Partho Dasgupta, Arnab Goswami
Partho Dasgupta, Arnab Goswami 
ಸುದ್ದಿಗಳು

ಟಿಆರ್‌ಪಿ ತಿರುಚಲು ಬಾರ್ಕ್‌ ಮಾಜಿ ಅಧಿಕಾರಿಗೆ ಅರ್ನಾಬ್‌ರಿಂದ 'ಲಕ್ಷಾಂತರ ಹಣ' ಲಂಚ ಪಾವತಿ: ಮುಂಬೈ ಪೊಲೀಸ್‌

Bar & Bench

ಆಂಗ್ಲ ಭಾಷೆಯ ರಿಪಬ್ಲಿಕ್‌ ಟಿವಿ ಮತ್ತು ಹಿಂದಿ ಭಾಷೆಯಲ್ಲಿ ಪ್ರಸಾರವಾಗುವ ರಿಪಬ್ಲಿಕ್‌ ಭಾರತ್ ಸುದ್ದಿ ವಾಹಿನಿಗಳ ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ (ಟಿಆರ್‌ಪಿ) ಹೆಚ್ಚಿಸುವ ಉದ್ದೇಶದಿಂದ ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರೀಸರ್ಚ್‌ ಕೌನ್ಸಿಲ್‌ನ (ಬಾರ್ಕ್‌) ಮಾಜಿ ಹಿರಿಯ ಅಧಿಕಾರಿ ಪಾರ್ಥೊ ದಾಸಗುಪ್ತ ಅವರಿಗೆ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಲಕ್ಷಗಟ್ಟಲೆ ಹಣವನ್ನು ಲಂಚದ ರೂಪದಲ್ಲಿ ಪಾವತಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳಿವೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ನಕಲಿ ಟಿಆರ್‌ಪಿ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ 24ರಂದು ಬಂಧಿಸಲ್ಪಟ್ಟಿರುವ ದಾಸಗುಪ್ತ ಅವರ ಬಂಧನ ವಿಸ್ತರಣೆ ಕೋರಿರುವ ಮನವಿಯಲ್ಲಿ ಪೊಲೀಸರು ಮೇಲಿನ ಆರೋಪ ಮಾಡಿದ್ದಾರೆ. ಟಿಆರ್‌ಪಿ ತಿರುಚಲು ಸಹಕರಿಸಿದ್ದಕ್ಕೆ ಪ್ರತಿಯಾಗಿ ದಾಸಗುಪ್ತ ಅವರಿಗೆ ಗೋಸ್ವಾಮಿ ಹಣ ಪಾವತಿಸಿರುವುದಕ್ಕೆ ತನಿಖೆಯ ಸಂದರ್ಭದಲ್ಲಿ ಸಾಕ್ಷ್ಯ ದೊರೆತಿದೆ ಎಂದು ಪೊಲೀಸರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಅರ್ನಾಬ್‌ ಗೋಸ್ವಾಮಿ ಅವರಿಂದ ಸ್ವೀಕರಿಸಿದ ಹಣದಿಂದ ಖರೀದಿಸಲಾದ ಬಂಗಾರ ಮತ್ತು ಬೆಲೆಬಾಳುವ ವಸ್ತುಗಳು ದಾಸಗುಪ್ತ ಅವರ ಮನೆಯಲ್ಲಿ ದೊರೆತಿವೆ ಎಂದೂ ಪೊಲೀಸರು ಆರೋಪಿಸಿದ್ದಾರೆ.

ಟಿಆರ್‌ಪಿ ಅರಿಯಲು ಬಾರೋಮೀಟರ್‌ ಅಳವಡಿಸುವ ಹೊಣೆ ಹೊತ್ತಿರುವ ಸಂಸ್ಥೆ ಬಾರ್ಕ್.‌ ದಾಸಗುಪ್ತ ಅವರು ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಕಾನೂನುಬಾಹಿರ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ದೂರಿದ್ದಾರೆ. ಹೆಚ್ಚು ಪ್ರಸಾರ ಹೊಂದಿದ್ದ ಟೈಮ್ಸ್‌ ನೌ ವಾಹಿನಿಯನ್ನು ಹಿಂದಿಕ್ಕಿ ರಿಪಬ್ಲಿಕ್‌ ಚಾನೆಲ್‌ಗಳು ಹೆಚ್ಚು ವೀಕ್ಷಕರನ್ನು ಹೊಂದಿವೆ ಎಂದು ಸಾರಲು ದಾಸಗುಪ್ತ ಅವರು ಟಿಆರ್‌ಪಿ ತಿರುಚಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

ತಮ್ಮ ಸ್ಥಾನ ಮತ್ತು ಜ್ಞಾನವನ್ನು ಬಳಸಿ ದಾಸಗುಪ್ತ ಅವರು ಕೆಲವು ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸಿದ್ದು, ಕೆಲವು ಚಾನೆಲ್‌ಗಳ ಟಿಆರ್‌ಪಿಯನ್ನು ಕಡಿತಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಹಣಕಾಸು ವರ್ಗಾವಣೆ ನಡೆದಿರುವ ಬಗ್ಗೆ ಮತ್ತು ಅದರ ಬಳಕೆಯ ಕುರಿತು ಹೆಚ್ಚಿನ ತನಿಖೆಗಾಗಿ ಕಾಲಾವಕಾಶ ಬೇಕಾಗಿರುವುದರಿಂದ ಆರೋಪಿಯನ್ನು ಮತ್ತಷ್ಟು ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಮುಂಬೈನ ಎಸ್ಪ್ಲೆನೇಡ್‌ನಲ್ಲಿನ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ಮೊದಲಿಗೆ ಡಿಸೆಂಬರ್‌ 28ರ ವರೆಗೆ ದಾಸಗುಪ್ತ ಅವರನ್ನು ಪೊಲೀಸರ ವಶಕ್ಕೆ ನೀಡಿದ್ದರು. ಬಳಿಕ ಅದನ್ನು ಡಿಸೆಂಬರ್‌ 30ಕ್ಕೆ ವಿಸ್ತರಿಸಲಾಗಿದೆ. ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‌ 8ರಿಂದ ಹಲವು ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.