ಸಂವಿಧಾನ ಸಭೆಯಲ್ಲಿ ನಡೆದಿದ್ದ ಪ್ರತಿಯೊಂದು ಚರ್ಚೆಯ ಭಾಷಣದ ಭಾಗವನ್ನೂ ರಾಷ್ಟ್ರೀಯ ಬದ್ಧತೆಯ ವಿಷಯವಾಗಿ ಸ್ವೀಕರಿಸಿದರೆ ಅದು ಸಂವಿಧಾನಾತ್ಮಕ ವ್ಯಾಖ್ಯಾನಕ್ಕೆ ಅಡ್ಡಿಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ 370ನೇ ವಿಧಿ ರದ್ದತಿ ಪ್ರಕರಣದ ವಿಚಾರಣೆ ವೇಳೆ ಹೇಳಿದೆ [ಸಂವಿಧಾನದ 370 ನೇ ವಿಧಿಗೆ ಸಂಬಂಧಿಸಿದ ಪ್ರಕರಣ ].
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯಕಾಂತ್ ಅವರಿದ್ದ ಸಾಂವಿಧಾನಿಕ ಪೀಠ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದಿನೇಶ್ ದ್ವಿವೇದಿ ಅವರ ವಾದವನ್ನು ಆಲಿಸಿತು.
ವಿಚಾರಣೆಯ ಸಂದರ್ಭದಲ್ಲಿ ಸಿಜೆಐ "ಸಂಸತ್ ಸದಸ್ಯರೊಬ್ಬರು ಮಾಡಿದ ಭಾಷಣವು ಜಮ್ಮು ಕಾಶ್ಮೀರ ರಾಜ್ಯದೆಡೆಗಿನ ದೇಶದ ಬದ್ಧತೆಯಾಗಿ ಪರಿಣಾಮ ಬೀರುತ್ತದೆ ಎಂದು ನಾವು ಹೇಳಬಹುದೇ? ಹೀಗಾದರೆ ಸಾಂವಿಧಾನಿಕ ನಿಬಂಧನೆಗಳನ್ನು ಅರ್ಥೈಸುವುದರ ಮೇಲೂ ಪರಿಣಾಮ ಉಂಟಾಗಲಿದೆ” ಎಂದರು.
ಆಗ ನ್ಯಾಯಮೂರ್ತಿ ಖನ್ನಾ "ನಾವು ಚರ್ಚೆಯ ಆಯ್ದ ಭಾಗಗಳನ್ನು ಓದಿ ಈ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ನೀವು ಸಂಪೂರ್ಣ ಸಂದರ್ಭವನ್ನು ಓದಬೇಕು. ಯಾವುದೇ ಚರ್ಚೆಯಲ್ಲಿ, ಹೇಳಿಕೆಗಳಿರುತ್ತವೆ, ಪ್ರಶ್ನೋತ್ತರಗಳಿರುತ್ತವೆ” ಎಂದರು.
ಸಂವಿಧಾನದ 370 ನೇ ವಿಧಿಯು ತನ್ನನ್ನು ತಾನೇ ವಿಸರ್ಜಿಸಿರುವುದನ್ನು ಸಂವಿಧಾನ ಸಭೆಯ ಚರ್ಚೆಗಳು ತೋರಿಸುತ್ತವೆ ಎಂಬುದು ದ್ವಿವೇದಿಯವರ ವಾದವಾಗಿದೆಯೇ ಎಂದು ನ್ಯಾಯಮೂರ್ತಿ ಕೌಲ್ ಕೇಳಿದರು. ಇದು ಸಂವಿಧಾನ ರಚನಾಕಾರರ ಉದ್ದೇಶವನ್ನು ತೋರಿಸುತ್ತದೆ ಎಂದು ದ್ವಿವೇದಿ ಪ್ರತಿಕ್ರಿಯಿಸಿದರು.
ಈ ಹಂತದಲ್ಲಿ ಸಿಜೆಐ “ಇದರ ಒಟ್ಟು ಪರಿಣಾಮ, 1957 ರ ನಂತರ ಜಮ್ಮು ಕಾಶ್ಮೀರ ರಾಜ್ಯಕ್ಕೆ ಭಾರತದ ಸಂವಿಧಾನ ಅನ್ವಯಿಸುವುದನ್ನು ತಡೆ ಹಿಡಿಯಲಾಗಿದೆ ಎಂದಾಗುತ್ತದೆ - ಇದಕ್ಕೆ ಅನುಮತಿ ನೀಡಲು ಸಾಧ್ಯವೇ? ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದರೆ, ಖಂಡಿತವಾಗಿಯೂ ದೇಶದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರ ರೂಪಿಸಿದ (ಭಾರತದ) ನಿಬಂಧನೆಗಳು ಇರಬೇಕು. ನಿಮ್ಮ ವಾದವನ್ನು ಪರಿಗಣಿಸಿದರೆ ಜಮ್ಮು ಕಾಶ್ಮೀರಕ್ಕೆ ಅನ್ವಯಿಸುವುದನ್ನು ತಡೆಯುವ ಯಾವುದೇ ನಿಯಮಾವಳಿ ಸಂವಿಧಾನದಲ್ಲಿ ಇಲ್ಲ ಎಂದರು.
ಮಂಗಳವಾರ ಪ್ರಕರಣದ ಅಂತಿಮ ವಿಚಾರಣೆಯ ಎಂಟನೇ ದಿನವಾಗಿತ್ತು. ಬುಧವಾರ ಮಧ್ಯಾಹ್ನದೊಳಗೆ ತಮ್ಮ ವಾದ ಪೂರ್ಣಗೊಳಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ತಿಳಿಸಿದೆ.