ಆರ್ಯನ್‌ ಖಾನ್‌ ಪ್ರಕರಣ: ಮುಖ್ಯ ತನಿಖಾಧಿಕಾರಿ ಹುದ್ದೆಯಿಂದ ಸಮೀರ್‌ ವಾಂಖೆಡೆ ವರ್ಗಾವಣೆ

ಆರ್ಯನ್‌ ಖಾನ್‌ ಪ್ರಕರಣವಲ್ಲದೇ ವಾಂಖೆಡೆ ತನಿಖೆ ನಡೆಸುತ್ತಿದ್ದ ಇತರೆ ಆರು ಪ್ರಕರಣಗಳನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವರ್ಗಾವಣೆ ಮಾಡಲಾಗಿದೆ.
Sameer Wankhede
Sameer Wankhede

ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಪ್ರಮುಖ ಆರೋಪಿಯಾಗಿರುವ ವಿಲಾಸಿ ಹಡಗಿನಲ್ಲಿ ಮಾದಕ ವಸ್ತುಗಳ ಪತ್ತೆ ಪ್ರಕರಣದಲ್ಲಿ ಮುಖ್ಯ ತನಿಖಾಧಿಖಾರಿಯಾಗಿದ್ದ ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಆರ್ಯನ್‌ ಖಾನ್‌ ಪ್ರಕರಣವಲ್ಲದೇ ವಾಂಖೆಡೆ ತನಿಖೆ ನಡೆಸುತ್ತಿದ್ದ ಇತರೆ ಆರು ಪ್ರಕರಣಗಳನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವರ್ಗಾವಣೆ ಮಾಡಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಉಂಟು ಮಾಡಬಹುದಾದ ಆರು ಪ್ರಕರಣಗಳ ವಿಚಾರಣೆ ನಡೆಸಲು ಎನ್‌ಸಿಬಿಯ ಕಾರ್ಯಾಚರಣಾ ವಿಭಾಗದ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲಾಗಿದೆ. ಆದರೆ, ಪ್ರಕರಣದಿಂದ ಯಾವುದೇ ಅಧಿಕಾರಿಯನ್ನು ತೆಗೆದುಹಾಕಲಾಗಿಲ್ಲ ಎಂದು ಎನ್‌ಸಿಬಿಯ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

“ಯಾವುದೇ ಅಧಿಕಾರಿ ಅಥವಾ ಅಧಿಕಾರಿಗಳನ್ನು ಅವರ ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸದಿಂದ ತೆಗೆದುಹಾಕಲಾಗಿಲ್ಲ. ನಿರ್ದಿಷ್ಟ ಆದೇಶಗಳನ್ನು ಹೊರಡಿಸುವವರೆಗೆ ಅವರು ಕಾರ್ಯಾಚರಣಾ ಘಟಕದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ” ಎಂದು ಎನ್‌ಸಿಬಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆರ್ಯನ್‌ ಖಾನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಖೆಡೆ ಸುತ್ತ ಸುಲಿಗೆ ಮತ್ತು ಭ್ರಷ್ಟಾಚಾರ ಆರೋಪಗಳು ಸುತ್ತಿಕೊಂಡಿವೆ. ಆರ್ಯನ್‌ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಯಾದ ಪ್ರಭಾಕರ್‌ ಸೈಲ್‌ ಅವರು ಅಫಿಡವಿಟ್‌ನಲ್ಲಿ ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿಯು ಖಾಲಿ ಪಂಚನಾಮೆಯಲ್ಲಿ ಸಹಿ ಮಾಡುವಂತೆ ಹೇಳಿತ್ತು ಎಂದು ಆಪಾದಿಸಿದ್ದರು. ಇದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿತ್ತು. ಆರ್ಯನ್‌ ಖಾನ್‌ ಪ್ರಕರಣಕ್ಕೆ ಇತಿಶ್ರೀ ಹಾಡಲು ₹25 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದೂ ಸೈಲ್‌ ಅಫಿಡವಿಟ್‌ನಲ್ಲಿ ಆರೋಪಿಸಿದ್ದರು.

Also Read
ನವಾಬ್‌ ಮಲಿಕ್‌ ಟೀಕೆಗಳು ಎನ್‌ಸಿಬಿ ಮತ್ತು ವಾಂಖೆಡೆ ಅವರ ಸ್ಥೈರ್ಯಗೆಡಿಸಬಹುದು: ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್

ಸಮೀರ್‌ ವಾಂಖೆಡೆ ಅವರು ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಸರ್ಕಾರಿ ಕೆಲಸ ಪಡೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕ ನವಾಬ್‌ ಮಲಿಕ್‌ ಆರೋಪಿಸಿದ್ದರು. ಮುಸ್ಲಿಮ್‌ ಸಮುದಾಯಕ್ಕೆ ಸೇರಿದ ವಾಂಖೆಡೆ ಅವರು ಪರಿಶಿಷ್ಟ ಜಾತಿ ವಿಭಾಗದಲ್ಲಿ ಭಾರತೀಯ ಕಂದಾಯ ಸೇವೆಯಲ್ಲಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಮಲಿಕ್‌ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ತಮ್ಮ ವಾದದ ಸಮರ್ಥನೆಗೆ ಮಲಿಕ್‌ ಅವರು ವಾಂಖೆಡೆಯ ಜನ್ಮ ಮತ್ತು ವಿವಾಹ ಪ್ರಮಾಣ ಪತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು.

ಈ ಮಧ್ಯೆ, ವಾಂಖೆಡೆ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಭೀಮ್‌ ಆರ್ಮಿ ಮತ್ತು ಸ್ವಾಭಿಮಾನಿ ರಿಪಬ್ಲಿಕನ್‌ ಪಕ್ಷ ಎಂಬ ಎರಡು ದಲಿತ ಸಂಘಟನೆಗಳು ದೂರು ಸಲ್ಲಿಸಿವೆ.

Related Stories

No stories found.
Kannada Bar & Bench
kannada.barandbench.com