವರಿಗೆ ಕಾಯುವ ಅಗತ್ಯವಿಲ್ಲ” ಎಂದು ನ್ಯಾ. ಶಿಂಧೆ ಹೇಳಿದರು.
ಎಆರ್‌ಜಿ, ಅದರ ಉದ್ಯೋಗಿಗಳು ಮತ್ತು ಅರ್ನಾಬ್ ಗೋಸ್ವಾಮಿ ವಿರುದ್ಧದ ಎಫ್‌ಐಆರ್ ಮತ್ತು ಆ ಬಳಿಕ ಸಲ್ಲಿಸಲಾದ ಎರಡು ಆರೋಪಪಟ್ಟಿಗಳನ್ನು ವಜಾಗೊಳಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಮತ್ತೊಂದು ಅರ್ಜಿಯಲ್ಲಿ ತಮ್ಮ ವಿರುದ್ಧ ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಅರ್ನಾಬ್ ಹಾಗೂ ರಿಪಬ್ಲಿಕ್ ಟಿವಿ ಮನವಿ ಮಾಡಿವೆ.
ಎಆರ್‌ಜಿ ಮತ್ತು ಅರ್ನಾಬ್ ಶಂಕಿತರು ಮಾತ್ರ ಎಂದಿರುವ ಪೀಠ. “ನೀವು ಆರೋಪಿಗಳಲ್ಲ. ಪ್ರಕ್ರಿಯೆಯನ್ನು ವಜಾಗೊಳಿಸುವಂತೆ ನೀವು ಕೋರುತ್ತಿದ್ದೀರಿ. ಆದರೆ, ನೀವು ಆರೋಪಿಯೇ ಆಗದಿರುವಾಗ ಏನನ್ನು, ಯಾರ ವಿರುದ್ಧದ ಆರೋಪ ವಜಾಗೊಳಿಸಬೇಕು? ಎಂದು ನ್ಯಾ. ಪಿಟಾಲೆ ಪ್ರಶ್ನಿಸಿದ್ದಾರೆ. ಮನವಿದಾರರು ಯಶಸ್ವಿಯಾದರೆ ರಿಪಬ್ಲಿಕ್ ಟಿವಿ ಶಂಕಿತರು ಎಂದಾದರೆ ಆರೋಪಪಟ್ಟಿಯ ಅನುಚ್ಛೇದ 22 ಅನ್ನು ವಜಾಗೊಳಿಸಬಹುದು ಎಂದು ಪೀಠ ಹೇಳಿದೆ.
ಟಿಆರ್‌ಪಿ ಹಗರಣದಲ್ಲಿ ವಿಚಾರಣೆಯನ್ನು ಮುಕ್ತವಾಗಿ ಇಡುವುದು (ಓಪನ್ ಎಂಡೆಡ್) ಮುಂಬೈ ಪೊಲೀಸರ ಯೋಜನೆ ಎಂದ ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ್ ಮುಂಡರಗಿ ವಾದಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಜನರು ಸಂಸ್ಥೆಗಳ ಮೇಲೆ ವಿಶ್ವಾಸ ಹೊಂದುವುದು ಅತ್ಯಂತ ಮಹತ್ವದ್ದಾಗಿದೆ. ಈ ಕಾರಣಕ್ಕಾಗಿ ತಾರ್ಕಿಕತೆ ಮತ್ತು ವಸ್ತುನಿಷ್ಠತೆಯ ಅಗತ್ಯತೆಗಳನ್ನು ಚಾಲ್ತಿಯಲ್ಲಿಡಬೇಕು.
“ಮೊದಲಿಗೆ ಚಾನೆಲ್ ಅನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ತೋರಿಸುವ ಸಂಬಂಧ ಖಾಸಗಿ ಕೇಬಲ್ ಅಪರೇಟರ್‌ಗೆ ಹಣ ಪಾವತಿಸುವುದು ಅಪರಾಧವಾಲ್ಲ. ಯಾರನ್ನೂ ಒಲಿಸಲಾಗುವುದಿಲ್ಲ, ಅದರಲ್ಲಿ ನಂಬಿಕೆಯ ಉಲ್ಲಂಘನೆಯಾಗದು ಎಂದ ಹಿರಿಯ ವಕೀಲ ಮುಂಡರಗಿ.
ವಿಶೇಷವಾಗಿ ರಾಜ್ಯ ಸರ್ಕಾರ ತನಿಖೆ ನಡೆಸಲಾಗದು ಎಂದು ನೀವು ಹೇಳುತ್ತಿರುವಾಗ ಜಾರಿ ನಿರ್ದೇಶನಾಲಯ ತನಿಖೆ ನಡೆಸುವುದೇ? ಎಂದು ಮುಂಡರಗಿ ಅವರನ್ನು ಪ್ರಶ್ನಿಸಿದ ಪೀಠ.