BBMP and Karnataka HC
BBMP and Karnataka HC 
ಸುದ್ದಿಗಳು

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಕ್ಷಣ ಗುಂಡಿ ಮುಚ್ಚಲು ಹೈಕೋರ್ಟ್‌ ಆದೇಶ; ಪ್ರಗತಿ ವರದಿ ಸಲ್ಲಿಸಲು ನಿರ್ದೇಶನ

Siddesh M S

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಏಪ್ರಿಲ್‌ 20ರಂದು ಹೊರಡಿಸಿರುವ ಕಾರ್ಯಾದೇಶದ ಪ್ರಕಾರ ಅಮೆರಿಕನ್‌ ರೋಡ್‌ ಟೆಕ್ನಾಲಜಿ ಮತ್ತು ಸಲ್ಯೂಷನ್ಸ್‌ (ಎಆರ್‌ಟಿಎಸ್‌) ತಕ್ಷಣ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಆರಂಭಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ. ಕಳೆದ ವಿಚಾರಣೆಯಲ್ಲಿ 36 ಗಂಟೆಗಳ ಒಳಗೆ ರಸ್ತೆ ಗುಂಡಿ ಮುಚ್ಚಲು ಎಆರ್‌ಟಿಎಸ್‌ಗೆ ಕಾರ್ಯಾದೇಶ ನೀಡಬೇಕು ಎಂದು ಪೀಠವು ಬಿಬಿಎಂಪಿಗೆ ಗಡುವು ವಿಧಿಸಿತ್ತು.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಲೋಕೋಪಯೋಗಿ ಇಲಾಖೆಯು ರಸ್ತೆ ಗುಂಡಿ ಮುಚ್ಚುವ ಪೈಥಾನ್‌ ಯಂತ್ರಕ್ಕೆ ಪ್ರತಿ ಗಂಟೆಗೆ 1,249 ರೂಪಾಯಿ ನೀಡಲಾಗುವುದು ಎಂದು ಷೆಡ್ಯೂಲ್‌ ದರ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಗುಂಡಿ ಮುಚ್ಚುವ ಪೈಥಾನ್‌ ಯಂತ್ರಕ್ಕೆ ಪ್ರತಿ ಗಂಟೆಗೆ ಎಷ್ಟು ಹಣ ಪಾವತಿಸಬೇಕು ಎಂಬುದನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಪುನರ್‌ ಪರಿಗಣಿಸಬೇಕು. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ಧಾರ ಹಾಗೂ ರಸ್ತೆ ಗುಂಡಿ ಮುಚ್ಚಿರುವುದಕ್ಕೆ ಸಂಬಂಧಿಸಿದ ಪ್ರಗತಿ ವರದಿಯನ್ನು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಕೆಲಸ ಆರಂಭಿಸಲು ಕಂಪೆನಿಯು ಮುಂಗಡ ಹಣಕ್ಕೆ ಬೇಡಿಕೆ ಸಲ್ಲಿಸಬಹುದಾಗಿದ್ದು, ಇದನ್ನು ಬಿಬಿಎಂಪಿ ಪರಿಗಣಿಸಬೇಕು” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ಬೆಂಗಳೂರಿನ 182 ಕಿ ಮೀ ಪ್ರಮುಖ ರಸ್ತೆಗಳು ಹಾಗೂ ಪಶ್ಚಿಮ ವಲಯದ ಆಯ್ದ ವಾರ್ಡ್‌ಗಳಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಬುಧವಾರ ಅಮೆರಿಕನ್‌ ರೋಡ್‌ ಟೆಕ್ನಾಲಜಿ ಮತ್ತು ಸಲ್ಯೂಷನ್ಸ್‌ಗೆ (ಎಆರ್‌ಟಿಎಸ್‌) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ತಾತ್ಕಾಲಿಕ ಕಾರ್ಯಾದೇಶ ಮತ್ತು ಒಪ್ಪಿಗೆ ಪತ್ರವನ್ನು ನೀಡಿದೆ. ರಸ್ತೆ ಗುಂಡಿ ಮುಚ್ಚಲು ಪೈಥಾನ್‌ ಯಂತ್ರಕ್ಕೆ ಪ್ರತಿ ಗಂಟೆಗೆ 1,249 ರೂಪಾಯಿ ನಿಗದಿಪಡಿಸಿರುವುದು ತುರ್ತು ಸಂದರ್ಭಕ್ಕೆ ಮಾತ್ರ ಸೀಮಿತವಾಗಿದ್ದು, ಅದು ಷೆಡ್ಯೂಲ್‌ ದರವಲ್ಲ” ಎಂದರು.

ಅಮೆರಿಕನ್‌ ರೋಡ್‌ ಟೆಕ್ನಾಲಜಿ ಮತ್ತು ಸಲ್ಯೂಷನ್ಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ರಸ್ತೆ ಗುಂಡಿ ಮುಚ್ಚಲು ಪೈಥಾನ್‌ ಯಂತ್ರಕ್ಕೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ದರವನ್ನು ನೀಡಲು ಉಲ್ಲೇಖಿಸಲಾಗಿದೆ. ಗುಂಡಿ ಮುಚ್ಚಲು ಲೋಕೋಪಯೋಗಿ ಇಲಾಖೆ ನಿಗದಿಪಡಿಸಿರುವ ದರ ಪಡೆಯಲು ಅಮೆರಿಕನ್‌ ರೋಡ್‌ ಟೆಕ್ನಾಲಜಿ ಮತ್ತು ಸಲ್ಯೂಷನ್ಸ್‌ ಅರ್ಹವಾಗಿದೆ. ಕರ್ನಾಟಕ ಸರ್ಕಾರದ ಕಾಮನ್‌ ಷೆಡ್ಯೂಲ್‌ ಆಫ್‌ ರೇಟ್ಸ್‌ ಟೆಕ್ನಿಕಲ್‌ ವರ್ಕಿಂಗ್ ಗ್ರೂಪ್‌, ವಾಲ್ಯೂಮ್‌ 1ರಲ್ಲಿ ರಸ್ತೆ ಗುಂಡಿ ಮುಚ್ಚುವ ಯಂತ್ರದ ದರಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ರಸ್ತೆ ಗುಂಡಿ ಮುಚ್ಚುವ ಯಂತ್ರಕ್ಕೆ ಪ್ರತಿ ಗಂಟೆಗೆ 1,249 ರೂಪಾಯಿ ನಿಗದಿಪಡಿಸಲಾಗಿದೆ. ಈ ದರದ ಪ್ರಕಾರ ಗುಂಡಿ ಮುಚ್ಚುವ ಕೆಲಸ ಆರಂಭಿಸಲು ಸಿದ್ಧವಾಗಿದ್ದೇವೆ” ಎಂದು ವಿವರಿಸಿದರು.

ಇದನ್ನು ದಾಖಲಿಸಿಕೊಂಡ ಪೀಠವು ದರ ಮರು ಪರಿಶೀಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಆದೇಶಿಸಿದ್ದು, ತಕ್ಷಣ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಲು ಎಆರ್‌ಟಿಎಸ್‌ಗೆ ನಿರ್ದೇಶಿಸಿ, ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು.