Arvind Kejriwal
Arvind Kejriwal 
ಸುದ್ದಿಗಳು

ಅಬಕಾರಿ ನೀತಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌

Bar & Bench

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಮನ್ಸ್‌ ಜಾರಿ ಮಾಡಿದರೂ ಅದನ್ನು ಅನುಪಾಲನೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿ ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಹೂಡಿರುವ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಆಪ್‌ ಮುಖಂಡನಿಗೆ ಶನಿವಾರ ಜಾಮೀನು ಮಂಜೂರು ಮಾಡಿದೆ.

ರೋಸ್‌ ಅವೆನ್ಯೂ ಕೋರ್ಟ್‌ನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ದಿವ್ಯಾ ಮಲ್ಹೋತ್ರಾ ಅವರ ಮುಂದೆ ಅರವಿಂದ್‌ ಕೇಜ್ರಿವಾಲ್‌ ಹಾಜರಾದರು. ನ್ಯಾಯಾಲಯದ ವಾರೆಂಟ್‌ಗೆ ಸಂಬಂಧಿಸಿದಂತೆ ₹15,000 ಮೌಲ್ಯದ ಬಾಂಡ್‌ ಮತ್ತು ಅಷ್ಟೇ ಮೊತ್ತದ ಭದ್ರತಾ ಖಾತರಿ ಒದಗಿಸುವ ಷರತ್ತುಗಳಿಗೆ ಒಳಪಟ್ಟು ನ್ಯಾಯಾಲಯವು ಕೇಜ್ರಿವಾಲ್‌ ಅವರಿಗೆ ಜಾಮೀನು ಮಂಜೂರು ಮಾಡಿತು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಸಮನ್ಸ್‌ ಜಾರಿ ಮಾಡಿದರೂ ಕೇಜ್ರಿವಾಲ್‌ ಅವರು ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯದ ಕದತಟ್ಟಿತ್ತು. ನ್ಯಾಯಾಲಯದ ಮುಂದೆ ಸಿಎಂ ಕೇಜ್ರಿವಾಲ್‌ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್‌ ಅವರಿಗೆ ವಾರೆಂಟ್‌ ಜಾರಿ ಮಾಡಿತ್ತು.

ಫೆಬ್ರವರಿ 17ರಂದು ಎಸಿಎಂಎಂ ನ್ಯಾಯಾಲಯದ ಪ್ರಕ್ರಿಯೆಗೆ ಸಿಎಂ ಕೇಜ್ರಿವಾಲ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದರು. ಅಲ್ಲದೇ, ಮಾರ್ಚ್‌ 16ರಂದು ಭೌತಿಕವಾಗಿ ಹಾಜರಾಗುವುದಾಗಿ ತಿಳಿಸಿದ್ದರು. ಆನಂತರ ಕೇಜ್ರಿವಾಲ್‌ ಅವರು ಎಸಿಎಂಎಂ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಶುಕ್ರವಾರ ಸತ್ರ ನ್ಯಾಯಾಲಯವು ವಜಾ ಮಾಡಿದ ಹಿನ್ನೆಲೆಯಲ್ಲಿ ಅವರು ಇಂದು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಿದ್ದರು.

ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಕೇಜ್ರಿವಾಲ್‌ ಅವರು ಜಾಮೀನು ಕೋರಿದರು. ಆಗ ಕೇಜ್ರಿವಾಲ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಮೇಶ್‌ ಗುಪ್ತಾ ಅವರು “ಕೇಜ್ರಿವಾಲ್‌ ಅವರ ಬಾಂಡ್‌ಗೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ಮಾಡಿದರೆ ಅವರು ಹೊರಡಬಹುದು” ಎಂದರು. ಇದಕ್ಕೆ ನ್ಯಾಯಾಲಯ ಸಮ್ಮತಿಸಿತು.

ಆನಂತರ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿರುವುದಕ್ಕೆ ಸಂಬಂಧಿಸಿದ ವಿಚಾರಣೆ ಆರಂಭವಾಯಿತು. ಗುಪ್ತಾ ಅವರು “ಯಾವ ಕಾರಣಕ್ಕಾಗಿ ಜಾರಿ ನಿರ್ದೇಶನಾಲಯ ಸಿಎಂ ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ನೀಡುತ್ತಿದೆ? ಅವರಿಗೆ ಕಾನೂನಿನ ರಕ್ಷಣೆ ಇದೆ ಎಂಬುದು ಗೊತ್ತು. ಕೆಲವು ದಾಖಲೆಗಳನ್ನು ಕೇಜ್ರಿವಾಲ್‌ ಅವರಿಗೆ ನೀಡಲಾಗಿಲ್ಲ” ಎಂದು ಇ ಡಿ ನಡೆಗೆ ಆಕ್ಷೇಪಿಸಿದರು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಕೇಜ್ರಿವಾಲ್‌ ಅವರು ಪ್ರಕ್ರಿಯೆ ವಿಳಂಬಿಸುತ್ತಿದ್ದಾರೆ. ಅವರಿಗೆ ನೀಡಬೇಕಾದ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ” ಎಂದರು.

ಅಂತಿಮವಾಗಿ ನ್ಯಾಯಾಲಯವು ದಾಖಲೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 207ರ ಅಡಿ ಕೇಜ್ರಿವಾಲ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಏಪ್ರಿಲ್‌ 1ಕ್ಕೆ ಮುಂದೂಡಿತು.