ಸುದ್ದಿಗಳು

[ಆರ್ಯನ್ ಖಾನ್ ಪ್ರಕರಣ] ಅಮಲು ಪದಾರ್ಥ ಪೂರೈಕೆ ಆರೋಪಿಗೆ ಜಾಮೀನು ಮಂಜೂರು ಮಾಡಿದ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯ

Bar & Bench

ಐಷಾರಾಮಿ ಹಡಗು ಮಾದಕವಸ್ತು ಪ್ರಕರಣದ ಸಹ ಆರೋಪಿ ಅರ್ಬಾಜ್‌ ಮರ್ಚೆಂಟ್‌ಗೆ ಅಮಲು ಪದಾರ್ಥ ಪೂರೈಕೆ ಮಾಡುತ್ತಿದ್ದ ಎನ್ನಲಾದ ಶಿವರಾಜ್ ರಾಮದಾಸ್ ಹರಿಜನ್‌ಗೆ ಇತ್ತೀಚೆಗೆ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹರಿಜನನನ್ನು ಅಕ್ಟೋಬರ್ 10, 2021 ರಂದು ಬಂಧಿಸಲಾಗಿತ್ತು. ಒಂದು ದಿನದ ಮಟ್ಟಿಗೆ ಪೊಲೀಸ್‌ ವಶದಲ್ಲಿದ್ದ ಆತನಿಗೆ ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ನ ಸ್ನೇಹಿತನಾದ ಅರ್ಬಾಜ್‌ ಮರ್ಚೆಂಟ್‌ಗೆ ಹರಿಜನ್‌ ಮಾದಕವಸ್ತು ಪೂರೈಸುತ್ತಿದ್ದ ಎಂದು ಆರೋಪಿಸಲಾಗಿತ್ತು.

ಆದರೆ ಎನ್‌ಸಿಬಿ ಈ ನಿಟ್ಟಿನಲ್ಲಿ ಯಾವುದೇ ʼಸಮಗ್ರ ಸಾಕ್ಷ್ಯʼ ದಾಖಲಿಸಲು ವಿಫಲವಾಗಿದೆ. ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್ 67 ರ ಅಡಿಯಲ್ಲಿ ಮರ್ಚೆಂಟ್ ನೀಡಿದ್ದ ಹೇಳಿಕೆಯನ್ನು ಕೂಡ ಹಿಂತೆಗೆದುಕೊಳ್ಳಲಾಗಿದೆ. ಪ್ರಾಸಿಕ್ಯೂಷನ್ ಆರೋಪಿಸಿದಂತೆ ಅರ್ಜಿದಾರರು ಅಪರಾಧ ಎಸಗಿದ್ದಾರೆಂದು ತೋರಿಸಲು ಯಾವುದೇ ಪ್ರಾಥಮಿಕ ಸಾಕ್ಷ್ಯಗಳು ದಾಖಲೆಯಲ್ಲಿ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಆದ್ದರಿಂದ, ಹರಿಜನ್‌ ಒಬ್ಬ ಮಾದಕವಸ್ತು ದಂದೆಕೋರನಾಗಿದ್ದು ಮರ್ಚೆಂಟ್‌ಗೆ ನಿಷಿದ್ಧ ವಸ್ತುಗಳನ್ನು ಸರಬರಾಜು ಮಾಡಿದ್ದಾನೆ ಎಂಬ ಎನ್‌ಸಿಬಿ ವಾದವನ್ನು ಒಪ್ಪಿಕೊಳ್ಳಲಾಗದು. ಅಲ್ಲದೆ ಹರಿಜನ್‌ ಮುಂಬೈನ ಖಾಯಂ ನಿವಾಸಿಯಾಗಿದ್ದು, ಆತನಿಗೆ ಯಾವುದೇ ಕ್ರಿಮನಲ್‌ ಹಿನ್ನೆಲೆಗಳಿಲ್ಲ. ಎಂದು ವಿಶೇಷ ನ್ಯಾಯಾಧೀಶ ವಿವಿ ಪಾಟೀಲ್ ತಿಳಿಸಿದರು. ಪ್ರಕರಣದ ಇತರ 15 ಆರೋಪಿಗಳಿಗೆ ವಿಧಿಸಿದ ರೀತಿಯ ಷರತ್ತುಗಳೊಂದಿಗೆ, ನ್ಯಾಯಾಧೀಶರು ಪ್ರಕರಣದ 16 ನೇ ಆರೋಪಿಯಾದ ಹರಿಜನ್‌ಗೆ ಕೂಡ ಜಾಮೀನು ಮಂಜೂರು ಮಾಡಿದರು.