North-East India and Supreme Court
North-East India and Supreme Court 
ಸುದ್ದಿಗಳು

ವಿಧಿ 370 ರದ್ದತಿ: ಈಶಾನ್ಯ ರಾಜ್ಯಗಳ ವಿಶೇಷ ನಿಯಮಾವಳಿ ಅಬಾಧಿತ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

Bar & Bench

ದೇಶದ ಈಶಾನ್ಯ ರಾಜ್ಯಗಳಿಗೆ ಅನ್ವಯವಾಗುವ ಸಂವಿಧಾನದ ವಿಶೇಷ ನಿಯಮಾವಳಿಗಳನ್ನು ಬದಲಿಸುವ ಯಾವುದೇ ಉದ್ದೇಶ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ವಿಧಿ 370 ರದ್ದತಿ ಪ್ರಶ್ನಿಸುವ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ (ಎಸ್‌ ಜಿ) ತುಷಾರ್ ಮೆಹ್ತಾ ಅವರು ತಮ್ಮ ವಾದದ ವೇಳೆ ಈ ಅಂಶವನ್ನು ಮಂಡಿಸಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಎಸ್‌ಜಿ ಮೆಹ್ತಾ ಅವರು ಜಮ್ಮು ಕಾಶ್ಮೀರಕ್ಕೆ ಈ ಹಿಂದೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕ್ರಮವನ್ನು ಸಮರ್ಥಿಸಿದರು. ವಿಧಿ 370 ತಾತ್ಕಾಲಿಕ ನಿಯಮಾವಳಿ ಎಂದು ಪುನರುಚ್ಚರಿಸಿದರು.

"ವಿಧಿ 370 ರೀತಿಯ ತಾತ್ಕಾಲಿಕ ನಿಯಮಾವಳಿ ಮತ್ತು ಈಶಾನ್ಯಕ್ಕೆ ಅನ್ವಯಿಸುವ ವಿಶೇಷ ನಿಯಮಾವಳಿಗಳ ನಡುವಿನ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ವಿಶೇಷ ನಿಯಮಾವಳಿಗಳನ್ನು ಬದಲಿಸುವ ಉದ್ದೇಶ ಕೇಂದ್ರಕ್ಕಿಲ್ಲ ಇದು ಗಂಭೀರ ಪರಿಣಾಮ ಉಂಟುಮಾಡುತ್ತದೆ. (ಈ ಸಂಬಂಧ) ಯಾವುದೇ ಆತಂಕ ಇಲ್ಲ ಆತಂಕವನ್ನು ಸೃಷ್ಟಿಸುವ ಉದ್ದೇಶವೂ (ಕೇಂದ್ರಕ್ಕೆ) ಇಲ್ಲ” ಎಂದು ಅವರು ನುಡಿದರು.

ವಾದಕಾಲೀನ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಮನೀಶ್ ತಿವಾರಿ ಅವರ ವಾದಗಳಿಗೆ ಪ್ರತಿಕ್ರಿಯೆಯಾಗಿ ಮೆಹ್ತಾ ಅವರು ಈ ವಿಚಾರಗಳನ್ನು ತಿಳಿಸಿದರು.

ವಿಧಿ 370ನ್ನು ರದ್ದುಗೊಳಿಸಿರುವುದರಿಂದ ಈಶಾನ್ಯ ರಾಜ್ಯಗಳಿಗೆ ನೀಡಲಾಗುವ ವಿಶೇಷ ಸ್ಥಾನಮಾನದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮೆಹ್ತಾ ಅವರು ಭರವಸೆ ನೀಡುವ ಮುನ್ನ ತಿವಾರಿ ಅವರು ಈಶಾನ್ಯ ರಾಜ್ಯಗಳ ಭವಿಷ್ಯದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ನ್ಯಾಯಾಲಯಕ್ಕೆ ವಿವರಿಸುವುದಾಗಿ ಸುಳಿವು ನೀಡಿದ್ದರು.

ವಿಧಿ 370ರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠದ ನೇತೃತ್ವ ವಹಿಸಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು,"ನಾವೇಕೆ ಆತಂಕ ಪಡಬೇಕು..? ಕೇಂದ್ರಕ್ಕೆ (ಅದಕ್ಕೆ) ಅಂತಹ ಉದ್ದೇಶವಿಲ್ಲ ಎಂದು ಹೇಳಿರುವಾಗ ನಾವು ಕಳವಳಕ್ಕೀಡಾಗುವುದಾದರೂ ಏಕೆ? ಕೇಂದ್ರ ಸರ್ಕಾರದ ಹೇಳಿಕೆಯಿಂದ ಆತಂಕಗಳು ಇಲ್ಲವಾಗುತ್ತವೆ” ಎಂದರು. ಬಳಿಕ ನ್ಯಾಯಾಲಯ ತಿವಾರಿ ಅವರು ವಾದ ಮಂಡಿಸಿದ ವಾದಕಾಲೀನ ಅರ್ಜಿಯನ್ನು ವಿಲೇವಾರಿ ಮಾಡಿತು. ವಿಧಿ 370 ಪ್ರಕರಣದ ವಿಚಾರಣೆ ಇಂದು ಮುಂದುವರೆದಿದೆ.