ರಸ್ತೆ ಗುಂಡಿ ಮುಚ್ಚಲು ಎಆರ್‌ಟಿಎಸ್‌ಗೆ 36 ಗಂಟೆಯಲ್ಲಿ ಕಾರ್ಯಾದೇಶ ನೀಡಿ: ಬಿಬಿಎಂಪಿಗೆ ಹೈಕೋರ್ಟ್‌ ಗಡುವು

ಸಂಚಾರ ದಟ್ಟಣೆ, ಮೂಲಸೌಕರ್ಯ, ಮಳೆಯನ್ನು ವರ್ಷಗಟ್ಟಲೇ ನಿಂದಿಸಿದಿರಿ, ಆಮೇಲೆ ರಸ್ತೆ ಅಗೆಯುವ ಏಜೆನ್ಸಿಗಳತ್ತ ಬೆರಳು ಮಾಡಿದಿರಿ. ಈಗ ಎಆರ್‌ಟಿಎಸ್‌ನತ್ತ ಬೆರಳು ಮಾಡುತ್ತಿದ್ದೀರಿ ಎಂದು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡ ಪೀಠ.
BBMP and Karnataka HC
BBMP and Karnataka HC
Published on

ಬೆಂಗಳೂರಿನ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ತುರ್ತಾಗಿ ಆರಂಭವಾಗುವುದಕ್ಕೆ ಸಂಬಂಧಿಸಿದಂತೆ ಅಮೆರಿಕನ್‌ ರೋಡ್‌ ಟೆಕ್ನಾಲಜಿ ಸಲ್ಯೂಷನ್‌ಗೆ (ಎಆರ್‌ಟಿಎಸ್‌) ಕಾರ್ಯಾದೇಶ ಹಾಗೂ ಸಂಬಂಧಿತ ದಾಖಲೆಗಳನ್ನು 36 ಗಂಟೆಗಳ ಒಳಗೆ ನೀಡಬೇಕು. ಇದನ್ನು ನಾಡಿದ್ದು (ಗುರುವಾರ) ನಡೆಯುವ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶ ಮಾಡಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಎಆರ್‌ಟಿಎಸ್‌ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ನಮಗೆ ಇನ್ನೂ ಕಾರ್ಯಾದೇಶ ನೀಡಲಾಗಿಲ್ಲ. ಹೀಗಾಗಿ, ಕೆಲಸ ಆರಂಭಿಸಲಾಗಿಲ್ಲ” ಎಂದು ತಿಳಿಸಲು ಮುಂದಾದರು.

ಮಧ್ಯಪ್ರವೇಶಿಸಿದ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ಕೆಲವು ವಿಚಾರಗಳಲ್ಲಿ ಲೆಕ್ಕಾಚಾರ ನಡೆಯುತ್ತಿದ್ದು, ಎಆರ್‌ಟಿಎಸ್‌ ಎರಡು ದಿನ ಕಾಲಾವಕಾಶ ನೀಡುವಂತೆ ಬಿಬಿಎಂಪಿಗೆ ಕೋರಿದೆ ಎಂದು ನನಗೆ ತಿಳಿಸಲಾಗಿದೆ. ಇದರ ಹೊರತಾಗಿ ನಾವು ರಸ್ತೆಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಕಾರ್ಯಾದೇಶ ನೀಡಲು ಸಿದ್ಧವಾಗಿದ್ದೇವೆ. ಎರಡು ದಿನಗಳಲ್ಲಿ ಕಾರ್ಯಾದೇಶ ನೀಡುತ್ತೇವೆ. ನಿನ್ನೆಯವರೆಗೂ ಎಆರ್‌ಟಿಎಸ್‌ ಟೆಂಡರ್‌ ಬೇಕು ಇನ್ನುತ್ತಿದ್ದರು. ಈಗ ಬೇರೆ ರೀತಿ ಮಾತನಾಡುತ್ತಿದ್ದಾರೆ. ನಾಡಿದ್ದು ಪ್ರಕರಣದ ವಿಚಾರಣೆ ನಡೆಸಿ, ನಾನು ಕಾರ್ಯಾದೇಶ ನೀಡಿರುವುದನ್ನು ಪೀಠಕ್ಕೆ ಸಲ್ಲಿಸುತ್ತೇವೆ” ಎಂದರು.

ಬಿಬಿಎಂಪಿ ವಕೀಲರ ಸಬೂಬಿನಿಂದ ಕೆರಳಿದ ಪೀಠವು “ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದೆಯೋ, ಇಲ್ಲವೋ? ಮಳೆ ಆರಂಭವಾಗುತ್ತಿದೆ. ಏನನ್ನೂ ಮಾಡಲಾಗಿಲ್ಲ. ಅದೇ ಸ್ಥಿತಿಯಲ್ಲಿ ಇದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆ ನಡೆಸುವುದಿಲ್ಲ. ಆ ಬಳಿಕ ವಿಚಾರಣೆ ನಡೆಯಲಿದೆ ಎಂಬುದು ನಿಮಗೆ (ಬಿಬಿಎಂಪಿ) ತಿಳಿದಿದೆ. ನಾವು ನಿಮಗೆ ಸಾಕಷ್ಟು ಸಮಯ ನೀಡಿದ್ದೇವೆ. ನಿಮಗೆ ಕೆಲಸ ಆರಂಭಿಸುವ ಉದ್ದೇಶವಿಲ್ಲ. ಇದು ನಿಜಕ್ಕೂ ದುರದೃಷ್ಟಕರ ವಿಚಾರ. ನೀವು ನಿಮ್ಮ ಪ್ರಕಾರ ನಡೆದುಕೊಳ್ಳುತ್ತೀರಾ ಅಥವಾ ಅವರು (ಎಆರ್‌ಟಿಎಸ್‌) ಹೇಳಿದ ರೀತಿ ಕೇಳುತ್ತೀರಾ? ಇದು ವಿಪರೀತವಾಯಿತು. ರಸ್ತೆ ರಿಪೇರಿ ಮಾಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ. ಆದರೆ, ಒಂದಲ್ಲಾ ಒಂದು ಕಾರಣ ನೀಡಿ ನೀವು ರಸ್ತೆ ರಿಪೇರಿ ಕೆಲಸವನ್ನು ಮುಂದೂಡುತ್ತಿದ್ದೀರಿ” ಎಂದು ಬೇಸರಿಸಿತು.

ನ್ಯಾಯಮೂರ್ತಿ ಕೃಷ್ಣ ಕುಮಾರ್‌ “ಮೊದಲಿಗೆ ನೀವು (ಬಿಬಿಎಂಪಿ) ಸಂಚಾರ ದಟ್ಟಣೆಯನ್ನು ನಿಂದಿಸಿದಿರಿ, ಆನಂತರ ಮೂಲಸೌಕರ್ಯ, ಆಮೇಲೆ ಮಳೆಯನ್ನು ವರ್ಷಗಟ್ಟಲೇ ನಿಂದಿಸಿದಿರಿ, ಆಮೇಲೆ ರಸ್ತೆ ಅಗೆಯುವ ಏಜೆನ್ಸಿಗಳತ್ತ ಬೆರಳು ಮಾಡಿದಿರಿ. ಈಗ ಅವರತ್ತ (ಎಆರ್‌ಟಿಎಸ್‌) ಬೆರಳು ಮಾಡುತ್ತಿದ್ದೀರಿ. ಇನ್ನು ಯಾರೆಲ್ಲರತ್ತ ಬೆರಳು ಮಾಡುತ್ತೀರಿ. ಇನ್ನೂ ಯಾರತ್ತ ಜವಾಬ್ದಾರಿ ದೂಡುತ್ತಿದ್ದೀರಿ. ನಾಡಿದ್ದು, ಕೆಲಸ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ನೀವು ಕಾರ್ಯಾದೇಶ ನೀಡಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು” ಎಂದು ಖಡಕ್‌ ಆಗಿ ಎಚ್ಚರಿಸಿ, ಗುರುವಾರಕ್ಕೆ ವಿಚಾರಣೆ ಮುಂದೂಡಿದರು.

Also Read
[ರಸ್ತೆ ಗುಂಡಿ ಪ್ರಕರಣ] ಎಲ್ಲವನ್ನೂ ಹೇಳುತ್ತೀರಿ, ಏನನ್ನೂ ಮಾಡುವುದಿಲ್ಲ: ಬಿಬಿಎಂಪಿ ವಿರುದ್ಧ ಹೈಕೋರ್ಟ್‌ ಸಿಡಿಮಿಡಿ

ಕಳೆದ ವಿಚಾರಣೆಯಲ್ಲಿ “ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಬೇಕು. ಬಳಿಕ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಕಳೆದ ಬಾರಿ ನಿರ್ದೇಶಿಸಲಾಗಿತ್ತು. ಬಿಬಿಎಂಪಿ ಎಲ್ಲವನ್ನೂ ಹೇಳುತ್ತದೆ. ಆದರೆ, ಏನನ್ನೂ ಮಾಡುವುದಿಲ್ಲ. ಕಳೆದ ಬಾರಿಯ ಆದೇಶದಂತೆ ಸಿಬಿಡಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ನೀವು ಏನು ಮಾಡಿದ್ದೀರಿ?" ಎಂದು ಕಟುವಾಗಿ ಪ್ರಶ್ನಿಸಿತ್ತು.

ಬೆಂಗಳೂರಿನ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ರಸ್ತೆ ಅಗೆಯುವ ಕೆಲಸದಲ್ಲಿ ನಿರತವಾಗಿರುವ ಪ್ರತಿವಾದಿ ಸಂಸ್ಥೆಗಳು ಎಂಟೂ ವಲಯದಲ್ಲಿ ಜಂಟಿಯಾಗಿ ರಸ್ತೆ ಗುಂಡಿ ಪತ್ತೆ ಹಚ್ಚುವ ಕೆಲಸ ಮಾಡಬೇಕು. ಈ ಸಂಬಂಧ ಜಂಟಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಬಳಿಕ ಗುಂಡಿ ಮುಚ್ಚುವ ಕೆಲಸವನ್ನು ಎಆರ್‌ಟಿಎಸ್‌ ನಡೆಸಲಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿ ವಲಯದ ಮುಖ್ಯ ಎಂಜಿನಿಯರ್‌ಗಳು ರಸ್ತೆ ಗುಂಡಿ ಪತ್ತೆ, ಮುಚ್ಚುವ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸುವ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪೀಠವು ಆದೇಶದಲ್ಲಿ ಹೇಳಿದ್ದನ್ನು ಇಲ್ಲಿ ನೆನೆಯಬಹುದು.

Kannada Bar & Bench
kannada.barandbench.com