[ಟಿಆರ್‌ಪಿ ಹಗರಣ] ರಿಪಬ್ಲಿಕ್ ಟಿವಿ ಮೇಲೆ ತೂಗುಕತ್ತಿ ಏಕೆ? ಪೊಲೀಸರಿಗೆ ಬಾಂಬೆ ಹೈಕೋರ್ಟ್ ಪ್ರಶ್ನೆ
ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ವಿರುದ್ಧ ಮುಂಬೈ ಪೊಲೀಸರು ಸುಮಾರು ಮೂರು ತಿಂಗಳ ತನಿಖೆಯ ಹೊರತಾಗಿಯೂ ಯಾವುದೇ ಸಾಕ್ಷ್ಯಗಳನ್ನು ಪತ್ತೆ ಮಾಡಿಲ್ಲ ಎಂದು ಬಾಂಬೆ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ಟಿಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಮತ್ತು ಅದರ ನೌಕರರ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಶ್ನಿಸಿ ಎಆರ್‌ಜಿ ಔಟ್ಲಯರ್ ಮೀಡಿಯಾ ಕಂಪೆನಿ (ರಿಪಬ್ಲಿಕ್ ಟಿವಿ ಒಡೆತನ ಹೊಂದಿರುವ ಕಂಪೆನಿ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಮುಂಬೈ ಪೊಲೀಸರು ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದರೂ, ರಿಪಬ್ಲಿಕ್ ಟಿವಿಯ ವಿರುದ್ಧ ಯಾವುದೇ ಸಾಕ್ಷ್ಯಗಳು ಇರುವಂತೆ ತೋರುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.
“ಈ ಎಫ್‌ಐಆರ್ 2020ರ ಅಕ್ಟೋಬರಿನದು. ನಾವೀಗ 2021ರ ಮಾರ್ಚ್‌ನಲ್ಲಿದ್ದೇವೆ. ʼಕಿಚಡಿ ಇನ್ನೂ ಬೇಯುತ್ತಿದೆʼ ಎನ್ನುವಂತಹ ಪ್ರಕರಣಗಳನ್ನು ನಾವು ಕಂಡಿದ್ದೇವೆ. ಅವರ (ರಿಪಬ್ಲಿಕ್) ಮೇಲೆ ತೂಗುಗತ್ತಿ ಏಕೆ ನೇತಾಡಬೇಕು? ನೀವು ಕಳೆದ 3 ತಿಂಗಳುಗಳಿಂದ ತನಿಖೆ ನಡೆಸುತ್ತಿದ್ದೀರಿ ಮತ್ತು ಅವರ ವಿರುದ್ಧ ನಿಮ್ಮ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ತಮ್ಮ ವಿರುದ್ಧ ಏನಾದರೂ ಕ್ರಮ ಕೈಗೊಳ್ಳಬಹುದು ಎಂಬ ಭೀತಿಯಲ್ಲಿ ಸದಾ ಇರುವುದಾಗಿ ಅವರು ಹೇಳಿದ್ದು, (ವಾಹಿನಿ) ನೌಕರರ ವಿರುದ್ಧ ಈ ಹಿಂದೆ ಕೈಗೊಂಡ ಕ್ರಮಗಳು ಇದಕ್ಕೆ ಕಾರಣ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅಥವಾ ರಿಪಬ್ಲಿಕ್ ಟಿವಿ ಪತ್ರಕರ್ತರನ್ನೂ ಒಳಗೊಂಡಂತೆ ಅರ್ಜಿದಾರರನ್ನು ಪ್ರಕರಣದಲ್ಲಿ ಇನ್ನೂ ಆರೋಪಿಗಳನ್ನಾಗಿ ಏಕೆ ಹೆಸರಿಸಿಲ್ಲ ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿದೆ.
ಮುಂಬೈ ಪೊಲೀಸರು ಉದ್ದೇಶಪೂರ್ವಕವಾಗಿ ಗೋಸ್ವಾಮಿ ಮತ್ತು ಇತರರನ್ನು ಇನ್ನೂ ಆರೋಪಿಗಳೆಂದು ಹೆಸರಿಸಿಲ್ಲ. ಏಕೆಂದರೆ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕನ್ನು (ಲೋಕಸ್) ಇಲ್ಲದಂತೆ ಮಾಡುವುದು ಪೊಲೀಸರ ಉದ್ದೇಶ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಸೂಚನೆಗಳನ್ನು ಪಡೆಯಲು ಸಮಯ ಕೋರಿದಾಗ, ವಿಚಾರಣೆ ಮುಂದೂಡಿದ ನ್ಯಾಯಾಲಯ ತ್ವರಿತ ಪ್ರತಿಕ್ರಿಯೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತು. ಎಆರ್‌ಜಿ ಔಟ್ಲಯರ್ ಪರವಾಗಿ ಹಿರಿಯ ನ್ಯಾಯವಾದಿ ಅಶೋಕ್ ಮುಂಡರಗಿ ವಾದ ಮಂಡಿಸಿದರು.