ಕಾನೂನಿನ ಎದುರು ಎಲ್ಲರೂ ಸಮಾನರು ಎನ್ನವ ಸಂವಿಧಾನದ 14ನೇ ವಿಧಿ ಭಾರತದ ಪ್ರಜೆಗಳಿಗೆ ಮಾತ್ರವಲ್ಲದೆ ಪ್ರಜೆಗಳಲ್ಲದವರಿಗೂ ಅನ್ವಯವಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಗೋವಾ ಪೀಠ ಇತ್ತೀಚೆಗೆ ತಿಳಿಸಿದೆ [ಓಲ್ಗಾ ರೋಸ್ನಿನಾ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ನಡುವಣ ಪ್ರಕರಣ].
ವೀಸಾ ಷರತ್ತು ಉಲ್ಲಂಘನೆ ಆರೋಪದ ಬಗ್ಗೆ ವಿದೇಶಿ ಪ್ರಜೆಯೊಬ್ಬರಿಂದ ಸ್ಪಷ್ಟೀಕರಣ ಪಡೆಯದ ಕಾರಣ ಅವರನ್ನು ಗಡೀಪಾರು ಮಾಡದಂತೆ ನ್ಯಾಯಮೂರ್ತಿಗಳಾದ ಮಹೇಶ್ ಸೋನಕ್ ಮತ್ತು ಭರತ್ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಆದೇಶಿಸಿತು.
"ಕನಿಷ್ಠ ಪಕ್ಷ ಅರ್ಜಿದಾರರಿಂದ ಸ್ಪಷ್ಟೀಕರಣ ಕೇಳಬಹುದಿತ್ತು. ನಂತರ ಅದನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಇದನ್ನು ಮಾಡಿಲ್ಲ. ಆದ್ದರಿಂದ, ಈ ಸಣ್ಣ ಕಾರಣಕ್ಕಾಗಿ, ನಾವು ವ್ಯಾಜ್ಯದಲ್ಲಿರುವ ಗಡಿಪಾರು ಆದೇಶ ರದ್ದುಗೊಳಿಸುತ್ತಿದ್ದೇವೆ," ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಆಗಸ್ಟ್ 7ರ ಆದೇಶದಲ್ಲಿ, ವಿದೇಶಿ ಪ್ರಜೆ ಯಾವುದೇ ವೀಸಾ ಷರತ್ತು ಉಲ್ಲಂಘಿಸಿಲ್ಲ ಎಂದು ಹೇಳಿರುವುದರಿಂದ ಅಧಿಕಾರಿಗಳು ಸ್ವಾಭಾವಿಕ ನ್ಯಾಯ ಮತ್ತು ನ್ಯಾಯೋಚಿತ ತತ್ವಗಳನ್ನು ಪಾಲಿಸಬೇಕು ಎಂದು ಪೀಠ ಬುದ್ಧಿವಾದ ಹೇಳಿತು.
ಗಡೀಪಾರು ವಿಚಾರದಲ್ಲಿ ಕೇಂದ್ರ ಸರ್ಕಾರ ವ್ಯಾಪಕ ಅಧಿಕಾರ ಹೊಂದಿದ್ದರೂ ಅಂತಹ ಅಧಿಕಾರಗಳನ್ನು ನ್ಯಾಯಯುತವಾಗಿ ಮತ್ತು ನಿರಂಕುಶತೆಯ ಸುಳಿವು ಇಲ್ಲದಂತೆ ಚಲಾಯಿಸಬೇಕು ಎಂದು ಆಗಸ್ಟ್ 7ರಂದು ನೀಡಿದ ಆದೇಶದಲ್ಲಿ ಪೀಠ ತಿಳಿಸಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಪ್ರಜೆಯ ವಿರುದ್ಧ ಮೇ 17, 2023ರಂದು ಹೊರಡಿಸಿದ್ದ ಗಡೀಪಾರು ಆದೇಶವನ್ನು ಅದು ರದ್ದುಗೊಳಿಸಿದೆ.
ವಿದೇಶಿ ಪ್ರಜೆಗೆ ʼಉದ್ಯೋಗ ವೀಸಾʼ ನೀಡಲಾಗಿತ್ತು. ಆದರೆ ವ್ಯವಹಾರದಲ್ಲಿ ತೊಡಗಿದ ಆಕೆವೀಸಾ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಅಧಿಕಾರಿಗಳ ವಾದವಾಗಿತ್ತು.
ವಿದೇಶಿ ಪ್ರಜೆ ತನ್ನ ಕಂಪನಿಗೆ ರಾಜೀನಾಮೆ ನೀಡಿದ್ದರಿಂದ ವೀಸಾದ ನಿಯಮಗಳು ಮತ್ತು ಷರತ್ತುಗಳ ಪಾಲನೆ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆಕೆ ಡಿಪೆಂಡೆನ್ಸಿ (ಅವಲಂಬಿತ) ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಮೇ ತಿಂಗಳಲ್ಲಿ ಆಕೆಯ ವಿರುದ್ಧ ಗಡೀಪಾರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಆಕೆ ಸಲ್ಲಿಸಿದ್ದ ಮನವಿಯನ್ನು ಅಧಿಕಾರಿಗಳು ವಜಾಗೊಳಿಸಿದ್ದರು ಎಂದು ಪೀಠ ಉಲ್ಲೇಖಿಸಿದೆ.
ಈ ಹಿನ್ನೆಲೆಯಲ್ಲಿ ಡಿಪೆಂಡೆನ್ಸಿ ವೀಸಾಕ್ಕಾಗಿ ಆಕೆ ಸಲ್ಲಿಸಿರುವ ಮನವಿಯನ್ನು ಮರುಪರಿಶೀಲಿಸಬೇಕು ಮತ್ತು ಕನಿಷ್ಠ ಎರಡು ತಿಂಗಳವರೆಗೆ ಆಕೆಯನ್ನು ಗಡೀಪಾರು ಮಾಡಬಾರದು. ಅಷ್ಟರೊಳಗೆ ಆಕೆಯ ಅರ್ಜಿಯನ್ನು ಇತ್ಯರ್ಥಗೊಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]